ADVERTISEMENT

‘ಉದಯರವಿ’ ಮಾರಲ್ಲ, ನಾವೇ ಮ್ಯೂಸಿಯಂ ಮಾಡ್ತೀವಿ: ಕುವೆಂಪು ಕುಟುಂಬ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 13:29 IST
Last Updated 11 ಫೆಬ್ರುವರಿ 2026, 13:29 IST
<div class="paragraphs"><p>ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಕುವೆಂಪು ಮನೆ ‘ಉದಯರವಿ’</p></div>

ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಕುವೆಂಪು ಮನೆ ‘ಉದಯರವಿ’

   

ಮೈಸೂರು: ‘ಮೈಸೂರಿನಲ್ಲಿರುವ, ರಾಷ್ಟ್ರಕವಿ ಕುವೆಂಪು ಅವರ ‘ಉದಯರವಿ’ ಮನೆಯನ್ನು ಮಾರುವ ಅಥವಾ ಸರ್ಕಾರಕ್ಕೆ ಹಸ್ತಾಂತರಿಸುವ ಉದ್ದೇಶ ನಮ್ಮ ಮುಂದಿಲ್ಲ. ನಾವೇ ವಸ್ತುಸಂಗ್ರಹಾಲಯವನ್ನಾಗಿ ರೂಪಿಸುತ್ತೇವೆ’ ಎಂದು ಕುಟುಂಬ ತಿಳಿಸಿದೆ.

‘ಕುವೆಂಪು ಅವರು 60 ವರ್ಷ ಬಾಳಿದ ಹಾಗೂ ಅವರ ಬಹುತೇಕ ಕೃತಿಗಳು ರಚನೆಯಾದ ಸ್ಥಳವೇ ಈ ಮನೆ. ಅದನ್ನೂ ವಸ್ತುಸಂಗ್ರಹಾಲಯವನ್ನಾಗಿ ಮಾಡಬೇಕೆಂಬ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಕೆಲವು ವರ್ಷಗಳ ಹಿಂದೆ ಸರ್ಕಾರದಿಂದ ಪ್ರಯತ್ನ ನಡೆಯಿತಾದರೂ ಕಾರಣಾಂತರಗಳಿಂದ ಅದು ಕಾರ್ಯಗತವಾಗಲಿಲ್ಲ’ ಎಂದು ಹೇಳಿದೆ.

ADVERTISEMENT

‘ಆದರೆ, ಉದಯರವಿ ನೋಡಲು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕನ್ನಡಿಗರ ಬಯಕೆಯಂತೆ, ನಾವೇ ಮ್ಯೂಸಿಯಂ ಆಗಿಸಲು ನಿರ್ಧರಿಸಿ ಕಾರ್ಯೋನ್ಮುಖರಾಗಿದ್ದೇವೆ. ಈ ಮನೆಯ ಅತ್ಯಂತ ಅಗತ್ಯವಾದ ದುರಸ್ತಿ ಕೆಲಸವನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಮ್ಯೂಸಿಯಂ ಹೇಗಿರಬೇಕೆಂಬ ರೂಪರೇಷೆ ಕೂಡ ನಿರ್ಧರಿಸಲಾಗುತ್ತಿದೆ. ಬಳಿಕ, ಮೂಲಸ್ವರೂಪ ಉಳಿಸಿಕೊಂಡೇ ಮ್ಯೂಸಿಯಂ ಅನ್ನು ಅತ್ಯುನ್ನತವಾಗಿ ರೂಪಿಸಿ, ಮುಂದಿನ ತಲೆಮಾರಿಗೆ ಕುವೆಂಪು ಅವರ ಜೀವನ, ಸಾಹಿತ್ಯ ಹಾಗೂ ಚಿಂತನೆಗಳನ್ನು ಪರಿಚಯಿಸುವ ಜವಾಬ್ದಾರಿ ನಮ್ಮದಾಗಿದೆ’ ಎಂದು ತಿಳಿಸಿದೆ.

‘ಈ ಸಂಗತಿಯನ್ನೆಲ್ಲಾ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಅವರು ಮನೆಗೆ ಭೇಟಿ ನೀಡಿದ್ದಾಗ ಗಮನಕ್ಕೆ ತಂದಿದ್ದೇವೆ. ‘ಈ ವಿಚಾರ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ. ನೀವು ಸಹಕರಿಸಿ’ ಎಂದು ಸಚಿವರು ಹೇಳಿದ್ದರು. ನಾವೇ ಮ್ಯೂಸಿಯಂ ಮಾಡುವುದರಿಂದ ‘ಉದಯರವಿ’ಯನ್ನು ಮಾರುವ ಉದ್ದೇಶವೇ ನಮಗಿಲ್ಲ. ಹೀಗಿರುವಾಗ, ಹಣಕಾಸಿನ ವಿಷಯ ಇಲ್ಲಿ ಅಪ್ರಸ್ತುತ’ ಎಂದು ಹೇಳಿದೆ.

‘ಈ ವಿಚಾರದಲ್ಲಿ, ಸತ್ಯಕ್ಕೆ ದೂರವಾದ ಹಾಗೂ ಗೊಂದಲಕಾರಿಯಾದ ಕೆಲವು ವಿಚಾರಗಳು ಮಾಧ್ಯಮದಲ್ಲಿ ಪ್ರಕಟವಾಗಿರುವದು ಕುಟುಂಬದವರಿಗೆ ನೋವುಂಟು ಮಾಡಿದೆ. ಹೀಗಾಗಿ, ಈ ಸ್ಪಷ್ಟನೆ ನೀಡುತ್ತಿದ್ದೇವೆ’ ಎಂದು ಅಳಿಯ ಚಿದಾನಂದ ಕೆ.ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.