ADVERTISEMENT

ಮೈಸೂರು | ಕೃಷಿ ಚಟುವಟಿಕೆಗೆ ಮ–ನರೇಗಾ ಬಲ: ಆರ್ಥಿಕವಾಗಿ ಲಾಭ ಪಡೆದುಕೊಂಡ ರೈತರು

ಎಂ.ಮಹೇಶ
Published 28 ಏಪ್ರಿಲ್ 2025, 6:52 IST
Last Updated 28 ಏಪ್ರಿಲ್ 2025, 6:52 IST
ಹಿಟ್ನೆಹೆಬ್ಬಾಗಿಲು ಗ್ರಾಮದ ಎಚ್‌.ಎಸ್. ಬಸವರಾಜು ಹಿಪ್ಪುನೇರಳೆ ಕೃಷಿಗೆ ನರೇಗಾ ನೆರವು ಪಡೆದಿದ್ದಾರೆ
ಹಿಟ್ನೆಹೆಬ್ಬಾಗಿಲು ಗ್ರಾಮದ ಎಚ್‌.ಎಸ್. ಬಸವರಾಜು ಹಿಪ್ಪುನೇರಳೆ ಕೃಷಿಗೆ ನರೇಗಾ ನೆರವು ಪಡೆದಿದ್ದಾರೆ   

ಮೈಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮ–ನರೇಗಾ) ಯೋಜನೆಯು ಗ್ರಾಮೀಣ ಕೃಷಿಕರ ಸ್ವಾವಲಂಬಿ ಬದುಕಿಗೆ ‘ಬಲ’ ತುಂಬುತ್ತಿದೆ.

ಯೋಜನೆಯನ್ನು ಹೇಗೆಲ್ಲಾ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದರ ಕೆಲವು ಮಾದರಿಗಳು ಜಿಲ್ಲೆಯಲ್ಲಿ ಕಂಡುಬಂದಿವೆ. ಆ ಯೋಜನೆಯಲ್ಲಿ ಉದ್ಯೋಗ ಚೀಟಿ ಪಡೆದುಕೊಂಡು ಕೂಲಿ ಕೆಲಸಕ್ಕೆ ಹೋಗಿ ಕೂಲಿ ಪಡೆಯುವುದು ಒಂದೆಡೆಯಾದರೆ, ಸ್ವಂತ ಆಸ್ತಿ ಸೃಜನೆಗೆ, ಕೃಷಿ ಚಟುವಟಿಕೆಗೂ ಯೋಜನೆಯ ಲಾಭವನ್ನು ಗಳಿಸಿಕೊಂಡಿದ್ದಾರೆ. ಇತರರಿಗೂ ಸ್ಫೂರ್ತಿ ನೀಡುವ ಕಥನಗಳು ತೆರೆದುಕೊಂಡಿವೆ.

ತಿ. ನರಸೀಪುರ ತಾಲ್ಲೂಕಿನ ತುರಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರವನಹಳ್ಳಿ ಗ್ರಾಮದ ರೈತ ಸಿದ್ದರಾಜು ಅವರು ಮ–ನರೇಗಾ ಸಹಾಯದಿಂದ ಸೀಬೆ ಬೆಳೆ ಹಾಕಿದ್ದಾರೆ. ‘ತೈವಾನ್‌’ ತಳಿಯ ಸೀಬೆಯನ್ನು ಅವರು ಬೆಳೆದಿದ್ದು, ಉತ್ತಮ ಫಲ ಬಂದಿದ್ದು ಲಾಭವನ್ನು ತಂದುಕೊಡುತ್ತಿದೆ. 1.25 ಎಕರೆ ಜಮೀನಿನಲ್ಲಿ ಸಾವಿರ ಸಸಿಗಳನ್ನು ಅವರು ನೆಟ್ಟಿದ್ದರು. ಅದೀಗ ಫಲ ಕೊಡುತ್ತಿದೆ. ಅದನ್ನು ನಿತ್ಯ 200ರಿಂದ 250 ಸೀಬೆಯನ್ನು ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಮಾರುವುದರೊಂದಿಗೆ ಕೆಲವು ‘ಮಾರ್ಟ್‌’ಗಳಿಗೂ ತಲುಪಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆಯ ನೆರವನ್ನು ಅವರು ಪಡೆದುಕೊಂಡು ‘ಸೀಬೆ ಕೃಷಿ’ ಮಾಡುತ್ತಿದ್ದಾರೆ.

ADVERTISEMENT

ತಂಬಾಕು ಬಿಟ್ಟು: ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಟ್ನೆಹೆಬ್ಬಾಗಿಲು ಗ್ರಾಮದ ರೈತ ಎಚ್‌.ಎಸ್. ಬಸವರಾಜು ತಂಬಾಕು ಕೃಷಿ ತೊರೆದು, ನರೇಗಾ ನೆರವು ಪಡೆದು ಹಿಪ್ಪುನೇರಳೆ (ರೇಷ್ಮೆ) ಕೃಷಿ ಮಾಡುತ್ತಿದ್ದಾರೆ. ರೇಷ್ಮೆ ಇಲಾಖೆಯ ‘ರೇಷ್ಮೆ ಅಭಿವೃದ್ಧಿ ಯೋಜನೆ’ಯ ಬೆಂಬಲದ ಜೊತೆಗೆ ನರೇಗಾದಲ್ಲೂ ಸಹಾಯಧನ ತೆಗೆದುಕೊಂಡಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಹೊಸದಾಗಿ ಹಿಪ್ಪನೇರಳೆ ನಾಟಿಗೆ 182 ಮಾನವ ದಿನಗಳ ಸೃಜನೆಗೆ ₹ 64,565 ಅನುದಾನ ಪಡೆದುಕೊಂಡು ಬೇಸಾಯದಲ್ಲಿ ತೊಡಗಿದ್ದಾರೆ. ರೇಷ್ಮೆ ಹುಳು ಸಾಕಣೆ ಘಟಕವನ್ನು ಮಾಡಿಕೊಂಡಿದ್ದಾರೆ.

ಅವರು ಈ ಹಿಂದೆ ತಂಬಾಕು ಕೃಷಿಯನ್ನು ಮಾಡುತ್ತಿದ್ದರು. ಇದರಿಂದ, ಮಣ್ಣಿನ ಫಲವತ್ತತೆ ಹಾಳಾಗುತ್ತಿರುವುದನ್ನು ಮನಗಂಡು ಪರ್ಯಾಯ ಬೆಳೆಗೆ ಮುಂದಾದೆ, ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಂಡು ನರೇಗಾ ಸಹಾಯ ಗಳಿಸಿಕೊಂಡೆ ಎನ್ನುತ್ತಾರೆ.

ಮೈಸೂರು ತಾಲ್ಲೂಕು ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಣಿಕ್ಯಪುರ ಗ್ರಾಮದ ನಿವಾಸಿ ಗುರುಲಿಂಗಪ್ಪ ಅವರು ನರೇಗಾ ಯೋಜನೆಯಡಿ ಮೇಕೆ ಶೆಡ್ ನಿರ್ಮಿಸಿಕೊಂಡು, ಮೇಕೆ ಸಾಕಣೆ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಎಚ್‌.ಡಿ. ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದ ಶಿವರಾಜು ಹಿಪ್ಪುನೇರಳೆ ಕೃಷಿ ಕೈಗೊಳ್ಳಲು ನರೇಗಾದ ಆರ್ಥಿಕ ಸಹಾಯವನ್ನು ಊರುಗೋಲನ್ನಾಗಿ ಮಾಡಿಕೊಂಡಿದ್ದಾರೆ.

ಜಾಗೃತಿ: ‘ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ಇರುವ ಅವಕಾಶಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕೃಷಿ ಚಟುವಟಿಕೆಗೂ ಬಳಸಿಕೊಳ್ಳಬಹುದು. ದನದ ಕೊಟ್ಟಿಗೆ, ಕುರಿ–ಮೇಕೆ ಸಾಕಣೆ ಶೆಡ್, ರಸ್ತೆ, ಚರಂಡಿ, ಶೌಚಾಲಯ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್‌ ತಿಳಿಸಿದರು.

‘2024–25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನರೇಗಾದಲ್ಲಿ ಕೃಷಿಗೆ ಸಂಬಂಧಿಸಿದ 548 ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಅದರಲ್ಲಿ 363 ಪ್ರಗತಿಯಲ್ಲಿದ್ದು, 185 ಪೂರ್ಣಗೊಂಡಿವೆ. ತೋಟಗಾರಿಕೆಯ ವಿಷಯದಲ್ಲಿ 1,053 ಕಾಮಗಾರಿಗಳಲ್ಲಿ 279 ಪೂರ್ಣಗೊಂಡಿದ್ದು, 774 ಕಾಮಗಾರಿಗಳು ವಿವಿಧ ಹಂತದಲ್ಲಿವೆ. ರೇಷ್ಮೆ ಕೃಷಿಗೆ ಸಂಬಂಧಿಸಿದ 245 ಕಾಮಗಾರಿಗಳಲ್ಲಿ 153 ಪ್ರಗತಿಯಲ್ಲಿದ್ದು, 92 ಪೂರ್ಣಗೊಂಡಿವೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಲು ಹಾಗೂ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಚೈತನ್ಯ ದೊರೆಯುವುದಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಅವರು. 

ಗೊರವನಹಳ್ಳಿ ಗ್ರಾಮದ ರೈತ ಸಿದ್ದರಾಜು ನರೇಗಾ ಸಹಾಯದಿಂದ ಸೀಬೆ ಕೃಷಿ ಮಾಡುತ್ತಿದ್ದಾರೆ
ತಂಬಾಕಿಗೆ ಪರ್ಯಾಯವಾಗಿ ರೇಷ್ಮೆ ಹಾಕಿದ್ದೇನೆ. ಬೇಸಾಯಕ್ಕೆ ನರೇಗಾದಿಂದ ನೆರವು ಪಡೆದುಕೊಳ್ಳಲು ಬಹಳಷ್ಟು ಅವಕಾಶವಿದ್ದು ರೈತರು ಬಳಸಿಕೊಳ್ಳಬೇಕು
ಎಚ್‌.ಎಸ್. ಬಸವರಾಜು, ರೈತ ಹಿಟ್ನೆಹೆಬ್ಬಾಗಿಲು
ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕೂಲಿಯನ್ನು ₹ 370ಕ್ಕೆ ಹೆಚ್ಚಿಸಲಾಗಿದ್ದು ಇದರಿಂದ ಅನುಕೂಲವಾಗಿದೆ
ಎಸ್.ಯುಕೇಶ್‌ ಕುಮಾರ್ ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.