ADVERTISEMENT

ಮೈಸೂರು: ರಂಗದ ಮೇಲೆ ಮಹದೇಶ್ವರರ ಕಥನ

ಐತಿಹಾಸಿಕ ಹಿನ್ನೆಲೆಯಲ್ಲಿ ನಾಟಕ ಕಟ್ಟಿಕೊಡುವ ಪ್ರಯತ್ನ

ಆರ್.ಜಿತೇಂದ್ರ
Published 3 ಫೆಬ್ರುವರಿ 2026, 3:00 IST
Last Updated 3 ಫೆಬ್ರುವರಿ 2026, 3:00 IST
<div class="paragraphs"><p>ರಂಗತಾಲೀಮಿನಲ್ಲಿ ನಿರತರಾದ ‘ಅನಿಕೇತನ’ ಶಿಬಿರಾರ್ಥಿಗಳು</p></div>

ರಂಗತಾಲೀಮಿನಲ್ಲಿ ನಿರತರಾದ ‘ಅನಿಕೇತನ’ ಶಿಬಿರಾರ್ಥಿಗಳು

   
ಎರಡು ಗಂಟೆ ಅವಧಿಯ ಸಂಗೀತ ಪ್ರದಾನ ನಾಟಕ | ಹಳೇ ಮೈಸೂರು ಸೀಮೆಯ ಜಾನಪದ ಸೊಗಡು | 30ಕ್ಕೂ ಹೆಚ್ಚು ಹಾಡುಗಳಿವೆ

ಮೈಸೂರು: ನಾಡಿನ ಪವಾಡ ಪುರುಷರಲ್ಲಿ ಒಬ್ಬರಾದ ಮಲೆ ಮಹದೇಶ್ವರರನ್ನು ಐತಿಹಾಸಿಕ ನೆಲೆಗಟ್ಟಿನಲ್ಲಿ ಕಟ್ಟಿಕೊಡುವ ವಿಶಿಷ್ಟ ರಂಗಪ್ರಯೋಗಕ್ಕೆ ತಾಲೀಮು ನಡೆದಿದ್ದು, ಸದ್ಯದಲ್ಲೇ ರಂಗಾಸಕ್ತರನ್ನು ರಂಜಿಸಲಿದೆ.

ನಗರದ ನಾಲ್ವಡಿ ಸೋಷಿಯಲ್‌, ಕಲ್ಚರಲ್‌ ಮತ್ತು ಎಜ್ಯುಕೇಷನಲ್‌ ಟ್ರಸ್ಟ್‌ ‘ಅನಿಕೇತನ’ ಶಿಬಿರದ ಮೂಲಕ ನಾಡಿನ ರಂಗಾಸಕ್ತರಿಗೆ ಪ್ರತಿ ವರ್ಷ ತರಬೇತಿ ನೀಡಿ ಹೊಸತೊಂದು ನಾಟಕವನ್ನು ರಂಗಕ್ಕೆ ತರುತ್ತಿದೆ. ಈ ವರ್ಷ ಮಲೆ ಮಹದೇಶ್ವರರ ಬದುಕು ನಾಟಕವಾಗುತ್ತಿದೆ.

ADVERTISEMENT

‘ಶ್ರೀಶೈಲದಿಂದ ಬಂದು ಚಾಮರಾಜನಗರದ ಏಳು ಮಲೆಗಳ ನಡುವೆ ಕಾಡಿನಲ್ಲಿ ನೆಲೆಸಿದ ಮಹದೇಶ್ವರರು ಪವಾಡ ಪುರುಷರ ಜೊತೆಗೆ ಸಮಾಜವನ್ನು ತಿದ್ದಿತೀಡಿದ ಸಂತರೂ ಹೌದು. ನಮಗೆಲ್ಲ ಅವರ ಪವಾಡಗಳು ಗೊತ್ತು. ಆದರೆ ಅವರ ಸಾಮಾಜಿಕ ಸುಧಾರಣೆಗಳ ಅರಿವು ಕಡಿಮೆ. ನಮ್ಮ ನಾಟಕ ಅಂತಹದ್ದೊಂದು ಅರಿವಿನ ಬಾಗಿಲು ತೆರೆಯುವ ಪ್ರಯತ್ನ ಮಾಡಲಿದೆ’ ಎನ್ನುತ್ತಾರೆ ನಾಟಕದ ನಿರ್ದೇಶಕರೂ ಆದ ಟ್ರಸ್ಟ್‌ ಅಧ್ಯಕ್ಷ ದಿನೇಶ್ ಚಮ್ಮಾಳಿಗೆ.

‘ಮಹದೇಶ್ವರರು ಈ ನಾಡನ್ನು ಜಾತ್ಯತೀತವಾಗಿ ಕಟ್ಟಿದ ಇತಿಹಾಸ ಪುರುಷ. ತಮ್ಮ ಪವಾಡಗಳ ಮೂಲಕ ದೇವರ ರೂಪ ಪಡೆದ ಅವರಿಗೆ ಮಾತ್ರ ಎಲ್ಲ ಜಾತಿಯಿಂದಲೂ ಗುಡ್ಡರಿದ್ದಾರೆ. ಅಂತಹವರ ಬಗ್ಗೆ ಕನ್ನಡದಲ್ಲಿ ನಾಟಕಗಳು ಬಂದದ್ದು ಅಪರೂಪ. ದಶಕಗಳ ಹಿಂದೆ ಎಚ್‌.ಎಸ್. ಶಿವಪ್ರಕಾಶರು ಬರೆದ ‘ಮಾದಾರಿ ಮಾದಯ್ಯ’ ಇಂದಿಗೂ ಸಾಕಷ್ಟು ಕಡೆ ರಂಗಪ್ರಯೋಗವಾಗುತ್ತಿದೆ. ಮತ್ತೊಂದು ದೃಷ್ಟಿಕೋನದ ನಾಟಕ ಇದಾಗಲಿದೆ’ ಎನ್ನುತ್ತಾರೆ ಅವರು.

ಎರಡು ಗಂಟೆ ಅವಧಿಯ ಸಂಗೀತ ಪ್ರದಾನ ನಾಟಕ ಇದಾಗಿದೆ. ಹಳೇ ಮೈಸೂರು ಸೀಮೆಯ ಜಾನಪದ ಸೊಗಡು ಕಣ್ಮುಂದೆ ಬರಲಿದ್ದು, 30ಕ್ಕೂ ಹೆಚ್ಚು ಹಾಡುಗಳಿವೆ. ಡೊಳ್ಳು, ಕಂಸಾಳೆ, ಪೂಜಾ ಕುಣಿತವೂ ಇರಲಿದೆ. 35ಕ್ಕೂ ಹೆಚ್ಚು ಕಲಾವಿದರು ಅಭಿನಯಿಸುತ್ತಿದ್ದು, ಅವರೇ ಹಾಡುವ–ಕುಣಿಯುವ ಕೆಲಸವನ್ನೂ ಮಾಡಲಿದ್ದಾರೆ. ಮಹದೇಶ್ವರರ ಜೊತೆಗೆ ಹತ್ತಾರು ಪಾತ್ರಗಳು ರಂಗದ ಮೇಲೆ ಬರಲಿವೆ.

ಮಹದೇಶ್ವರರ ಕುರಿತ ಐತಿಹ್ಯಗಳ ಮೂಲ ಕಥೆಗಳನ್ನು ಮೈಸೂರು ಗುರುರಾಜ್‌ ಅವರಿಂದ ಪಡೆಯಲಾಗಿದೆ. ‘ಅನ್ನ’ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದ ಮೈಸೂರಿನ ಬೆಳವಾಡಿಯವರಾದ ಸಿದ್ದು ಪ್ರಸನ್ನ ಈ ನಾಟಕಕ್ಕೆ ಸಂಭಾಷಣೆ ಬರೆದಿದ್ದಾರೆ. ದಿನೇಶ್ ಚಮ್ಮಾಳಿಗೆ ನಿರ್ದೇಶನದ ಜೊತೆಗೆ ರಂಗಸಜ್ಜಿಕೆ, ವಸ್ತ್ರವಿನ್ಯಾಸದ ಕಾರ್ಯವನ್ನೂ ಮಾಡಲಿದ್ದಾರೆ. ಎಂ.ಸಿ. ಅರುಣ್ ಸಂಗೀತ ಹಾಗೂ ಕೃಷ್ಣಕುಮಾರ್ ನಾರ್ಣಕಜೆ ಬೆಳಕಿನ ವಿನ್ಯಾಸ ಮಾಡುತ್ತಿದ್ದಾರೆ.

ಮೂರನೇ ಪ್ರಯೋಗ

‘ಅನಿಕೇತನ’ ಶಿಬಿರದ ಮೂರನೇ ಆವೃತ್ತಿ ಇದಾಗಿದ್ದು ಪ್ರತಿ ವರ್ಷವೂ ಶಿಬಿರದ ಜೊತೆಗೆ ಹೊಸತೊಂದು ನಾಟಕ ಬರೆದು ಪ್ರಯೋಗಿಸಲಾಗುತ್ತಿದೆ. ಕಳೆದ ವರ್ಷ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕುರಿತ ‘ಆಳಿದ ಮಾಸ್ವಾಮಿಗಳು’ ನಾಟಕ ಗಮನ ಸೆಳೆದಿದ್ದು ಇಂದಿಗೂ ಅಲ್ಲಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಬಾರಿಯ ಶಿಬಿರವು ಎರಡು ತಿಂಗಳ ಕಾಲ ನಡೆದಿದ್ದು 30ಕ್ಕೂ ಹೆಚ್ಚು ಕಲಾವಿದರು ರಂಗಕರ್ಮಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಅಭಿನಯ ಹಾಗೂ ವ್ಯಕ್ತಿತ್ವ ವಿಕಸನದ ಪಾಠ ಹೇಳಿದ್ದಾರೆ. ಶಿಬಿರದ ಅಂತಿಮ ರೂಪವಾಗಿ ಮಹದೇಶ್ವರರ ಕುರಿತ ನಾಟಕ ಪ್ರದರ್ಶನಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.