ADVERTISEMENT

ಮೈಸೂರು| ನೀರು ಕೊರತೆ ಆಗದಂತೆ ನಿರ್ವಹಿಸಿ: ಶಾಸಕ ಜಿ.ಟಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 15:49 IST
Last Updated 25 ಫೆಬ್ರುವರಿ 2026, 15:49 IST
   

ಮೈಸೂರು: ‘ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಹೂಟಗಳ್ಳಿ, ದಾಸನಕೊಪ್ಪಲು, ಆರ್.ಟಿ.ನಗರ, ವಸಂತನಗರ, ನಾಡನಹಳ್ಳಿ, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಈ ವಿಷಯದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಹೊರವಲಯ ಬೆಳೆಯುತ್ತಿದೆ. ಹೀಗಾಗಿ, ನೀರಿನ ಸಮರ್ಪಕ ಪೂರೈಕೆಗಾಗಿ ಅಗತ್ಯ ಟ್ಯಾಂಕರ್‌ಗಳನ್ನು ಸಜ್ಜುಗೊಳಿಸಬೇಕು. ಉಂಡುವಾಡಿ ಯೋಜನೆ ಮುಗಿಯುವವರೆಗೆ ಕೆಆರ್‌ಎಸ್, ಕಬಿನಿ ನದಿಯಿಂದ ಎಲ್ಲಾ ಬಡಾವಣೆಗಳಿಗೂ ಹಂಚಿಕೆ ಮಾಡಿರುವ ನೀರು ಪೂರೈಸಿ ಸಮಸ್ಯೆ ಬಾರದಂತೆ ನಿಗಾ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

ನಿವಾರಣೆಗೆ ಆದ್ಯತೆ ಕೊಡಬೇಕು: ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ‘ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕು. ಒಂದು ರಸ್ತೆಯ ಕಾಮಗಾರಿ ಕೈ ಬಿಟ್ಟರೂ ಪರವಾಗಿಲ್ಲ. ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು’ ಎಂದು ಹೇಳಿದರು.

‘ಕುಡಿಯುವ ನೀರಿನ ಸಮಸ್ಯೆ ಏಪ್ರಿಲ್‌ನಲ್ಲಿ ಜಾಸ್ತಿಯಾಗಲಿದೆ. ಕೆಲವು ಬಡಾವಣೆಗಳ ಜನರು ಈಗಾಗಲೇ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ನಾನೂ ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸುತ್ತಿದ್ದೇನೆ. ಮುಂದೆ ನೀರಿನ ಸಮಸ್ಯೆ ಉಂಟಾಗದಂತೆ ಗಮನಹರಿಸಬೇಕು. ಅದಕ್ಕೆ ತಕ್ಕಂತೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದರೆ ಅನುಮೋದನೆ ಕೊಡಲಾಗುವುದು’ ಎಂದು ತಿಳಿಸಿದರು.

‘ವಸಂತನಗರ, ನಾಡನಹಳ್ಳಿಗೆ ನೀರಿನ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಬೇಕಿತ್ತು. ಜನರಿಂದ ದೂರು ಬರುತ್ತಿದ್ದಂತೆಯೇ ಪರಿಹರಿಸುವ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ಟ್ಯಾಂಕ್ ಬಳಕೆಗೆ ಸಮ್ಮತಿ: ‘ಹೂಟಗಳ್ಳಿ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯವರು ನಿರ್ಮಿಸಿರುವ ಟ್ಯಾಂಕ್ ಬಳಕೆ ಆಗುತ್ತಿಲ್ಲ. ಉಂಡುವಾಡಿ ಯೋಜನೆಗೆ ಸಂಪರ್ಕ ಕಲ್ಪಿಸುವವರೆಗೆ ಈ ಟ್ಯಾಂಕ್ ಬಳಸಿಕೊಳ್ಳಬಹುದು. ಇದಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ನಗರಸಭೆ ಆಯುಕ್ತ ಬಿ.ಎನ್.ಚಂದ್ರಶೇಖರ್ ತಿಳಿಸಿದರು.

ಕೆಐಎಡಿಬಿ ಅಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಸಮಸ್ಯೆ ವಿವರಿಸಿ ಟ್ಯಾಂಕ್ ಬಳಕೆಗೆ ಸಮ್ಮತಿ ಸಿಗುವಂತೆ ಮಾಡಿದರು.

‘ಕೆಐಎಡಿಬಿಗೆ ಅಗತ್ಯವಿರುವಾಗ ಬಳಸಲು ಕೊಡಲಾಗುವುದು. ಈಗ ಬಳಕೆ ಆಗುತ್ತಿಲ್ಲದ ಕಾರಣ ನಾಗರಿಕರ ಪೂರೈಕೆಗೆ ಬಳಸೋಣ. ಉಂಡುವಾಡಿ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸುವವರೆಗೂ ಬಿಟ್ಟು ಕೊಡಿ’ ಎಂದು ಜಿಲ್ಲಾಧಿಕಾರಿಯೂ ಸೂಚಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿ.ಪ್ರಿಯದರ್ಶಿನಿ, ನಗರಪಾಲಿಕೆ ಎಸ್‌ಇ ಮಂಜುನಾಥ್, ಇಇಗಳಾದ ಶಿಲ್ಪಾ ಶರತ್, ರವಿಕುಮಾರ್, ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ಎಂ.ಸುರೇಶ್, ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಹಾಜರಿದ್ದರು.

ಕಾಮಗಾರಿಗೆ ಟೆಂಡರ್‌...

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ ಆಸೀಫ್‌ ಇಕ್ಬಾಲ್ ಖಲೀಲ್, ‘ಅಮೃತ್-2 ಯೋಜನೆಯಡಿ ಕಡಕೊಳಕ್ಕೆ ಕಪಿಲಾ ನದಿಯಿಂದ 5 ಟಿಎಂಸಿ ನೀರು ಹಂಚಿಕೆಯಾಗಿದ್ದು, ತಳೂರು ಬಳಿ ಸಂಪರ್ಕ ಕಲ್ಪಿಸಲಾಗುವುದು. ಅಂತೆಯೇ ಸರ್ದಾರ್‌ ವಲ್ಲಭಬಾಯ್ ಪಟೇಲ್‌ ನಗರಕ್ಕೆ ನೀರು ಪೂರೈಕೆಗಾಗಿ ₹ 35 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಿವಿಧೆಡೆ ದೊರೆಯುತ್ತಿರುವ ನೀರಿನಿಂದ ಸ್ಥಳೀಯ ಸಂಸ್ಥೆಗಳಿಗೆ ನಿಗದಿಪಡಿಸಲಾದ ನೀರನ್ನು ಕಡ್ಡಾಯವಾಗಿ ಹಂಚಿಕೆ ಮಾಡಬೇಕು. ಜಿಲ್ಲಾ ನಗರಾಭಿವೃದ್ಧಿ ಕೋಶ, ಸ್ಥಳೀಯ ಸಂಸ್ಥೆಗಳು ಹಾಗೂ ಪಾಲಿಕೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.

ಬಾಡಿಗೆ ಬದಲಿಗೆ ಖರೀದಿಸಿ: ಡಿಸಿ

‘ಟ್ಯಾಂಕರ್‌ ಬಳಕೆ, ಕೊಳವೆಬಾವಿಗಳನ್ನು ಕೊರೆಸಲು ಪ್ರಸ್ತಾವ ಸಲ್ಲಿಸಿ ಮುಂಚಿತವಾಗಿ ಅನುಮೋದನೆ ಪಡೆದುಕೊಳ್ಳಬೇಕು. ನಾನು ನಗರಪಾಲಿಕೆ ಆಯುಕ್ತ ಆಗಿದ್ದಾಗ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯುವ ಬದಲಿಗೆ ಖರೀದಿಸಲಾಗಿತ್ತು. ಅಗತ್ಯವಿರುವ ಕಡೆಗೆ 24 ಗಂಟೆಯೂ ನೀರು ಪೂರೈಕೆಗೆ ಬಳಸಲು ಅನುಕೂಲ ಆಗಿತ್ತು. ಈಗಲೂ ಬಾಡಿಗೆಗೆ ಪಡೆಯುವ ಬದಲಿಗೆ ಖರೀದಿಸಿದರೆ ಹಣ ಉಳಿಸಬಹುದು. ನಮ್ಮ ನೀರನ್ನೇ ಬಳಸಬಹುದು. ಚಾಲಕನನ್ನು ನೇಮಿಸಿಕೊಂಡರೆ ಸಾಕಾಗುತ್ತದೆ’ ಎಂದು ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.