ADVERTISEMENT

ಸಿದ್ದರಾಮಯ್ಯನವರೇ ನಿಮ್ಮ ಸುತ್ತ ಎಂಥವರನ್ನು ಸಾಕಿಕೊಂಡಿದ್ದೀರಿ?: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:14 IST
Last Updated 5 ಜನವರಿ 2026, 6:14 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಸಿದ್ದರಾಮಯ್ಯ ಅವರೇ ನಿಮ್ಮ ಸುತ್ತಲೂ ಎಂಥವರನ್ನು ಸಾಕಿಕೊಂಡಿದ್ದೀರ ನೋಡಿ. ಜೀವ ತೆಗೆಯುವರನ್ನು ಅವರು ಸಾಕಿದ್ದಾರೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯ ಈ ವರ್ತನೆಗೆ ಅವನಷ್ಟೆ ಕಾರಣವಲ್ಲ. ಅವನನ್ನು ಸಲುಹುತ್ತಿರುವವರ ತಪ್ಪೂ ಇದೆ’ ಎಂದು ಮಾಜಿ ಸಂಸದ ಬಿಜೆಪಿಯ ಪ್ರತಾಪ ಸಿಂಹ ಟೀಕಿಸಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಭರತ್ ರೆಡ್ಡಿ ವರ್ತನೆಯನ್ನು ನಾಗರಿಕ ಸಮಾಜ ಸಹಿಸುವುದಿಲ್ಲ. ಬಳ್ಳಾರಿ ಘಟನೆಯಿಂದಾಗಿ ಇಡೀ ರಾಜ್ಯವೇ ತಲೆ ತಗ್ಗಿಸುವ ಸ್ಥಿತಿ ಬಂದಿದೆ. ಇಂತಹ ಘಟನೆ ಹಿಂದೆ ಉತ್ತರಪ್ರದೇಶ, ಬಿಹಾರಗಳಲ್ಲಿ ನಡೆಯುತ್ತಿತ್ತು. ಈಗ ಕರ್ನಾಟಕದಲ್ಲೂ ಆಗಿದೆ’ ಎಂದು ದೂರಿದರು.

‘ಭರತ್ ರೆಡ್ಡಿ ವಿಧಾನಸಭೆಯಲ್ಲಿ ಉನ್ಮಾದದಿಂದ ಮಾತನಾಡುವಾಗಲೇ ವಿಧಾನಸಭಾಧ್ಯಕ್ಷರು ಕ್ರಮ ತೆಗೆದುಕೊಳ್ಳಬೇಕಿತ್ತು. ಆಗ ಪೋಷಿಸಿದ ಕಾರಣದಿಂದಲೇ ಆತ ಈ ಹಂತಕ್ಕೆ ಬಂದಿದ್ದಾನೆ. ನಮ್ಮ ಬಳಿಯೂ ಗನ್‌ಗಳಿವೆ, ಗನ್‌ಮ್ಯಾನ್‌ಗಳೂ ಇದ್ದಾರೆ. ಯಾರಾದರೂ ಇಂತಹ ಕೆಲಸ ಮಾಡಿದ್ದಾರೆಯೇ?’ ಎಂದು ಕೇಳಿದರು.

ADVERTISEMENT

‘ಸಿದ್ದರಾಮಯ್ಯ ಕೊಟ್ಟ ಸ್ವಾತಂತ್ರ್ಯದಿಂದ ಇವರೆಲ್ಲರೂ ಈ ರೀತಿ ಆಡುತ್ತಿದ್ದಾರೆ. ಬಳ್ಳಾರಿಯಲ್ಲಿ ಜೀವ ಹೋಗಿರುವುದು ಕಾಂಗ್ರೆಸ್ ಕಾರ್ಯಕರ್ತನದಲ್ಲ, ಅದು ಒಬ್ಬ ಕನ್ನಡಿಗನದು. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಅವರನ್ನು ಆರೋಪಿ ನಂ.1 ಎಂದು ಹೇಗೆ ಮಾಡಿದಿರಿ? ಸಿದ್ದರಾಮಯ್ಯ ಯಾವ ಮೇಲ್ಪಂಕ್ತಿಯನ್ನು ಹಾಕುತ್ತಿದ್ದಾರೆಯೋ ಗೊತ್ತಾಗುತ್ತಿಲ್ಲ. ಅವರು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ದಾಖಲೆ ಮುರಿಯುತ್ತಾರೆ. ಆದರೆ, ಅವರಂತೆ ಆಡಳಿತ ವೈಖರಿಯನ್ನು ಪಾಲಿಸಲು ಆಗುವುದಿಲ್ಲ ಬಿಡಿ’ ಎಂದು ವಾಗ್ದಾಳಿ ನಡೆಸಿದರು.

‘ಕೋಗಿಲು ಬಡವಾಣೆಯಲ್ಲಿದ್ದವರು ಬಾಂಗ್ಲಾದಿಂದ ಅಕ್ರಮವಾಗಿ ಬಂದ ಜನ. ಮುಖ್ಯಮಂತ್ರಿಯವರೇ, ಅವರಿಗ್ಯಾಕೆ ನಮ್ಮ ಭೂಮಿ ಕೊಡುತ್ತಿದ್ದೀರಾ? ಇಂದು ಅವರಿಗೆ ಮನೆ ಕೊಟ್ಟು ನಾಳೆ ಮತದಾರರ ಪಟ್ಟಿ ನೀಡಿ ಮತಬ್ಯಾಂಕ್‌ ಮಾಡಿಕೊಳ್ಳುವುದು ನಿಮ್ಮ ಯೋಜನೆಯೇ? ಬಾಂಗ್ಲಾ ಜನರಿಗೆ ವಾಸಕ್ಕೆ ಸ್ಥಳಕ್ಕೆ ಕೊಟ್ಟು ಕರ್ನಾಟಕದ ಭವಿಷ್ಯಕ್ಕೆ ಗಂಡಾಂತರ ಸೃಷ್ಟಿಸುತ್ತೀರಾ?’ ಎಂದು ಕೇಳಿದರು. ‘ನಿಮ್ಮ ವರುಣ ಕ್ಷೇತ್ರದಲ್ಲಿ ನಿವೇಶನ ಇಲ್ಲದವರಿಗೆ ಮೊದಲು ಕೊಡಿ’ ಎಂದರು.