ಮೈಸೂರು: ‘ಸುವರ್ಣ ಕರ್ನಾಟಕ ಸಂಭ್ರಮ ನಾಡಿನ ಚಾರಿತ್ರಿಕ ಸನ್ನಿವೇಶವಾಗಿದೆ. ಇದು ಕೇವಲ ಸರ್ಕಾರಿ ಉತ್ಸವವಾಗದೇ ಜನರ ಉತ್ಸವ ಆಗಬೇಕು’ ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಆಶಿಸಿದರು.
ನಗರದ ಕಲಾಂದಿಕಾ ಭವನದಲ್ಲಿ ಗುರುವಾರ ಕನ್ನಡ ಬೆಳಕು ‘ಸುವರ್ಣ ಕರ್ನಾಟಕ ಸಂಭ್ರಮ-50’ ಸಂಸ್ಮರಣಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರು ದಸರಾವನ್ನು ನಾಡಹಬ್ಬವೆಂದು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ನಮ್ಮ ಪರಂಪರೆಯ ಜತೆ ಕೊಂಡಿಯನ್ನು ಬೆಸೆದಿದೆ. ಇದೇ ರೀತಿ ನಮ್ಮ ಕನ್ನಡ ಏಕೀಕರಣದ ಆಚರಣೆಯೂ ಆಗಬೇಕು ಎಂದರು.
‘ಪ್ರಸ್ತುತ ದಿನದಲ್ಲಿ ಹೋರಾಟಗಳಿಗೆ ಕಾಲವಲ್ಲ. ಯಾರು ಹೋರಾಟ ಮಾಡುತ್ತಾರೋ ಅವರ ಮನೆಯ ಮುಂದೆ ಜೆಸಿಬಿಗಳು, ಬುಲ್ಡೋಜರ್‌ಗಳು ಬಂದು ನಿಂತಿರುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾದ-ವಾಗ್ವಾದ, ಸಂವಾದಗಳು, ಆರೋಗ್ಯಕರ ಚರ್ಚೆಗಳು ನಡೆಯಲು ಮುಕ್ತವಾದ ವಾತಾವರಣವಿರಬೇಕು. ಸ್ವಾತಂತ್ರ ನಾಡನ್ನು ಕಟ್ಟಲು ಸುರಿದ ಬೆವರಿನ ಮೌಲ್ಯವನ್ನು ಉಳಿಸಿಕೊಳ್ಳುವ ಅಗತ್ಯವೂ ಇದೆ’ ಎಂದರು.
ಕಾರ್ಯಕ್ರಮವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದರು. ಕನ್ನಡ ನಾಡು-ನುಡಿಯಂತಹ ಕಾರ್ಯಕ್ರಮಗಳಿಗೆ ಜನರು ಹೆಚ್ಚು-ಹೆಚ್ಚಾಗಿ ಭಾಗವಹಿಸಬೇಕು ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಹರೀಶಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಪ್ರೊ. ಎಸ್. ಶಿವರಾಜಪ್ಪ, ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ. ಆರ್.ರಾಜು, ಜೆಎಸ್‌ಎಸ್-ಎಎಚ್‌ಇಆರ್ ಕುಲಪತಿ ಡಾ. ಬಸವನಗೌಡಪ್ಪ, ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ವೈ.ಡಿ. ರಾಜಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.