ಮೈಸೂರು: ಇಲ್ಲಿರುವ ವಿಶ್ವವಿಖ್ಯಾತ ಪ್ರವಾಸಿತಾಣ ಹಾಗೂ ವಾರ್ಷಿಕ ಲಕ್ಷಾಂತರ ಮಂದಿ ಸಂದರ್ಶಕರು ಭೇಟಿ ನೀಡುವ ಚಾಮರಾಜೇಂದ್ರ ಮೃಗಾಲಯದಲ್ಲಿ ಈಗ ‘ಪ್ರಮೀಳಾ ಆಡಳಿತ’ ನಡೆಯುತ್ತಿದೆ.
1892ರಲ್ಲಿ ಸ್ಥಾಪಿಸಲಾದ ದೇಶದ ಹಳೆಯ ಮತ್ತು ಅತಿ ದೊಡ್ಡ ಮೃಗಾಲಯಗಳಲ್ಲಿ ಒಂದಾಗಿದೆ. 168ಕ್ಕೂ ಹೆಚ್ಚು ಪ್ರಭೇದಗಳ 1,450ಕ್ಕೂ ಹೆಚ್ಚು ಪ್ರಾಣಿ–ಪಕ್ಷಿಗಳಿಗೆ ನೆಲೆಯಾಗಿದ್ದು, ಅಪರೂಪದ ಪ್ರಾಣಿಗಳನ್ನು ಸಂರಕ್ಷಿಸುವಲ್ಲಿ ಮತ್ತು ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಂಬಾವಿಲಾಸ ಅರಮನೆಯ ನಂತರ ಮೈಸೂರಿನಲ್ಲಿ ಹೆಚ್ಚು ಭೇಟಿ ನೀಡುವ 2ನೇ ತಾಣವಾಗಿದೆ. ಮಕ್ಕಳಿಗೆ ಪ್ರಿಯವಾದ ಸ್ಥಳವೂ ಹೌದು. ಇಲ್ಲಿನ ನಿರ್ವಹಣೆ ಅತ್ಯಂತ ಸವಾಲಿನ ಹಾಗೂ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಹುದ್ದೆಗಳನ್ನು ಮಹಿಳಾ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ. ಇದು ಈ ಮೃಗಾಲಯದ ಇತಿಹಾಸದಲ್ಲೇ ವಿಶೇಷವಾದ ವಿದ್ಯಮಾನವಾಗಿದೆ.
‘ಸಾರಥಿ’ಯಾಗಿ ಕಾರ್ಯನಿರ್ವಾಹಕ ನಿರ್ದೇಶಕಿ ಸ್ಥಾನದಲ್ಲಿ ಅನುಷಾ ಪಿ. ಕಾರ್ಯನಿರ್ವಹಿಸುತ್ತಿದ್ದಾರೆ. ಉಪ ನಿರ್ದೇಶಕಿಯಾಗಿ ದೀಪಾ ಹಾಗೂ ಆರ್‌ಎಫ್ಒ (ವಲಯ ಅರಣ್ಯಾಧಿಕಾರಿ) ಆಗಿ ದಿವ್ಯಶ್ರೀ ಕೆಲಸ ಮಾಡುತ್ತಿದ್ದಾರೆ. ಈ ಮೃಗಾಲಯವು ಈವರೆಗೆ 22 ಕಾರ್ಯನಿರ್ವಾಹಕ ನಿರ್ದೇಶಕರನ್ನು (ಇಡಿ) ಕಂಡಿದೆ. ಇವರಲ್ಲಿ ಕಮಲಾ ಅವರು 2016ರಿಂದ 17ರವರೆಗೆ ಕೆಲಸ ಮಾಡಿ, ಇ.ಡಿ.ಯಾದ ಮೊದಲ ಮಹಿಳಾ ಅಧಿಕಾರಿ ಎನಿಸಿದ್ದರು. ಇದಾದ ನಂತರ ಈಗ, ಅನುಷಾ ಇ.ಡಿ.ಯಾಗಿ ನೇಮಕಗೊಂಡಿರುವ 2ನೇ ಮಹಿಳಾ ಅಧಿಕಾರಿಯಾಗಿದ್ದಾರೆ.
ಅವರು ಈಚೆಗಷ್ಟೆ ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ ಅವರು, ಬೆಂಗಳೂರನ್ನು ಕೇಂದ್ರ ಸ್ಥಾನವನ್ನಾಗಿ ಹೊಂದಿರುವ ಜೆಎಲ್‌ಆರ್ (ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್) ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದರು. ಚಿತ್ರದುರ್ಗದವರಾದ ಅವರು ತಮ್ಮ ಪ್ರೊಬೇಷನರಿ ಅವಧಿಯಲ್ಲಿ ಮೈಸೂರು ವೃತ್ತದಲ್ಲೇ ಕೆಲಸ ಮಾಡಿದ್ದರು. ಬಳಿಕ ಹುಣಸೂರು, ನಾಗರಹೊಳೆ ಹಾಗೂ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಈ ಮೃಗಾಲಯದಲ್ಲಿ ಇದೇ ಮೊದಲಿಗೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರದ (ಕೆಝಡ್‌ಎ) ಅಡಿಯಲ್ಲಿ ಮೃಗಾಲಯದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಇದರ ಅಧ್ಯಕ್ಷರ ಕಚೇರಿ ಮೈಸೂರು ಝೂನಲ್ಲೇ ಇದೆ. ಸದ್ಯ, ಈ ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿ ನಡೆದಿಲ್ಲ. ಹೀಗಾಗಿ, ಅಧಿಕಾರಿಗಳಿಗೇ ಹೆಚ್ಚಿನ ಜವಾಬ್ದಾರಿ ಇದೆ.
ನಿರ್ವಹಣೆಯೇ ಮುಖ್ಯ: ‘ಮೃಗಾಲಯದಲ್ಲಿ ಪ್ರಾಣಿಗಳು ಹಾಗೂ ಸಿಬ್ಬಂದಿ ನಿರ್ವಹಣೆಯೇ ಪ್ರಮುಖ ಕೆಲಸ. ನಿಗಾ ವಹಿಸಬೇಕು. ಆಗಾಗ, ಭೇಟಿ ಕೊಟ್ಟು ಪರಿಶೀಲಿಸುತ್ತಿರಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ಇದೆಲ್ಲವನ್ನೂ ಸಮರ್ಪಕವಾಗಿ ನಡೆಸಿಕೊಂಡು ಹೋಗುವುದಕ್ಕೆ ಆದ್ಯತೆ ನೀಡುತ್ತಿದ್ದೇನೆ’ ಎಂದು ಅನುಷಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ದಸರಾ ಸಂದರ್ಭದಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಇರುತ್ತದಾದ್ದರಿಂದ ಮೃಗಾಲಯದಲ್ಲಿನ ಪ್ರಾಣಿ–ಪಕ್ಷಿಗಳನ್ನು ವೀಕ್ಷಿಸಲು ಸಾವಿರಾರು ಮಂದಿ ಬರುತ್ತಾರೆ. ಹೀಗಾಗಿ, ಜನಸಂದಣಿ ನಿರ್ವಹಣೆಗೆ ಕ್ರಮ ವಹಿಸಲಾಗುವುದು. ಪ್ರಥಮ ಚಿಕಿತ್ಸೆ ಹಾಗೂ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ. ಕುಪ್ಪಣ್ಣ ಉದ್ಯಾನ, ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ನಡೆಯುವಂತೆ ನಮ್ಮಲ್ಲೂ ಫಲ–ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುವುದು. ಮೃಗಾಲಯವನ್ನು ಅತ್ಯಾಕರ್ಷಿಸುವಂತೆ ಮಾಡುವುದಕ್ಕೆ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲಾಗುವುದು. ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ. ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು’ ಎಂದು ತಿಳಿಸುತ್ತಾರೆ ಅವರು.
ಇದೇ ಮೊದಲಿಗೆ ವಿಶೇಷ ವಿದ್ಯಮಾನ ಇಡಿ ಹುದ್ದೆಗೆ 2ನೇ ಬಾರಿಗೆ ಮಹಿಳಾ ಅಧಿಕಾರಿ ದಸರೆಯಲ್ಲಿ ಫಲಪುಷ್ಪ ಪ್ರದರ್ಶನ, ವಿದ್ಯುತ್ ದೀಪಾಲಂಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.