ಪಿರಿಯಾಪಟ್ಟಣ: ಸಿಐಟಿಯು ಕಾರ್ಮಿಕ ಸಂಘದ ನೇತೃತ್ವದಲ್ಲಿ ನಡೆದ ರಾಷ್ಟ್ರವ್ಯಾಪಿ ಕಾರ್ಮಿಕರ ಮುಷ್ಕರಕ್ಕೆ ತಾಲ್ಲೂಕು ಅಂಗನವಾಡಿ ನೌಕರರು ಮತ್ತು ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪೊಲೀಸ್ ಠಾಣೆ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿದ ನೂರಾರು ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು, ಬಿ.ಎಂ. ರಸ್ತೆ ಮೂಲಕ ಸಾಗಿ ತಹಶೀಲ್ದಾರ್ ಕಚೇರಿ ಬಳಿ ಜಮಾಯಿಸಿದರು.
ಅಂಗನವಾಡಿ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷೆ ರಾಣಿ ಮಾತನಾಡಿ, ‘ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುತ್ತಿದ್ದು, ಇದಕ್ಕೆ ಮುಂಗಡವಾಗಿ ಸರ್ಕಾರ ಹಣ ಪಾವತಿಸಬೇಕು, ಬಿಎಲ್‌ಒ ಕೆಲಸದಿಂದ ನಮಗೆ ಮುಕ್ತಿ ನೀಡಬೇಕು, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು, ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಘಟಕದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ‘ಶಾಲೆಯಲ್ಲಿ ಅಡುಗೆ ಮನೆಯ ಒಳಗಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಬದಲು ದಾಸ್ತಾನು ಕೊಠಡಿಗೆ ಅಳವಡಿಸಬೇಕು’ ಎಂದು ಒತ್ತಾಯಿಸಿದರು.
ತಹಶೀಲ್ದಾರ್ ನಿಸರ್ಗಪ್ರಿಯ ಅವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಮೀನಾಕ್ಷಿ, ಖಜಾಂಚಿ ಎಂ.ಜೆ. ಸುಧಾಮಣಿ, ಪದಾಧಿಕಾರಿಗಳಾದ ಎಸ್. ಜಯಂತಿ, ಕೆ.ರಾಜಿ, ಟಿ.ಸಿ.ಶೀಲಾ, ಶೋಭಾ, ಎ.ಜೆ.ಪ್ರತಿಮಾ, ಬಿಸಿಯೂಟದ ನೌಕರರ ಪ್ರಧಾನ ಕಾರ್ಯದರ್ಶಿ ಮಂಜುಳಾ, ಖಜಾಂಚಿ ಸುಮಿತ್ರ, ರೈತ ಸಂಘದ ಅಧ್ಯಕ್ಷ ಸ್ವಾಮಿಗೌಡ, ಪದಾಧಿಕಾರಿ ಗುರುರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.