
ಮೈಸೂರು: ನಗರದ ‘ನಾಟ್ಯ’ ಪ್ರದರ್ಶಕ ಕಲೆಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ‘ನಾಟ್ಯ ನೈವೇದ್ಯ’ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.
ಜನಪದ ಗಾಯಕ ಅಮ್ಮ ರಾಮಚಂದ್ರ, ವಿದುಷಿ ಅಪರ್ಣಾ, ನೃತ್ಯ ಕಲಾವಿದ ಕಾರ್ತಿಕೇಯನ್ ಚಾಲನೆ ನೀಡಿದರು. ಮಕ್ಕಳಿಗೆ ನೃತ್ಯ, ಗಾಯನ, ಅಭಿನಯ ಹಾಗೂ ಚಿತ್ರಕಲಾ ಸ್ಪರ್ಧೆಗಳು ನಡೆದವು.
ಕೊಡಗಿನ ತಿತಿಮತಿಯ ಯಹವಿ ನೃತ್ಯ ತಂಡದ ವಿದುಷಿ ಶ್ವೇತಾ ಮತ್ತು ಶಿಷ್ಯ ವೃಂದದಿಂದ ಶಾಸ್ತ್ರೀಯ ನೃತ್ಯ ನೈವೇದ್ಯ, ಗಾಯತ್ರಿ ಗಾನ ವೃಂದದ ವಿದುಷಿ ಶಾರದಾ ಮತ್ತು ಶಿಷ್ಯರಿಂದ ಗಾನ ನೈವೇದ್ಯ ಪ್ರಸ್ತುತಗೊಂಡವು.
ಸಂಸ್ಥೆಯ ಸ್ಥಾಪಕ ಸಂತೋಷ್ ಮತ್ತು ಕಲಾವಿದರಿಂದ ಅಭಿನಯ ನೈವೇದ್ಯ, ನಾಟ್ಯ ನೃತ್ಯ ಸಂಸ್ಥೆಯ ಪವಿತ್ರಾ ಮತ್ತು ಶಿಷ್ಯರಿಂದ ದೇಸಿ ನೃತ್ಯ ನೈವೇದ್ಯ ಹಾಗೂ ಕವಿ ಶಿಶಿರಂಜನ್ ಅವರ ಸಾಹಿತ್ಯ ನೈವೇದ್ಯ ಕಾರ್ಯಕ್ರಮಗಳು ನೆರೆದವರ ಗಮನಸೆಳೆದವು.
ಸಮಾರೋಪದಲ್ಲಿ ನಡೆದ ‘ಕನ್ನಡ ನಾಗರಾಜೋತ್ಸವ’ದಲ್ಲಿ ಸಾಧಕರಾದ ವೈ.ಎಂ ಪುಟ್ಟಣ್ಣಯ್ಯ (ರಂಗ ಸಂಗೀತ), ಅರಸೀಕೆರೆ ಯೋಗಾನಂದ (ಮಕ್ಕಳ ರಂಗಭೂಮಿ), ಎನ್.ಧನಂಜಯ (ನಾಟಕ), ಸಿ.ಸುಂದರೇಶ್ (ಜಾನಪದ ನೃತ್ಯ), ಶ್ವೇತಾ (ಭರತನಾಟ್ಯ), ಮೈಸೂರು ಗುರುರಾಜ್ (ಜಾನಪದ ಗಾಯನ) ಅವರಿಗೆ ಆಕಾಶವಾಣಿ ಮೈಸೂರು ಉದ್ಘೋಷಕ ಮೈಸೂರು ಉಮೇಶ್ ಅವರು ‘ಕನ್ನಡ ಕಲಾರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.
ಆಯುರ್ ಮಟಮ್ ಆರೋಗ್ಯ ಗ್ರಾಮ ಮುಖ್ಯಸ್ಥ ಮನು ಬಿ.ಮೆನನ್, ಬಿ.ಸಿ.ಎಸ್ ಕನ್‌ಸ್ಟ್ರಕ್ಷನ್ ಮುಖ್ಯಸ್ಥ ಬಿ.ಆನಂದ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದ ವರಪ್ರಸಾದ್ ಭಾಗವಹಿಸಿದ್ದರು. ನಾಟ್ಯ ಸಂಸ್ಥೆ ಅಧ್ಯಕ್ಷೆ ಎನ್.ಪವಿತ್ರಾ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.