ADVERTISEMENT

Mysuru Dasara: ಜಂಬೂ ಸವಾರಿಗೆ ಗಾಂಧಿ ಸ್ಮರಣೆಯ ಮೆರುಗು

ಮಳೆಯ ಸಿಂಚನದ ನಡುವೆ ಅದ್ಧೂರಿ‌ ದಸರಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 11:36 IST
Last Updated 2 ಅಕ್ಟೋಬರ್ 2025, 11:36 IST
   

ಮೈಸೂರು: ಸೌಹಾರ್ದ ಪ್ರತಿಪಾದಿಸಿ ಆರಂಭವಾದ ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯು ಗುರುವಾರ ಗಾಂಧಿ ಜಯಂತಿಯ ಜೊತೆಗೇ ವಿಶೇಷವಾಗಿ ಸಂಪನ್ನಗೊಂಡಿತು. ಸ್ವಚ್ಛತೆ, ಸತ್ಯಾಗ್ರಹ, ಶ್ರಮದಾನ, ಜನಸ್ನೇಹಿ ಆಡಳಿತದ ಜೊತೆಗೆ ಮತ್ತೊಮ್ಮೆ ಸೌಹಾರ್ದವನ್ನು ಸಾರಿತು.

ನಾಡಿನ ಸಾಂಸ್ಕೃತಿಕ ವೈಭವ ಹಾಗೂ ಸರ್ಕಾರದ ಸಾಧನೆಗಳ ಜೊತೆಗೆ ಗಾಂಧಿ ಸ್ಮರಣೆಗೂ ಮುಡಿಪಿಟ್ಟಂತೆ ಕಂಡು ಬಂದ ಮೆರವಣಿಗೆಯ ನಡುವೆ ಆಗಾಗ ಸಣ್ಣ ಮಳೆ ಸುರಿದರೂ ಕಲಾವಿದರು,‌ ಪ್ರೇಕ್ಷಕರ ಉತ್ಸಾಹ ತಗ್ಗಲಿಲ್ಲ. ಹಿಂದೆಂದಿಗಿಂತಲೂ ಹೆಚ್ಚಿನ ಬಿಗಿ ಭದ್ರತೆಯ ನಡುವೆ ಗಂಭೀರವಾಗಿ ಸಾಗಿದ ಜಂಬೂಸವಾರಿಯನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು.

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಂಥ ಅಹಿತಕರ ಘಟನೆ ನಡೆಯಬಾರದು ಎಂಬ ಮುನ್ನೆಚ್ಚರಿಕೆ ಸಲುವಾಗಿ, ಅರಮನೆಯಲ್ಲಿ ಸುಮಾರು 11 ಸಾವಿರದಷ್ಟು ಆಸನಗಳನ್ನು ಕಡಿಮೆ ಮಾಡಲಾಗಿತ್ತು. ಮರ, ಕಟ್ಟಡಗಳ ಮೇಲಿಂದ ಜಂಬೂಸವಾರಿ ವೀಕ್ಷಣೆಗೂ ತಡೆ ಒಡ್ಡಲಾಗಿತ್ತು. ಈ ನಡುವೆಯೂ ಜಂಬೂಸವಾರಿ ಹರ್ಷದ ಹೊನಲನ್ನೇ ಹರಿಸಿತು.

ADVERTISEMENT

ಅರಮನೆ ಹೊರ ಆವರಣದ ಕೋಟೆ ಆಂಜನೇಯ ಗುಡಿಯ ಮುಂದೆ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 1.08ಕ್ಕೆ ಪೂಜೆ ಸಲ್ಲಿಸಿ, ಸಚಿವರೊಂದಿಗೆ ಅರಮನೆಯೊಳಗೆ ಬಂದಾಗ ಅಭಿಮಾನಿಗಳ ಉತ್ಸಾಹ ಇಮ್ಮಡಿಸಿತ್ತು. ಬಳಿಕ, ಸ್ತಬ್ಧಚಿತ್ರ ಮತ್ತು ಕಲಾತಂಡಗಳ ಮೆರವಣಿಗೆಗೆ ಚಾಲನೆ ದೊರಕಿತು. ಹೆಜ್ಜೆ- ಗೆಜ್ಜೆ, ತಾಳ-ಮೇಳ, ಕಂಸಾಳೆ, ತಮಟೆ-ನಗಾರಿ, ಡೋಲು, ಚಂಡೆಯ ಝಲ್ಲೆನಿಸುವ ನಾದ ನೃತ್ಯಗಳೊಂದಿಗೆ ಸಾವಿರಾರು ಕಲಾವಿದರು ತಮ್ಮ ಜಿಲ್ಲೆಗಳ ಸಾಂಸ್ಕೃತಿಕ ವಿಶೇಷಗಳನ್ನು ಸಂಗೀತ- ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ಸ್ತಬ್ಧಚಿತ್ರಗಳು ಸರ್ಕಾರದ ಸಾಧನೆಗಳನ್ನು ಅನಾವರಣಗೊಳಿಸಿದವು. ಸ್ವಚ್ಚತೆ, ಸತ್ಯಾಗ್ರಹ, ಗುಡಿ ಕೈಗಾರಿಕೆ ತತ್ವಗಳನ್ನು ಪ್ರತಿಪಾದಿಸಿದ ಹತ್ತಾರು ಸ್ತಬ್ದ ಚಿತ್ರಗಳಲ್ಲಿ ಗಾಂಧೀಜಿಯೂ ಹೊಳೆದರು.

ಪೊಲೀಸ್‌ ಪಡೆ, ಅಶ್ವಾರೋಹಿ ಪಡೆಯೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಮೆರವಣಿಗೆ ನಡೆಯಿತು.

ಸಂಜೆ 4.40ಕ್ಕೆ ಅಭಿಮನ್ಯು ಆನೆ ಹೊತ್ತಿದ್ದ 750 ಕೆ.ಜಿ.ಯ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿ ಇಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮೈಸೂರು ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಜೊತೆಯಾದರು.

ನಂತರ ಶುರುವಾದ ರಾಷ್ಟ್ರಗೀತೆಯ ನಡುವೆ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಾಯಿತು. ಆನೆಗಳೆಲ್ಲವೂ ಏಕಕಾಲಕ್ಕೆ ಸೊಂಡಿಲೆತ್ತಿ ದೇವಿಗೆ ನಮಸ್ಕರಿಸಿದವು. ಎಲ್ಲರೂ ಚಾಮುಂಡೇಶ್ವರಿಗೆ ಜೈಕಾರ ಹಾಕಿದ ಬಳಿಕ ಅಂಬಾರಿಯು ಮುಂದಕ್ಕೆ ಸಾಗಿತು.

ಆರನೇ ಬಾರಿ ಅಂಬಾರಿ ಹೊತ್ತ ಆನೆ ಅಭಿಮನ್ಯುವಿನೊಂದಿಗೆ ಕುಮ್ಕಿ ಆನೆಗಳಾಗಿ ರೂಪಾ, ಕಾವೇರಿ ಹೆಜ್ಜೆ ಹಾಕಿದರೆ,ನಿಶಾನೆ ಆನೆಯಾಗಿ ಧನಂಜಯ ಜವಾಬ್ದಾರಿ ನಿರ್ವಹಿಸಿದ. ನೌಫತ್‌ ಆನೆಯಾಗಿ ಗೋಪಿ, ಸಾಲಾನೆಗಳಾಗಿ ಏಕಲವ್ಯ, ಮಹೇಂದ್ರ, ಲಕ್ಷ್ಮಿ, ಶ್ರೀಕಂಠ, ಕಂಜನ್, ಭೀಮ, ಹೇಮಾವತಿ, ಸುಗ್ರೀವ, ಪ್ರಶಾಂತ ಹೆಜ್ಜೆ ಹಾಕಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.