
2023ರಲ್ಲಿ ‘ತಾಯಿ’ ಆಶಯದ ಅಡಿ ನಡೆದಿದ್ದ ನಾಟಕೋತ್ಸವದ ಅಂಗವಾಗಿ ನಡೆದಿದ್ದ ಚಲನಚಿತ್ರೋತ್ಸವದ ಪೋಸ್ಟರ್‌ಗಳ ಪ್ರದರ್ಶನ ಹೀಗಿತ್ತು
ಮೈಸೂರು: ಇಲ್ಲಿನ ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಎರಡೂವರೆ ದಶಕಗಳ ಪಯಣದಲ್ಲಿ ಸಾಕ್ಷ್ಯಚಿತ್ರಗಳು ಹಾಗೂ ಸಿನಿಮಾಗಳು ವಿಶೇಷ ಸಾಂಗತ್ಯ ನೀಡಿವೆ.
‘ನಾಟಕ ಮತ್ತು ಸಿನಿಮಾ ಮಾಧ್ಯಮಗಳು ಒಟ್ಟಿಗೇ ಸಾಗಬೇಕು’ ಎಂಬ ಆಶಯಕ್ಕೆ ಅಷ್ಟೇನೂ ಮಹತ್ವ ದೊರಕದ ಸನ್ನಿವೇಶವಿದ್ದಾಗಲೇ ಆರಂಭವಾದ ‘ಚಲನಚಿತ್ರೋತ್ಸವ’ದ ಪಯಣ ನಿರಂತರವಾಗಿ ನಡೆದಿದೆ. ಉತ್ಸವದಲ್ಲಿ ನಾಟಕಗಳ ವೀಕ್ಷಣೆಯ ಅಭಿರುಚಿಯ ಜೊತೆಗೆ, ಸಿನಿಮಾ ವೀಕ್ಷಣೆಯ ಅಭಿರುಚಿ ನಿರ್ಮಾಣದ ಪ್ರಯತ್ನವೂ ನಡೆದಿದೆ.
‘ಮೊದಲಿಗೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸೂಕ್ತ ಸ್ಥಳಾವಕಾಶವೇ ಇರಲಿಲ್ಲ. ಅಕ್ಕ ನಾಟಕೋತ್ಸವದಲ್ಲಿ ಎರಡು ದಿನವಷ್ಟೇ ನಡೆದ ಪ್ರದರ್ಶನಕ್ಕೆ ರಂಗಾಯಣದ ಆವರಣದಲ್ಲಿ ಬಸ್ ನಿಲ್ಲಿಸುತ್ತಿದ್ದ ಶೆಡ್ ಅನ್ನೇ ಬಳಸಲಾಗಿತ್ತು’ ಎಂದು ಸ್ಮರಿಸುತ್ತಾರೆ ನಿರಂತರವಾಗಿ ಪ್ರದರ್ಶನದ ನೇತೃತ್ವ ವಹಿಸಿರುವ ಮೈಸೂರು ಅಮೆಚ್ಯೂರ್ ನ್ಯಾಚುರಲಿಸ್ಟ್ (ಮ್ಯಾನ್) ಸಂಸ್ಥೆಯ ಕೆ.ಮನು.
‘ಬಸ್ ಶೆಡ್‌ಗೆ ಕಿಟಕಿಗಳಿರಲಿಲ್ಲ. ಅಲ್ಲಿಯೇ ಕತ್ತಲ ವಾತಾವರಣ ಏರ್ಪಡಿಸಿಕೊಂಡು ಸಿನಿಮಾ ಪ್ರದರ್ಶನ ನಡೆಸುತ್ತಿದ್ದೆವು. ನಂತರದ ವರ್ಷಗಳಲ್ಲಿ ನಟರ ತಾಲೀಮು ಕೊಠಡಿಗೆ ಬಂದೆವು. ಅಲ್ಲಿಯೂ ಕಿಟಕಿಗಳಿಗೆ ಪರದೆ ಕಟ್ಟುತ್ತಿದ್ದೆವು. ಜನ ನಾಟಕಕ್ಕೇ ಬರುವುದಿಲ್ಲ. ಸಿನಿಮಾ ಯಾಕೆ ಎಂದು ಕೇಳುವವರ ನಡುವೆ, ಎರಡೂ ಮಾಧ್ಯಮಗಳು ಒಟ್ಟಿಗೇ ಸಾಗುವ ಮಹತ್ವದ ಕುರಿತು ಅರಿವು ಮೂಡಿಸುವ ಸಾಹಸವೂ ಇರುತ್ತಿತ್ತು. ಕೆಲವು ವರ್ಷಗಳ ಬಳಿಕ ಶ್ರೀರಂಗದಲ್ಲಿ ಸ್ಥಳಾವಕಾಶ ಕಲ್ಪಿಸಲಾಯಿತು’ ಎಂದು ಸ್ಮರಿಸಿದರು.
‘ಉತ್ಸವದ ಆಶಯಕ್ಕೆ ಅನುಗುಣವಾಗಿ ಚಲನಚಿತ್ರೋತ್ಸವವನ್ನು ರೂಪಿಸಲು ಒಂದು ತಿಂಗಳ ಸಿದ್ಧತೆಯಷ್ಟೇ ಇರುತ್ತಿತ್ತು. ಆಗ ಇಂಟರ್ನೆಟ್ ಇರಲಿಲ್ಲ. ವೆಬ್‌ಸೈಟ್‌ಗಳೂ ಗೊತ್ತಿರಲಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದಂತೆ ಸಿನಿಮಾಗಳ ಹುಡುಕಾಟವಿರುತ್ತಿತ್ತು. ಆಗ, ಬೇರೆ ಕಡೆ ನಡೆಯುತ್ತಿದ್ದ ಉತ್ಸವಗಳ ಬ್ರೋಷರ್‌ಗಳನ್ನು ಸಂಗ್ರಹಿಸುತ್ತಿದ್ದೆವು. ಸಾಕ್ಷ್ಯಚಿತ್ರಗಳ ಕಾಪಿಗಳನ್ನು ತರುತ್ತಿದ್ದೆವು. ಸಿನಿಮಾ ಕ್ಲಬ್‌ಗಳ ಪರಿಚಯವಾಯಿತು. ಸಿನಿಮಾ ನಿರ್ದೇಶಕರಾದ ಬಾಬು ಈಶ್ವರ್‌ಪ್ರಸಾದ್, ಪ್ರಕಾಶ್ ಬಾಬು ಅಂಥವರು ನೆರವಾದರು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾಕ್ಷ್ಯಚಿತ್ರಗಳ ಸಿಡಿ, ಡಿವಿಡಿಗಳನ್ನು ತರಲು ಬೆಂಗಳೂರಿಗೆ ಹೋಗುತ್ತಿದ್ದೆ. ಕೆಲವು ರಸ್ತೆ ಬದಿಯಲ್ಲಿ ಸಿಗುತ್ತಿದ್ದವು. ಮಾರುವವರು, ‘ಏನು ಬೇಕು ಹೇಳ್ರಿ ಕೊಡ್ತೀವಿ’ ಎನ್ನುತ್ತಿದ್ದರು. ಅಂಥ ಜಾಗದಲ್ಲೇ ಸಿನಿಮಾ ಹಬ್ಬಕ್ಕೆ ತೂಕ ಕೊಟ್ಟಂಥ ಸಿನಿಮಾಗಳು ಸಿಕ್ಕಿವೆ’ ಎಂದು ಸಂತಸಪಟ್ಟರು.
‘ಉತ್ಸವದ ಚಟುವಟಿಕೆಗಳು ಸಂಜೆ ವೇಳೆ ಶುರುವಾಗುವುದರಿಂದ, ಬೆಳಿಗ್ಗೆಯಿಂದ ಸಂಜೆವರೆಗೂ ಸಿನಿಮಾ ಪ್ರದರ್ಶನ ಹಮ್ಮಿಕೊಳ್ಳಲು ನಿರ್ಧರಿಸಿದೆವು. ಮೈಸೂರು ಫಿಲಂ ಸೊಸೈಟಿ, ಕೆ.ಮುದ್ದುಕೃಷ್ಣ ಅಂಥವರು ನಿರಂತರವಾಗಿ ಜೊತೆಯಾದರು. ವಿಷಯವೊಂದರ ಬಹುಮುಖಿ ನೆಲೆಯನ್ನು ಪ್ರಸ್ತುತಪಡಿಸುವುದು ನಮ್ಮ ಆಶಯವಾಗಿತ್ತು. ವಿವಿಧ ರಾಜಕೀಯ ಸಿದ್ಧಾಂತಗಳ ನಿರ್ದೇಶಕರು ಬಂದರೂ, ಪ್ರದರ್ಶನದ ಮೇಲೆ ಯಾರೂ ಪ್ರಭಾವ ಬೀರಲಿಲ್ಲ, ಯಾವುದೇ ಒತ್ತಡ ಹೇರಲಿಲ್ಲ’ ಎಂದು ಹೇಳಿದರು.
ಬಹುರೂಪಿ ನಾಟಕೋತ್ಸವಕ್ಕೆ ಮುನ್ನ ನಡೆದ ‘ಅಕ್ಕ’ ಉತ್ಸವದಲ್ಲಿ, ನಾಗರಹೊಳೆಯ ಕಾಡುಕುರುಬರ ಜೀವನ ಕುರಿತ ’ಸೂಟ್ಸ್ ಅಂಡ್ ಸ್ಯಾವೇಜಸ್’ ಸಾಕ್ಷ್ಯಚಿತ್ರ ಪ್ರದರ್ಶನದ ಚರ್ಚೆ ಸ್ಮರಣೀಯಕೆ.ಮನು, ಮ್ಯಾನ್ ಸಂಸ್ಥೆ
ಬಹುರೂಪಿ ಉತ್ಸವ ಬಂದರೆ ಜನ ಪ್ರಪಂಚ ಮತ್ತು ಕಲೆಯನ್ನು ಮನದಣಿಯೆ ಆಸ್ವಾದಿಸುತ್ತಾರೆ. ಮನದಿಂದ ಗಡಿಗಳನ್ನು ಕಿತ್ತು ಹಾಕಿದವನಿಗೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಹೀಗೆ ಪ್ರತಿ ಚಳಿಗಾಲ ಬಂದಾಗಲೂ ಕನಿಷ್ಠ ಇನ್ನೂರು ಸಿನಿಮಾಗಳನ್ನು ನೋಡುವ ಅವಕಾಶ ನನಗೆ ಸಿಗುತ್ತದೆ. ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ಸಾಕ್ಷ್ಯಚಿತ್ರಗಳ ಹುಡುಕಾಟ ಹೊಸ ಪಾಠಗಳನ್ನು ಕಲಿಸಿದೆ’ ಎಂಬುದು ಮನು ಅವರ ವಿನಮ್ರ ನುಡಿ.
‘ಮಾನಸಗಂಗೋತ್ರಿಯ ವಿದ್ಯಾರ್ಥಿಗಳು ಬಂದು ಸಾಕ್ಷ್ಯಚಿತ್ರಗಳನ್ನು ನೋಡಿದರು. ಈಗ ಸಿನಿಮಗಳ ಪಟ್ಟಿ ಕೊಡಿ ಸಾಕು. ನಾವು ಇದ್ದಲ್ಲಿಯೇ ನೋಡುತ್ತೇವೆ ಎನ್ನುತ್ತಾರೆ. ಉತ್ತಮ ಸಿನಿಮಾಗಳನ್ನು ಹುಡುಕುವ ಕಷ್ಟ ತಪ್ಪುತ್ತದೆ ಎಂಬುದು ಅವರ ಲೆಕ್ಕಾಚಾರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.