ಮೈಸೂರು: ‘ಮೈಸೂರಿನಲ್ಲಿ ಎಂಡಿಎಂಎ ಮಾದಕ ವಸ್ತು ತಯಾರಿಸುತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮೈಸೂರಿನ ಈ ಘಟನೆಯು ಬಹಳ ಆಶ್ಚರ್ಯ ಉಂಟು ಮಾಡಿದೆ. ಇಂತಹ ಚಟುವಟಿಕೆಗಳು ದೇಶದ ಯಾವ ಭಾಗದಲ್ಲೂ ನಡೆಯಬಾರದು’ ಎಂದರು.
‘ನರಸಿಂಹರಾಜ ಕ್ಷೇತ್ರದಲ್ಲಿ ಹೆಚ್ಚು ಸೆಲ್ಯೂಷನ್ ಹಾಗೂ ಮಾದಕವಸ್ತು ಮಾರಾಟವಾಗುತ್ತಿದೆ. ಈ ಬಗ್ಗೆ ನಮಗೆ ಸಾಕಷ್ಟು ದೂರುಗಳೂ ಬಂದಿವೆ. ಕೆಲ ಉದ್ಯಾನಗಳನ್ನು ಡ್ರಗ್ಸ್ ಹೆಸರಿನಲ್ಲಿಯೇ ಸ್ಥಳೀಯರು ಕರೆಯುವುದೂ ಇದೆ. ಈ ನಿಟ್ಟಿನಲ್ಲಿ ಸೂಕ್ತವಾದ ಕ್ರಮವನ್ನು ಕೇಂದ್ರದಿಂದ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
‘ನಗರದ ಬಹುತೇಕ ಕಾಲೇಜು ಹಾಗೂ ವಿಶ್ವವಿದ್ಯಾಯಗಳಲ್ಲಿ ಮಾದಕವಸ್ತು ಮಾರಾಟ ಆಗುತ್ತಿರುವ ಬಗ್ಗೆ ದೂರು ಬಂದಿದೆ’ ಎಂದು ತಿಳಿಸಿದರು.
‘ಮೈಸೂರು ತವರು ಎಂಬುದು ಸಿದ್ದರಾಮಯ್ಯ ಅವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುತ್ತದೆ. ಈಗ ಅಧಿಕಾರದಲ್ಲಿರುವ ಅವರು, ಕಾನೂನು–ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.