ಮೈಸೂರು: ಬಿರುಮಳೆಯ ನಡುವೆಯೂ ರಾಜಠೀವಿಯಿಂದ ಹೆಜ್ಜೆ ಹಾಕಿದ ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ ಗಜಪಡೆಗೆ ಇಲ್ಲಿನ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
‘ಅಭಿಮನ್ಯು’ ಜೊತೆ ಭೀಮ, ಮಹೇಂದ್ರ, ಧನಂಜಯ, ಕಂಜನ್, ಪ್ರಶಾಂತ, ಏಕಲವ್ಯ, ಲಕ್ಷ್ಮಿ ಹಾಗೂ ಕಾವೇರಿ ಆನೆಗಳಿಗೆ ಸಂಜೆ 6.45ಕ್ಕೆ ಅರಮನೆ ಪುರೋಹಿತ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಅರಮನೆ ಪೊಲೀಸ್ ಬ್ಯಾಂಡ್, ಮಂಗಳವಾದ್ಯದೊಂದಿಗೆ ಪೊಲೀಸ್ ಗೌರವವನ್ನೂ ನೀಡಲಾಯಿತು. ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಆರತಿ ಬೆಳಗಿ ಬೂದುಗುಂಬಳ ಒಡೆದರು.
ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ಅರಮನೆ ಎದುರಿನ ಮಾರ್ಗದಲ್ಲಿ ಜಾನಪದ ಕಲಾತಂಡಗಳು, ಕಳಶ ಹೊತ್ತ ಮಹಿಳೆಯರು, ಅಶ್ವರೋಹಿ ಪಡೆಯ ಹಿಂದೆ ಆನೆಗಳು ಬಂದವು.
ಆ.4ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿಯಿಂದ ಹೊರಟು ಸಾಂಸ್ಕೃತಿಕ ನಗರಿಗೆ ಪ್ರವೇಶ ಪಡೆದಿದ್ದ ಆನೆಗಳು ಅಶೋಕಪುರಂನ ಅರಣ್ಯ ಭವನದಲ್ಲಿ ತಂಗಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯಾಹ್ನ ಪೂಜೆ ಸಲ್ಲಿಸಿ ಅರಮನೆಗೆ ಬೀಳ್ಕೊಟ್ಟಿದ್ದರು.
ಉತ್ಸವದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳಿಗೆ ಅರಮನೆ ಮಂಡಳಿಯಿಂದ ಸನ್ಮಾನಿಸಲಾಯಿತು. ಮಾವುತರು, ಕಾವಾಡಿಗಳಿಗೆ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್‌ಗಳನ್ನು ಸಚಿವ ಮಹದೇವಪ್ಪ ವಿತರಿಸಿದರು. ಅರಮನೆ ಆವರಣದಲ್ಲಿ ನಿರ್ಮಿಸಿರುವ ಬಿಡಾರಗಳಿಗೆ ಆನೆಗಳು ತೆರಳಿದವು. ಸೋಮವಾರ (ಆ.11)ರಂದು ಬೆಳಿಗ್ಗೆ 8ಕ್ಕೆ ಆನೆಗಳ ತೂಕ ಪರೀಕ್ಷೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.