ಮೈಸೂರು: ‘ನಾಡು, ನುಡಿ, ಸಂಸ್ಕೃತಿ ಮತ್ತು ಸಾಹಿತ್ಯದ ಗಂಧ–ಗಾಳಿ ಇಲ್ಲದೇ ಬರೀ ದ್ವೇಷವನ್ನೇ ಉಸಿರಾಡುತ್ತಿರುವ ಬಿಜೆಪಿಗರು ಒಬ್ಬ ಮಹಿಳೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ.
‘ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯನ್ನು ನೆರವೇರಿಸಲಿರುವ ಬಾನು ಮುಷ್ತಾಕ್ ಅವರು ಸುತ್ತಲಿನ ಸಾಮಾಜಿಕ ಪಿಡುಗುಗಳ ವಿರುದ್ಧ ಹಾಗೂ ಅವರೊಳಗಿನ ಧಾರ್ಮಿಕ ಸಂಕೋಲೆಗಳ ವಿರುದ್ಧ ಗಟ್ಟಿಯಾಗಿ ದನಿ ಎತ್ತಿದವರು. ರೈತರು, ಮಹಿಳೆಯರ ಪರವಾದ ದನಿಯಾಗಿ ದಶಕಗಳಿಂದ ಸಾಹಿತ್ಯ ಕೃಷಿಯನ್ನು ಮಾಡಿರುವ ಅವರಿಗೆ ಇತ್ತೀಚೆಗೆ ಬೂಕರ್ ಪ್ರಶಸ್ತಿ ಬಂದಿರುವುದು ನಾವೆಲ್ಲರೂ ಸಹಜವಾಗಿ ಹೆಮ್ಮೆಪಡಬೇಕಾದ ಸಂಗತಿ. ಇದನ್ನು ಬಿಟ್ಟು, ಅವರ ಆಯ್ಕೆಯನ್ನು ವಿರೋಧಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
‘ಬಿಜೆಪಿಗರಿಂದಲೇ ಛೀಮಾರಿ ಹಾಕಿಸಿಕೊಂಡು, ಟಿಕೆಟ್ ತಪ್ಪಿದ ಕ್ಷಣದಿಂದ ವಿಚಲಿತರಾಗಿರುವ ಮಾಜಿ ಸಂಸದ ಪ್ರತಾಪ ಸಿಂಹ ಅವರು, ಬಾನು ಅವರ ಆಯ್ಕೆಯ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿರುವುದರ ಹಿಂದೆ, ದ್ವೇಷದ ಹಿತಾಸಕ್ತಿ ಬಿಟ್ಟರೆ ಸಾರ್ವಜನಿಕ ಹಿತಾಸಕ್ತಿ ಏನೂ ಇಲ್ಲ ಎಂಬುದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ಕಾರಣದಿಂದಲೇ ಅವರ ಕೋಮು ರಾಜಕೀಯಕ್ಕೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಸಾಹಿತ್ಯದ ಮೂಲಕ ನಾಡಿಗೆ ಹೆಸರು ತಂದವರನ್ನು ಜಾತಿ, ಧರ್ಮದ ಮೇಲೆ ಅಳೆಯುವುದು ಹಾಗೂ ಅವರ ಅರ್ಹತೆಯನ್ನು ಪ್ರಶ್ನಿಸುವುದು ಮನುವಾದದ ಮೂಲ ಗುಣ. ಆದರೆ, ಈ ನೆಲದಲ್ಲಿ ಬಾಬಾಸಾಹೇಬರ ತಿಳಿವಳಿಕೆಯೂ ಬಲವಾಗಿಯೇ ಬೇರೂರಿದೆ. ಮನುವಾದಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಅವರೊಬ್ಬರೇ ಸಾಕು. ದಸರಾ ಎಂಬುದು ಎಲ್ಲರನ್ನೂ ಒಳಗೊಂಡಂತಹ ನಾಡಹಬ್ಬವೇ ಹೊರತು, ಬಿಜೆಪಿ ಪಕ್ಷದ ಕಚೇರಿಗಾಗಲೀ ಅಥವಾ ಅವರನ್ನು ಹೀಗೆ ದ್ವೇಷಮಯವಾಗಿ ರೂಪಿಸುವ ಆರ್‌ಎಸ್‌ಎಸ್ ಕಚೇರಿಗಾಗಲೀ ಸಂಬಂಧಿಸಿದ ಉತ್ಸವವಲ್ಲ. ಈ ಸಂಗತಿಯನ್ನು ಬಿಜೆಪಿಗರು ಬೇಗ ಅರಿತರೆ ಉತ್ತಮ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.