ADVERTISEMENT

ಕೊರೊನಾ ಸೋಂಕು ತಹಬದಿಗೆ ಮುನ್ನೆಚ್ಚರಿಕೆ

ಮೈಸೂರಿನಲ್ಲಿ ಮಾತ್ರ ಕೋವಿಡ್‌ ಲಾಕ್‌ಡೌನ್‌ ಮುಂದುವರಿಕೆ: ಮನೆಯಲ್ಲಿದ್ದವರ ಮೇಲೆ ನಿಗಾ

ಡಿ.ಬಿ, ನಾಗರಾಜ
Published 22 ಜೂನ್ 2021, 3:26 IST
Last Updated 22 ಜೂನ್ 2021, 3:26 IST
ಮೈಸೂರಿನ ಸಿದ್ಧಾರ್ಥ ನಗರದ ಜೆಎಸ್‌ಎಸ್ ಪಬ್ಲಿಕ್‌ ಶಾಲೆಯಲ್ಲಿ ಸೋಮವಾರ ಉಚಿತವಾಗಿ ಲಸಿಕೆ ಪಡೆಯಲು ಜಮಾಯಿಸಿದ್ದ ಜನಸ್ತೋಮ
ಮೈಸೂರಿನ ಸಿದ್ಧಾರ್ಥ ನಗರದ ಜೆಎಸ್‌ಎಸ್ ಪಬ್ಲಿಕ್‌ ಶಾಲೆಯಲ್ಲಿ ಸೋಮವಾರ ಉಚಿತವಾಗಿ ಲಸಿಕೆ ಪಡೆಯಲು ಜಮಾಯಿಸಿದ್ದ ಜನಸ್ತೋಮ   

ಮೈಸೂರು: ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲಿಕ್ಕಾಗಿಯೇ ಮೈಸೂರಿನಲ್ಲಿ ಮಾತ್ರ ಜುಲೈ 5ರವರೆಗೂ ತಜ್ಞರ ಶಿಫಾರಸಿನಂತೆಯೇ, ರಾಜ್ಯ ಸರ್ಕಾರ ಕೋವಿಡ್‌ ಲಾಕ್‌ಡೌನ್‌ ಮುಂದುವರಿಸಿದೆ.

ಜಿಲ್ಲೆಯಾದ್ಯಂತ ಈ 14 ದಿನದ ಅವಧಿಯಲ್ಲಿ ಸೋಂಕನ್ನು ತಹಬದಿಗೆ ತರಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮೂರಂಶದ ಸೂತ್ರ ಪಾಲನೆಗೆ ಮುಂದಾಗಿವೆ.

ಸೋಂಕಿತರಾದರೂ ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆಯುತ್ತಿರುವವರ ಚಲನವಲನದ ಮೇಲೆ ತೀವ್ರ ನಿಗಾ ವಹಿಸುವ ಜೊತೆಗೆ, ಕೋವಿಡ್‌ ತಪಾಸಣಾ ಪರೀಕ್ಷೆಯನ್ನು ಹೆಚ್ಚಿಸುವುದು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆ ಹಾಕುವ ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಡಳಿತ ಪಣ ತೊಟ್ಟಿದೆ ಎಂಬುದು ಗೊತ್ತಾಗಿದೆ.

ADVERTISEMENT

‘ಮೈಸೂರು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ 3771 ಸೋಂಕಿತರು ತಮ್ಮ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಸಕಲ ಸೌಲಭ್ಯ ಇದ್ದರೂ ಸಹ 40 ವರ್ಷ ಮೇಲ್ಪಟ್ಟವರನ್ನು ಹಾಗೂ ಕೋಮಾರ್ಬಿಡಿಟಿಸ್‌ನಿಂದ ಬಳಲುತ್ತಿರುವವರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಿಸುವುದನ್ನು ಕಡ್ಡಾಯಗೊಳಿಸಿದ್ದೇವೆ. ಇದರಿಂದ ಸೋಂಕು ಹರಡುವಿಕೆ ಬಹುತೇಕ ನಿಯಂತ್ರಣಕ್ಕೆ ಬರಲಿದೆ’ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಟಿ.ಶಿವಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಸ್ತುತ ನಿತ್ಯವೂ ಜಿಲ್ಲೆಯಾದ್ಯಂತ ಆರು ಸಾವಿರದಿಂದ ಏಳು ಸಾವಿರ ಜನರ ಕೋವಿಡ್‌ ತಪಾಸಣೆ ಪರೀಕ್ಷೆ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಲಿಕ್ಕಾಗಿ 24X7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಇನ್ಮುಂದೆ ಕೋವಿಡ್‌ ಪರೀಕ್ಷೆಯನ್ನು ನಡೆಸಲಾಗುವುದು. ಸೋಂಕಿನ ಲಕ್ಷಣದೊಂದಿಗೆ ಪರೀಕ್ಷೆ ಮಾಡಿಸಲು ಇಚ್ಛಿಸಿ ತಪಾಸಣಾ ಕೇಂದ್ರಕ್ಕೆ ಬರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಲಾಗುವುದು. ಇದಕ್ಕಾಗಿ ನಿತ್ಯವೂ 10 ಸಾವಿರ ಜನರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಲಸಿಕೆಯೇ ಅಸ್ತ್ರ: ‘ಕೋವಿಡ್‌ನಿಂದ ರಕ್ಷಣೆ ಪಡೆಯಲು ಲಸಿಕೆಯೇ ಪ್ರಮುಖ ಅಸ್ತ್ರ. ಸರ್ಕಾರದ ಮಾರ್ಗಸೂಚಿಯಂತೆ ಆದ್ಯತಾ ಗುಂಪಿನಲ್ಲಿ ಬರುವ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆ ಹಾಕಲಾಗುವುದು. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್‌ ನೀಡುವ ಅಭಿಯಾನಕ್ಕೆ ಸೋಮವಾರದಿಂದಲೇ (ಜೂನ್‌ 21) ಚಾಲನೆ ನೀಡಲಾಗಿದೆ’ ಎಂದು ಟಿ.ಶಿವಪ್ರಸಾದ್‌ ಮಾಹಿತಿ ನೀಡಿದರು.

‘ಲಸಿಕೆ ಅಭಿಯಾನ ಆರಂಭಗೊಂಡಾಗ ಜನರೇ ಮುಂದೆ ಬರುತ್ತಿರಲಿಲ್ಲ. ಆದರೆ, ಇದೀಗ ಜನರೇ ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ. ಆದರೆ ನಮ್ಮ ಬಳಿ ಸಾಕಷ್ಟು ಪ್ರಮಾಣದ ಲಸಿಕೆ ಇಲ್ಲದಿರುವುದರಿಂದ ಕೊಡಲಾಗ್ತಿಲ್ಲ. ಈ ಅಭಿಯಾನ ಮುಂದುವರೆಯಲಿದೆ. ಎಲ್ಲರೂ ಹಂತ ಹಂತವಾಗಿ ಕಡ್ಡಾಯವಾಗಿ ಲಸಿಕೆ ಪಡೆಯಬೇಕು’ ಎಂದು ಹೇಳಿದರು.

‘ಕೋವಿಡ್‌ ಪರೀಕ್ಷೆ ಕಡಿಮೆಗೊಳಿಸಿದ್ದೇ ಮುಳುವಾಯ್ತು’

‘ಕೋವಿಡ್‌ ಸೋಂಕು ಉಲ್ಬಣದ ಕಾಲಘಟ್ಟದಲ್ಲಿ ಪರೀಕ್ಷೆಗಳನ್ನು ಕಡಿಮೆಗೊಳಿಸಿದ್ದೇ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರದಿರಲು ಪ್ರಮುಖ ಕಾರಣ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದರು.

‘ಸಕಾಲಕ್ಕೆ ಪರೀಕ್ಷೆ ನಡೆಯಲಿಲ್ಲ. ಸೋಂಕಿನ ತೀವ್ರ ಲಕ್ಷಣಗಳಿಲ್ಲದಿರುವವರು ಎಲ್ಲೆಡೆ ಸಂಚರಿಸಿದರು. ತಾವು ಓಡಾಡಿದ ಪ್ರದೇಶದಲ್ಲಿ ಸೋಂಕನ್ನು ಹರಡಿದರು. ಇದರಿಂದ ಸಮುದಾಯಕ್ಕೆ ಸೋಂಕು ತಗುಲಿತು. ಯಾವ ವಯೋಮಾನದವರಲ್ಲಿ ಸೋಂಕು ಹರಡುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಕೋಮಾರ್ಬಿಡಿಟಿಸ್‌ನಿಂದ ಬಳಲುತ್ತಿದ್ದವರು ಸೇರಿದಂತೆ ಆರೋಗ್ಯವಂತರಲ್ಲೂ ಸೋಂಕಿನ ತೀವ್ರತೆ ಹೆಚ್ಚಾಗಿ ಅಪಾರ ಸಂಖ್ಯೆಯ ಜನರು ಸಾವು–ನೋವಿನಿಂದ ಬಳಲುವಂತಾಯಿತು’ ಎಂದು ಅವರು ಹೇಳಿದರು.

‘ಕೋವಿಡ್‌ ಮಿತ್ರದ ವೈಫಲ್ಯವಿದು’

‘ಕೋವಿಡ್‌ ಮಿತ್ರದ ವೈಫಲ್ಯವನ್ನು ಜಿಲ್ಲೆಯ ಜನರು ಈಗಲೂ ಅನುಭವಿಸುತ್ತಿದ್ದಾರೆ. ಸೋಂಕು ಉಲ್ಬಣದಲ್ಲಿದ್ದಾಗ ತಪಾಸಣೆಯನ್ನೇ ನಡೆಸಲಿಲ್ಲ. ಪರೀಕ್ಷೆಗಾಗಿ ಆಸ್ಪತ್ರೆಗಳಿಗೆ ಹೋದವರೆಲ್ಲರಿಗೂ ಮೂರು ದಿನಕ್ಕಾಗುವಷ್ಟು ಮಾತ್ರೆ ಕೊಟ್ಟು ಮನೆಗೆ ಕಳುಹಿಸಿದರು. ಇದರ ಪರಿಣಾಮ ಸೋಂಕು ಸಮುದಾಯಕ್ಕೆ ತಗುಲಿ ಅಪಾರ ಸಾವು–ನೋವಾಯಿತು’ ಎನ್ನುತ್ತಾರೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌.

‘ಮಾತ್ರೆ ಪಡೆದು ಮನೆಗೆ ಮರಳಿದವರ ಮೇಲೆ ನಿಗಾ ಇಡಲಿಲ್ಲ. ಐಸೋಲೇಷನ್‌ನಲ್ಲಿದ್ದವರ ನಿಗಾವೂ ಅಷ್ಟಕ್ಕಷ್ಟೇ. ಈಗಲೂ ನಿರ್ವಹಣೆ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ. ಈ ಅಧ್ವಾನಕ್ಕೆ ಸಚಿವರು ರಚಿಸಿದ ಟಾಸ್ಕ್‌ಫೋರ್ಸ್‌ ಕೊಡುಗೆಯೂ ಸಾಕಷ್ಟಿದೆ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.