ಮೈಸೂರು: ‘ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ತಲೆ ಎತ್ತಿದೆ. ಬೇರೆ ರಾಜ್ಯದವರು ಬಂದು ನಮ್ಮ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮೇಲೆ ರೈಡ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಏನು ಮಾಡುತ್ತಿದೆ?’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ ಕೇಳಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಾದಕವಸ್ತು ತಯಾರಿಸುವವರಿಗೆ ಆ ಜಾಗವನ್ನು ಕೊಟ್ಟವರು ಯಾರು. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಇಷ್ಟೆಲ್ಲಾ ಆಗುತ್ತಿದ್ದರೂ ತಡೆಯುತ್ತಿಲ್ಲವೇಕೆ? ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವಲ್ಪ ಕೊಟ್ಟಿದ್ದಾರೆ, ನಮ್ಮಪ್ಪ ಅದಕ್ಕಿಂತಲೂ ಹೆಚ್ಚು ಕೊಟ್ಟಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿಗೆ ಡ್ರಗ್ಸ್ ಮಾಫಿಯಾ ಕೊಟ್ಟಿದ್ದು ಸಿದ್ದರಾಮಯ್ಯ ಕೊಡುಗೆನಾ?’ ಎಂದು ಕೇಳಿದರು.
‘ರಾಜ್ಯದಲ್ಲಿ ಗೃಹ ಇಲಾಖೆಯ ಕೈಕಟ್ಟಿ ಕೂರಿಸಿದ್ದಾರೆ. ಆ ಇಲಾಖೆಯೇ ಇಲ್ಲವೆಂದು ಸರ್ಕಾರ ಅಂದುಕೊಂಡಿದೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಮೈಮರೆತಿದೆ. ಕಾನೂನು– ಸುವ್ಯವಸ್ಥೆ ಹದಗೆಟ್ಟಿದೆ. ಮೈಸೂರಿನಲ್ಲಿ ಮಾದಕ ವಸ್ತು ತಯಾರಿಕೆಯಂತಹ ಬೆಳವಣಿಗೆ ನಡೆದಿರುವುದು ನೋವಿನ ಸಂಗತಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.