
ಪಿರಿಯಾಪಟ್ಟಣ: ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಪುರಸಭೆಯಿಂದ ಶನಿವಾರ ಮರುಚಾಲನೆ ನೀಡಲಾಯಿತು.
ಪಟ್ಟಣದಲ್ಲಿ ಮಳೆಗಾಲದಲ್ಲಿ ಬೆಟ್ಟದಪುರ ಮುಖ್ಯ ರಸ್ತೆಯ ಬಳಿ ಮುಖ್ಯ ಬಡಾವಣೆಗಳಿಗೆ ನೀರು ನುಗ್ಗಿ ತೊಂದರೆ ಉಂಟಾಗುತ್ತಿತ್ತು, ಅಲ್ಲದೆ ರಸ್ತೆ ಮುಚ್ಚಿ ಹೋಗುತ್ತಿರುವ ಬಗ್ಗೆ ಸಾರ್ವಜನಿಕರು ಸಚಿವ ಕೆ.ವೆಂಕಟೇಶ್ ಅವರಿಗೆ ದೂರು ನೀಡಿದ್ದರು. ಇದರಿಂದ ಸಚಿವರು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಒಂದು ಕೋಟಿ ಬಿಡುಗಡೆಗೊಳಿಸಿ ಪುರಸಭೆ ಮೂಲಕ ಟೆಂಡರ್ ಮಾಡಿಸಿ ಕೆಲಸ ಆರಂಭಿಸಲಾಗಿತ್ತು.
ಬೆಟ್ಟದಪುರ ರಸ್ತೆ ದಾಟಿ ಮುಂದೆ ಹೋಗುತ್ತಿದ್ದಂತೆ ಕಾಮಗಾರಿಗೆ ಅಕ್ಕಪಕ್ಕದ ಜಮೀನು ಮತ್ತು ನಿವೇಶನದವರು ಗಲಾಟೆ ಮಾಡಿ ಕಾಮಗಾರಿ ನಡೆಸದಂತೆ ಸ್ಥಗಿತಗೊಳಿಸಿದ್ದರು. ಈ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಎಚ್.ಪಿ. ಮಧು ಮತ್ತು ಸರ್ವೆ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಮಾತುಕತೆ ನಡೆಸಿ ಅಕ್ಕಪಕ್ಕದವರಿಗೆ ತಿಳಿಹೇಳಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇದ್ದ ಸಮಸ್ಯೆ ಬಗೆಹರಿದು ರಾಜಕಾಲುವೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ.
‘ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ರಾಜಕಾಲುವೆ ನಿರ್ಮಾಣಕ್ಕೆ ಸಚಿವರು ಸಹಕಾರ ನೀಡಿ ಅನುದಾನ ತಂದಿದ್ದಾರೆ. ಇದು ಸದ್ಬಳಕೆಯಾಗಬೇಕು ಸಾರ್ವಜನಿಕ ಹಿತಾಸಕ್ತಿಯ ಕೆಲಸ ನಡೆಯುವಾಗ ಸ್ವಹಿತಾಸಕ್ತಿಗಾಗಿ ಅಡಚಣೆ ಮಾಡಬಾರದು. ಸರ್ವೆ ಇಲಾಖೆಯ ಅಧಿಕಾರಿಗಳು ಸ್ಥಳ ಗುರುತಿಸಿರುವಂತೆ ಆ ಸ್ಥಳದಲ್ಲಿಯೇ ಕಾಲುವೆ ಕೆಲಸ ಆರಂಭಿಸಲಾಗಿದ್ದು, ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು. ಯಾರಿಗೂ ಅನ್ಯಾಯವಾಗದಂತೆ ರಾಜಕಾಲುವೆ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪಿ.ಮಧು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.