ADVERTISEMENT

ಲಾಕ್‌ಡೌನ್‌ ಮುಂದುವರಿಕೆ ಅನಿವಾರ್ಯ: ಶ್ರೀರಾಮುಲು

‘ರೆಡ್‌ ಜೋನ್‌’ ಘೋಷಣೆಯಾದ ಜಿಲ್ಲೆಗಳಲ್ಲಿ ನಿರ್ಬಂಧ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 16:47 IST
Last Updated 8 ಏಪ್ರಿಲ್ 2020, 16:47 IST
ಶ್ರೀರಾಮುಲು
ಶ್ರೀರಾಮುಲು   

ಮೈಸೂರು: ಕೋವಿಡ್‌ 19 ಪ್ರಕರಣಗಳು ದೃಢಪಟ್ಟ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿಸಬೇಕೇ ಎಂಬುದನ್ನು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆಗಿನ ಸಭೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಕೋವಿಡ್‌ 19 ಪ್ರಕರಣಗಳು ಹೆಚ್ಚು ವರದಿಯಾಗಿರುವ ಕಾರಣ ಮೈಸೂರು ಒಳಗೊಂಡಂತೆ ಕೆಲವು ಜಿಲ್ಲೆಗಳನ್ನು ‘ರೆಡ್‌ ಜೋನ್‌’ ಎಂದು ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರಬೇಕಿದೆ. ಆದ್ದರಿಂದ ಲಾಕ್‌ಡೌನ್‌ ಮುಂದುವರಿಸುವುದು ಅನಿವಾರ್ಯ ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆ ಮುಖ್ಯಮಂತ್ರಿ ಜತೆ ಗುರುವಾರ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ ಬುಧವಾರ ಮಧ್ಯಾಹ್ನದವರೆಗೆ ಒಟ್ಟು 181 ಪ್ರಕರಣ ದೃಢಪಟ್ಟಿವೆ. ಅದರಲ್ಲಿ 28 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು.

‘ಮೈಸೂರು ಜಿಲ್ಲೆಯಲ್ಲಿರುವ ಬುಡಕಟ್ಟು ಸಮುದಾಯದವರಿಗೆ ಉಚಿತವಾಗಿ ಹಾಲು ಪೂರೈಸಲು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ’ ಎಂದು ಹೇಳಿದರು.

‘ವೈದ್ಯರು, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಸಿಬ್ಬಂದಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಒಳಗೊಂಡಂತೆ ಹಲವರು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.