
ಮೈಸೂರು: ಜಿಲ್ಲೆಯು ಈ ವರ್ಷ (2025) ಹಲವು ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚು ಸಕ್ರಿಯವಾಗಿದ್ದರೆ, ಜೆಡಿಎಸ್ ಪಾಳಯದಲ್ಲಿ ‘ಮಂಕು’ ಕವಿದಿತ್ತು. ಹಲವು ಅಭಿವೃದ್ಧಿ ಕಾಮಗಾರಿಗಳು ಚಾಲನೆ ಪಡೆದವು, ಉದ್ಘಾಟನೆಗೊಂಡವು.
ಮತಕಳ್ಳತನದ ಆರೋಪವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನವರು ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ಹೋರಾಡಿದರೆ, ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರುತ್ತಾ ಬಿಜೆಪಿಯವರು ಪ್ರತಿಭಟಿಸಿದರು. ಜೆಡಿಎಸ್‌ನಲ್ಲಿ ‘ಸ್ವತಂತ್ರವಾಗಿ’ ಹೆಚ್ಚಿನ ಚಟುವಟಿಕೆಗಳೇನೂ ಕಂಡುಬರಲಿಲ್ಲ. ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮ ಬಿಟ್ಟರೆ ಆ ಪಕ್ಷದಿಂದ ಸದ್ದೇನೂ ಆಗಲಿಲ್ಲ. ಈ ಭಾಗದ ಪ್ರಮುಖ ರಾಜಕಾರಣಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ತಾವು ಗೆದ್ದ ಜೆಡಿಎಸ್ ಪಕ್ಷದ ‘ಸಖ್ಯ’ದಿಂದ ‘ದೂರ’ ಉಳಿಯುವುದನ್ನು ಈ ವರ್ಷವೂ ಮುಂದುವರಿಸಿದರು. ಈ ಪರಿಣಾಮ, ಅವರನ್ನು ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಹೊರಗಿಡುವ ‘ಶಿಕ್ಷೆ’ಯನ್ನೂ ಪಕ್ಷ ಕೊಟ್ಟಿತು!
ಅಧಿಕಾರಿಗಳ ದರ್ಬಾರ್:
ಮೈಸೂರು ಮಹಾನಗರಪಾಲಿಕೆ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಈ ವರ್ಷವೂ ನಡೆಯಲಿಲ್ಲ. ಈ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ‘ದರ್ಬಾರ್’ ಮುಂದುವರಿಯಿತು; ಜನಪ್ರತಿನಿಧಿಗಳನ್ನು ಕಂಡುಕೊಳ್ಳುವುದು ಸಾಧ್ಯವಾಗಲಿಲ್ಲ. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳ ಅಧಿಕಾರದ ಅವಧಿ 2021ರಲ್ಲೇ ಮುಕ್ತಾಯವಾಗಿದೆ. 65 ವಾರ್ಡ್‌ಗಳನ್ನು ಹೊಂದಿರುವ ಮೈಸೂರು ಮಹಾನಗರಪಾಲಿಕೆಯ ಚುನಾಯಿತ ಆಡಳಿತ ಮಂಡಳಿಯ ಅಧಿಕಾರದ ಅವಧಿ 2023ರ ನ.16ರಂದೇ ಕೊನೆಗೊಂಡಿದೆ.
ಈ ನಡುವೆ, ‘ಗ್ರೇಟರ್ ಮೈಸೂರು’ ಕನಸನ್ನು ಸರ್ಕಾರ ಬಿತ್ತಿರುವ ವರ್ಷವಿದು. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪ್ರನಿಧಿಗಳೊಂದಿಗೆ ಚರ್ಚಿಸಿ, ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವಂತೆ ನೋಡಿಕೊಂಡಿದ್ದಾರೆ. ಇದಕ್ಕೆ ಸ್ವಾಗತ ವ್ಯಕ್ತವಾಗಿದ್ದರೂ, ‘ಗ್ರೇಟರ್ ಮೈಸೂರು ಅಥವಾ ಗ್ರೇಡ್–1 ಪಾಲಿಕೆ’ ಹೇಗಿರಬೇಕು, ಹೇಗಿರಬಾರದು ಎಂಬ ಚರ್ಚೆ ನಡೆಯುತ್ತಿದೆ.
ಮೈಸೂರಿನ ಪತ್ರಕರ್ತ ಕೆ.ಶಿವಕುಮಾರ್ ಅವರನ್ನು ವಿಧಾನಪರಿಷತ್‌ಗೆ ನಾಮನಿರ್ದೇಶನ (ಸೆ.7) ಮಾಡಲಾಯಿತು. ಬಳಿಕ ರಾಜ್ಯ ಸರ್ಕಾರದಿಂದ ಮಾಡಲಾದ ನಿಗಮ–ಮಂಡಳಿಗಳ ನೇಮಕಾತಿಯಲ್ಲಿ ಮುಖ್ಯಮಂತ್ರಿ ತವರಾದ ಜಿಲ್ಲೆಗೆ ಹಲವು ಸ್ಥಾನಗಳು ಲಭಿಸಿದವು. ಪಿರಿಯಾಪಟ್ಟಣದ ಎಚ್.ಡಿ. ಗಣೇಶ್ (ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್) ಅಧ್ಯಕ್ಷ ಎನೆ.ಆರ್. ಕ್ಷೇತ್ರದ ಪ್ಯಾರಿಜಾನ್ (ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ) ಕೆ.ಆರ್. ನಗರದ ಐಶ್ವರ್ಯಾ ಮಹದೇವ್ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ) ವರುಣ ಕ್ಷೇತ್ರದ ರಂಗಸ್ವಾಮಿ (ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ) ಎಂ. ರಾಮಪ್ಪ (ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ) ಅವರಿಗೆ ‘ಗಾದಿ‘ ದೊರೆಯಿತು. ಕೆಲವರು ನಿರ್ದೇಶಕರಾಗಿ ನೇಮಕವಾದರು.
2025ರ ಅ.14 ಹಾಗೂ 15ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿತು. ಡಾ.ಬಿ.ಆರ್. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿ 70 ವರ್ಷ ತುಂಬಿದ ಅಂಗವಾಗಿ ಮಾನವ ಮೈತ್ರಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಬಿಕ್ಕು ಸಂಘ ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು ರಾಜ್ಯ ಅಂಬೇಡ್ಕರ್‌ವಾದಿ ಸಂಘಟನೆಗಳು ವಿಶ್ವಮೈತ್ರಿ ಬುದ್ಧ ವಿಹಾರದ ಸಹಯೋಗದಲ್ಲಿ ನಡೆಯಿತು. ರಾಜ್ಯದಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 500 ಕೋಟಿ ಅನುದಾನ ಒದಗಿಸಬೇಕು ಕುವೆಂಪು ವಿರಚಿತ ನಾಡಗೀತೆಯಲ್ಲಿದ್ದಂತೆ ‘ಬೌದ್ಧರುದ್ಯಾನ’ ಪದವನ್ನು ಮರುಸೇರ್ಪಡೆ ಮಾಡಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳನ್ನು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಮಂಡಿಸಲಾಯಿತು.
‘ಮುಡಾ’ದಿಂದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಪ್ರಕರಣ ಈ ವರ್ಷವೂ ಸದ್ದು ಮಾಡಿತು. ಈ ನಡುವೆ ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ’ವನ್ನು ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ’ (ಎಂಡಿಎ) ಎಂದು ಬದಲಿಸಿ ಮೇ 23ರಿಂದ ಅಧಿಕೃತವಾಗಿ ಜಾರಿಗೆ ತರಲಾಯಿತು. ಫಲಕ ಬದಲಿಸಲಾಯಿತು. ಹೊಸ ‘ಎಂಡಿಎ’ನಲ್ಲಿ ಅಧಿಕಾರಗಳದ್ದೇ ‘ಪಾತ್ರ’ ನಡೆಯುತ್ತಿದೆ. ಜನಪ್ರತಿನಿಧಿಗಳನ್ನು ದೂರವಿಡಲಾಗಿದೆ. ಇದು ಈ ವರ್ಷದ ಅತ್ಯಂತ ದೊಡ್ಡ ಬೆಳವಣಿಗೆ ಎನಿಸಿತು. ಈ ಪ್ರಾಧಿಕಾರವು ವರ್ಷಾಂತ್ಯದಲ್ಲಿ ಹೊಸದಾಗಿ ‘ಬೊಮ್ಮೇನಹಳ್ಳಿ ಬಡಾವಣೆ’ ಅಭಿವೃದ್ಧಿಪಡಿಸುವ ಕನಸು ಬಿತ್ತಿದ್ದು 22ಸಾವಿರ ನಿವೇಶನ ಸಜ್ಜಗೊಳಿಸುವ ನಿರ್ಣಯ ಕೈಗೊಂಡು ಆಕಾಂಕ್ಷಿಗಳ ಗಮನವನ್ನು ಸೆಳೆದು ನಿರೀಕ್ಷೆಯ ಬೀಜದುಂಡೆಯನ್ನು ಎಸೆಯಿತು.
‘ನವೆಂಬರ್ ಕ್ರಾಂತಿ’ ನಾಯಕತ್ವ ಬದಲಾವಣೆಯ ಚರ್ಚೆಯು ತೀವ್ರಗೊಂಡಿದ್ದ ಸಂದರ್ಭದಲ್ಲಿ ಪ್ರತ್ಯುತ್ತರ ಎಂಬಂತೆ ಸಿದ್ದರಾಮಯ್ಯ ಅವರು ನಡೆಸಿದ ಶಕ್ತಿ ಪ್ರದರ್ಶನಕ್ಕೆ ತವರು ಸಾಕ್ಷಿಯಾಯಿತು. ಜುಲೈ 19ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ‘ಸಾಧನಾ ಸಮಾವೇಶ’ದಲ್ಲಿ ‘ರ‍್ಯಾಂಪ್ ವಾಕ್’ ಮಾಡುತ್ತಾ ಮುನ್ನುಗ್ಗಿದ ಮುಖ್ಯಮಂತ್ರಿ ಎದುರಾಳಿಗಳ ವಿರುದ್ಧದ ವಾಗ್ದಾಳಿಗೆ ವೇದಿಕೆಯನ್ನಾಗಿ ಬಳಸಿಕೊಂಡರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಅಪಾರ ಜನರು ಪಾಲ್ಗೊಂಡಿದ್ದ ಈ ಸಮಾವೇಶವು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಸಂಚಲನವನ್ನು ಸೃಷ್ಟಿಸಿತು. ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಜೂನ್ 26ರಂದು ನಡೆಯಿತು. ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದರು. ಕಣದಲ್ಲಿದ್ದ ನಾಲ್ವರು ಶಾಸಕರೂ (ಸಿ.ಪುಟ್ಟರಂಗಶೆಟ್ಟಿ ಎಚ್.ಎಂ. ಗಣೇಶ್‌ಪ್ರಸಾದ್ ಜಿ.ಡಿ.ಹರೀಶ್‌ಗೌಡ ಅನಿಲ್ ಚಿಕ್ಕಮಾದು ಗೆದ್ದರು. ಅಧ್ಯಕ್ಷರ ಆಯ್ಕೆ ಈವರೆಗೂ ನಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.