ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆದಿರುವ ‘ಮಹಾರಾಜ ಟ್ರೋಫಿ’ ಟ್ವೆಂಟಿ20 ಟೂರ್ನಿಯಲ್ಲಿ ಸ್ಥಳೀಯ ಪ್ರತಿಭೆಗಳು ಬೆಳಗುತ್ತಿವೆ.
ಕ್ರಿಕೆಟ್‌ನ ಚುಟುಕು ಮಾದರಿಯಲ್ಲಿ ನಡೆದಿರುವ ಟೂರ್ನಿಯ ನಾಲ್ಕನೇ ಆವೃತ್ತಿ ಇದಾಗಿದ್ದು, ಮೈಸೂರು ಹಾಗೂ ಮೈಸೂರು ವಲಯದ ವಿವಿಧ ಜಿಲ್ಲೆಗಳ ಆಟಗಾರರ ದಂಡೇ ಇದೆ. ಬಹುತೇಕ ತಂಡಗಳಲ್ಲಿ ಇಲ್ಲಿನ ಆಟಗಾರರು ಆಡುತ್ತಿದ್ದು, ಉತ್ತಮ ಪ್ರದರ್ಶನ ಮೂಡಿಬರುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲೂ ಅನೇಕರು ಗಮನ ಸೆಳೆಯುತ್ತಿದ್ದಾರೆ.
ಕಳೆದ ಬಾರಿಯ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡದಲ್ಲಿ ಸ್ಥಳೀಯ ಆಟಗಾರರ ದಂಡೇ ಇದೆ. ಎಸ್.ಯು.ಕಾರ್ತಿಕ್, ಎಂ.ವೆಂಕಟೇಶ್, ಕೆ.ಎಸ್.ಲಂಕೇಶ್ ಜೊತೆಗೆ ಎಲ್.ಆರ್.ಕುಮಾರ್, ಗೌತಮ್ ಸಾಗರ್ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಆಲ್‌ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ.
ವಾರಿಯರ್ಸ್ ಪರ ಎಂ.ವೆಂಕಟೇಶ್ 7 ಪಂದ್ಯಗಳಲ್ಲಿ 211 ರನ್ ಬಾರಿಸಿದ್ದು, 1 ವಿಕೆಟ್ ಉರುಳಿಸಿದ್ದಾರೆ. 16 ಬೌಂಡರಿ, 9 ಸಿಕ್ಸರ್ ಇದರಲ್ಲಿ ಸೇರಿವೆ. ಆರಂಭಿಕ ಬ್ಯಾಟರ್ ಆಗಿ ಕಣಕ್ಕೆ ಇಳಿಯುತ್ತಿರುವ ಎಸ್.ಯು. ಕಾರ್ತಿಕ್ 166 ರನ್ ಜತೆಗೆ 4 ವಿಕೆಟ್ ಪಡೆದಿದ್ದಾರೆ. ಎರಡು ಅರ್ಧಶತಕ ಸಿಡಿಸಿದ್ದಾರೆ. ಲಂಕೇಶ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದು, 80 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಎಲ್.ಆರ್.ಕುಮಾರ್ 4 ವಿಕೆಟ್ ಪಡೆದಿದ್ದಾರೆ.
ಬ್ಲಾಸ್ಟರ್ಸ್‌ನಲ್ಲಿ ಚೇತನ್, ನವೀನ್:
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡದಲ್ಲಿ ಮೈಸೂರಿನ ಇಬ್ಬರು ಸ್ಥಾನ ಪಡೆದಿದ್ದಾರೆ. ಅದರಲ್ಲೂ ಮೈಸೂರಿನ ಬ್ಯಾಟರ್ ಎಲ್.ಆರ್.ಚೇತನ್ ತಂಡದ ಪರ ಅಬ್ಬರಿಸುತ್ತಿದ್ದಾರೆ. 8 ಪಂದ್ಯಗಳಲ್ಲಿ 229 ರನ್ ಗಳಿಸಿದ್ದು, 20 ಬೌಂಡರಿ, 14 ಸಿಕ್ಸರ್ ಸಿಡಿಸಿದ್ದಾರೆ. ಈವರೆಗೆ ಎರಡು ಅರ್ಧಶತಕ ದಾಖಲಿಸಿದ್ದಾರೆ.
ಮಂಡ್ಯ ಹುಡುಗ ಎಂ.ಜಿ. ನವೀನ್ ಆಲ್‌ರೌಂಡ್ ಪ್ರದರ್ಶನ ನೀಡಿದ್ದು, 11 ವಿಕೆಟ್ ಜೊತೆಗೆ 85 ರನ್‌ಗಳ ಉಪಯುಕ್ತ ಕಾಣಿಕೆಯೂ ಬಂದಿದೆ.
ನಿಕಿನ್, ಮನ್ವಂತ್ ಆಕರ್ಷಣೆ:
ಗುಲ್ಬರ್ಗ ಮಿಸ್ಟಿಕ್ಸ್ ಪರ ರಣಜಿ ಆಟಗಾರ ನಿಕಿನ್ ಜೋಸ್ ಕಣಕ್ಕೆ ಇಳಿದಿದ್ದು, 7 ಪಂದ್ಯಗಳಲ್ಲಿ 163 ರನ್ ಕಲೆಹಾಕಿದ್ದಾರೆ. ಒಂದು ಅರ್ಧಶತಕವೂ ಬಂದಿದೆ.
ಹುಬ್ಬಳ್ಳಿ ಟೈಗರ್ಸ್ ಪರ ಐಪಿಎಲ್ ಆಟಗಾರ ಎಲ್. ಮನ್ವಂತ್ ಕುಮಾರ್ 8 ಪಂದ್ಯದಲ್ಲಿ 67 ರನ್ ಜೊತೆಗೆ 4 ವಿಕೆಟ್ ಸಹ ಪಡೆದಿದ್ದಾರೆ. ಕೊಡಗಿನ ಕೆ.ಸಿ.ಕಾರ್ಯಪ್ಪ ಸಹ ಹುಬ್ಬಳ್ಳಿ ತಂಡದಲ್ಲಿದ್ದು, ಸ್ಪಿನ್ ಮೋಡಿ ಮಾಡುತ್ತಿದ್ದರೆ, 7 ಪಂದ್ಯದಲ್ಲಿ 11 ವಿಕೆಟ್ ಪಡೆದಿದ್ದಾರೆ.
ಶಿವಮೊಗ್ಗ ಲಯನ್ಸ್ ತಂಡದ ಪರ ವಿದ್ವತ್ ಕಾವೇರಪ್ಪ 8 ಪಂದ್ಯದಲ್ಲಿ 6 ವಿಕೆಟ್ ಪಡೆದಿದ್ದಾರೆ. ಮೈಸೂರಿನ ಎಂ.ಬಿ.ದರ್ಶನ್ ಕೂಡ ಇದೇ ತಂಡದಲ್ಲಿದ್ದು, 4 ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.