
ಮೈಸೂರು: ‘ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೆಲವು ಪರಿಣಾಮಕಾರಿ ಕೈಗೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳ ವಲಯವನ್ನು ಸ್ಥಾಪಿಸಬೇಕು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚನೆ ನೀಡಿದರು.
ಇಲ್ಲಿನ ಮಹಾನಗರಪಾಲಿಕೆಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಬೀದಿಬದಿವ ವ್ಯಾಪಾರಿಗಳಿಗೆ ಪೂರಕವಾಗಿ ಕೆಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದ ಅಗತ್ಯವಿದೆ. ಅವರಿಂದ ಜನರಿಗೆ ಯಾವುದೇ ತೊಂದರೆ ಎದುರಾಗಬಾರದು. ಮಾರಾಟ ವಲಯಗಳನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಯೋಜನೆ ರೂಪಿಸಬೇಕು’ ಎಂದು ನಿರ್ದೇಶನ ನೀಡಿದರು.
‘ನಗರದಲ್ಲಿ ಸುರಕ್ಷತೆ, ಭದ್ರತೆ ಮತ್ತು ಸ್ವಚ್ಛತೆ ಖಚಿತಪಡಿಸಬೇಕಾಗಿದೆ. ಎಲ್ಲಾ ಮಾರಾಟಗಾರರಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡಬೇಕು. ವಲಯಗಳನ್ನು ರಚಿಸುವ ಪ್ರಕ್ರಿಯೆಯಲ್ಲಿ ಯಾವುದೇ ವ್ಯಾಪಾರಿಗಳಿಗೆ ತೊಂದರೆ ಆಗದಂತೆಯೂ ನೋಡಿಕೊಳ್ಳಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ತಿಳಿಸಿದರು.
‘ಮೈಸೂರು ಸ್ವಚ್ಛ ಮತ್ತು ಪರಂಪರೆಯ ನಗರವಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗಲು ಕೆಲವು ಪರಿಣಾಮಕಾರಿ ಯೋಜನೆ ರೂಪಿಸಬೇಕು. ಅದನ್ನು ಕಾರ್ಯಾನುಷ್ಠಾನ ಮಾಡಬೇಕು. ಕೆಲವು ಬೀದಿಬದಿ ವ್ಯಾಪಾರಿಗಳ ವಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಪರಿಶೀಲನೆ ನಡೆಸುತ್ತೇನೆ. ಅತಿ ಶೀಘ್ರದಲ್ಲೇ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ’ ಎಂದರು.
‘ದಸರಾ ಮತ್ತು ಇತರ ಜಾತ್ರೆ, ಉತ್ಸವ, ರಥೋತ್ಸವ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾದಾಗ ವಿಶೇಷ ಹಾಕಿಂಗ್ ವಲಯಗಳನ್ನು ರಚಿಸಬಹುದು. ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಹಾಗೂ ಉಪ ಆಯುಕ್ತ ದಾಸೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.