ರಾಧಾ–ರುಕ್ಮಿಣಿ
ಮೈಸೂರು: ವೃತ್ತಿ ರಂಗಭೂಮಿಯ ಹಿರಿಯ ನಟಿಯರಾದ ರಾಧಾ–ರುಕ್ಮಿಣಿ ಸಹೋದರಿಯರನ್ನು ಇಲ್ಲಿನ ನಟನ ರಂಗಶಾಲೆಯಿಂದ ನೀಡುವ ‘ನಟನ ಪುರಸ್ಕಾರ–2025’ಕ್ಕೆ ಆಯ್ಕೆ ಮಾಡಲಾಗಿದೆ.
‘ನಟನ’ದ ಸಂಸ್ಥಾಪಕ ಅಧ್ಯಕ್ಷ ಎನ್.ಸುಬ್ರಹ್ಮಣ್ಯಂ ನೆನಪಿನಲ್ಲಿ ನೀಡುವ ಪುರಸ್ಕಾರ ಇದಾಗಿದೆ.
ಈ ಕಲಾವಿದೆಯರು ರಂಗಭೂಮಿಗೆ ಅತಿ ದೀರ್ಘ ಅವಧಿಯಿಂದ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 10ಸಾವಿರ, ಸ್ಮರಣಿಕೆ ಹಾಗೂ ಅಭಿನಂದನಾಪತ್ರ ಒಳಗೊಂಡಿದೆ. ಏ.11ರಂದು ದಟ್ಟಗಳ್ಳಿಯ ಸುಪ್ರೀಂ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆಯಲಿರುವ ‘ರಜಾ–ಮಜಾ’ ಶಿಬಿರದಲ್ಲಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು’ ಎಂದು ರಂಗಕರ್ಮಿ ಮಂಡ್ಯ ರಮೇಶ್ ತಿಳಿಸಿದ್ದಾರೆ.
‘1948ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಸಂಗೀತ ವಿದ್ವಾನ್ ಹನುಮಂತಾಚಾರ್– ಗೌರಮ್ಮ ದಂಪತಿಗೆ ಅವಳಿ ಮಕ್ಕಳಾಗಿ ರಾಧಾ – ರುಕ್ಮಿಣಿ ಜನಿಸಿದರು. 1961ರಲ್ಲಿ ಕೆ.ಆರ್.ನಗರ ಕ್ಯಾಂಪ್‌ನಲ್ಲಿ ಗುಬ್ಬಿ ವೀರಣ್ಣನವರ ನಾಟಕ ಕಂಪನಿಗೆ ಚಿಕ್ಕ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿದರು.
‘ಲವ-ಕುಶ’ ನಾಟಕದಲ್ಲಿ ಲವಕುಶ, ‘ಕೃಷ್ಣ ಲೀಲಾ’ದಲ್ಲಿ ಕೃಷ್ಣ-ಬಲರಾಮರಾಗಿ, ‘ಗಾಜಿನ ಮನೆ’ ನಾಟಕದಲ್ಲಿ ನಾಗೇಶ-ಸುರೇಶ ಪಾತ್ರಧಾರಿಗಳಾಗಿ ಅಭಿನಯಿಸಿ ರಾಜ್ಯದಾದ್ಯಂತ ಜನಮೆಚ್ಚುಗೆ ಗಳಿಸಿದವರು. ಒಟ್ಟು 20ಸಾವಿರ ಪ್ರಯೋಗಗಳಲ್ಲಿ ನಟಿಸಿದ್ದಾರೆ. ಇವರು, ಗುಬ್ಬಿ ಕಂಪನಿಯಲ್ಲೆ ಹುಟ್ಟಿ ಬೆಳೆದಂತಹ ಜಿ.ವಿ.ಕೃಷ್ಣ ಅವರನ್ನು ವರಿಸಿದ್ದಾರೆ. 1974ರಲ್ಲಿ ತಮ್ಮದೇ ಆದ ಜಿ.ವಿ.ಕೃಷ್ಣ ನಾಟಕ ಕಂಪೆನಿ ಪ್ರಾರಂಭಿಸಿದರು’.
‘ಹೆಸರಾಂತ ಕಲಾವಿದರಾದ ಗುಬ್ಬಿ ವೀರಣ್ಣ, ಬಿ.ಜಯಮ್ಮ, ಮಾಲತಿ, ಸ್ವರ್ಣ, ಬಿ.ಜಯಶ್ರೀ, ಶಿವಾನಂದ, ಪಿ.ಕಾಳಿಂಗರಾವ್, ಚೋಮನದುಡಿ ವಾಸುದೇವರಾವ್, ಜಿ.ವಿ ಅಯ್ಯರ್, ಬಿ.ವಿ.ಕಾರಂತ, ಉದಯ್‌ಕುಮಾರ್, ಕಲ್ಯಾಣ್ ಕುಮಾರ್, ಬಾಲಕೃಷ್ಣ, ನರಸಿಂಹರಾಜು, ದಿನೇಶ್, ಮುಸುರಿ ಕೃಷ್ಣಮೂರ್ತಿ, ಡಿಂಗ್ರಿ ನಾಗರಾಜ್, ಎಂ.ಎಸ್.ಉಮೇಶ್, ಲೀಲಾವತಿ, ಕಲ್ಪನಾ, ಮಾಸ್ಟರ್ ಹಿರಣ್ಣಯ್ಯ, ಸುಬ್ಬಯ್ಯ ನಾಯ್ಡು ಅವರಂತಹ ಹಿರಿಯ ಕಲಾವಿದರೊಂದಿಗೆ ನಟಿಸಿದ್ದಾರೆ.
ಕೃಷ್ಣ-ರಾಧಾ-ರುಕ್ಮಿಣಿ ದಂಪತಿಯ ಮಕ್ಕಳಾದ ಶರಣ್, ಶ್ರುತಿ, ಉಷಾ ಹೆಸರಾಂತ ಕಲಾವಿದರಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.