ADVERTISEMENT

ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 8:38 IST
Last Updated 19 ಡಿಸೆಂಬರ್ 2025, 8:38 IST
   

ಮೈಸೂರು: ಕೇಂದ್ರ ಸರ್ಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಅನಗತ್ಯವಾಗಿ ಬಳಸಿಕೊಂಡು ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅವರನ್ನು ತಡೆದ ಪೊಲೀಸರು ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

'ನ್ಯಾಷನಲ್ ಹೆರಾಲ್ಡ್ ಕೇಂದ್ರದ ಬಿಜೆಪಿ ದ್ರೋಹಿ ನಡೆ', 'ಯಂಗ್ ಇಂಡಿಯಾಗೆ ಜಯ', 'ಗೆಲುವು ಸದಾ ಸತ್ಯದ ಪರ', 'ನ್ಯಾಷನಲ್ ಹೆರಾಲ್ಡ್, ಬಿಜೆಪಿ ಕ್ಲೀನ್ ಬೋಲ್ಡ್', 'ಇಡಿ ದುರ್ಬಳಕೆ ಕೋರ್ಟ್ ಆಕ್ಷೇಪ', 'ಸುಳ್ಳಿನ ವಿರುದ್ಧ ಸತ್ಯಕ್ಕೆ ಗೆಲುವು', 'ಇಡಿ ಬಳಸಿ ಹೇಡಿಯಾದ್ರು', 'ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಸಿದ್ದಾಂತ ಚಿರಾಯುವಾಗಲಿ' ಎಂದು ಘೋಷಣೆ‌ ಕೂಗಿದರು.

ADVERTISEMENT

ಬಿಜೆಪಿ ಕಚೇರಿಯ ಕಡೆಗೆ ಮುಖಂಡರು ಹಾಗೂ ಕಾರ್ಯಕರ್ತರು ನುಗ್ಗಿದರು. ಪೊಲೀಸರು ಬ್ಯಾರಿಕೇಡ್ ಹಾಕಿ ಅವರನ್ನು ತಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬ್ಯಾರಿಕೇಡ್ ಮುರಿದು ನುಗ್ಗಲು ಯತ್ನಿಸಿದಾಗ ಪೊಲೀಸರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಬಿಜೆಪಿಯಿಂದ ಪ್ರತಿರೋಧ: ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ಯಿಗೆ ಹಾಕಲು ಯತ್ನಿಸಿದಾಗ, ಬಿಜೆಪಿ ಕಾರ್ಯಕರ್ತರು ಪ್ರತಿರೋಧ ಒಡ್ಡಿದರು. ಕಾಂಗ್ರೆಸ್ ಕಾರ್ಯಕರ್ತರ ಕಡೆಗೆ ನುಗ್ಗಿ ಬಂದರು.

'ಕಾಂಗ್ರೆಸ್ ಗೂಂಡಾಗಿರಿಗೆ ದಿಕ್ಕಾರ', 'ಕಾಂಗ್ರೆಸ್ ಪುಡಾರಿಗಳಿಗೆ ಧಿಕ್ಕಾರ', 'ವಂದೇ ಮಾತರಂ', 'ಭಾರತ್ ಮಾತಾಕೀ ಜೈ', 'ಜೈ ಶ್ರೀರಾಂ' ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಅವರನ್ನೂ ತಡೆದು ವಶಕ್ಕೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.