ADVERTISEMENT

‘ಹಿಂದಿ ದಿವಸ’ದ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ಮಹಾತ್ಮ ಗಾಂಧಿ ಚೌಕದಲ್ಲಿ ಪ್ರತ್ಯೇಕವಾಗಿ ವಿರೋಧ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 9:15 IST
Last Updated 14 ಸೆಪ್ಟೆಂಬರ್ 2020, 9:15 IST

ಮೈಸೂರು: ‘ಹಿಂದಿ ದಿವಸ’ದ ವಿರುದ್ಧ ಸೋಮವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾಹಿತಿಗಳು, ಹೋರಾಟಗಾರರು, ರೈತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದರೆ, ಕರ್ನಾಟಕ ನ್ಯಾಯಪರ ವೇದಿಕೆ ನೇತೃತ್ವದಲ್ಲಿ ಕಾರ್ಯಕರ್ತರು ಮಹಾತ್ಮ ಗಾಂಧಿ ಚೌಕದ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾತನಾಡಿದ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಮೇಲೆ 3 ಭಾಷೆಗಳನ್ನು ಹೇರುತ್ತಿದೆ. ಸಂಪರ್ಕ ಭಾಷೆಯಾಗಿ ಇಂಗ್ಲಿಷ್, ಮಾತೃಭಾಷೆ ಹಾಗೂ ರಾಷ್ಟ್ರಭಾಷೆಯಾಗಿ ಹಿಂದಿಯನ್ನು ಕಲಿಯಲೇಬೇಕು ಎಂದು ಹೇಳುತ್ತಿದೆ. ಇದರಿಂದ ಗ್ರಾಮಾಂತರ ಭಾಗದಿಂದ ಬಂದ ವಿದ್ಯಾರ್ಥಿಗಳಿಗೆ ಹಿಂದಿ ಕಷ್ಟವಾಗಿ ಅವರು ಕಲಿಕೆಯನ್ನೇ ಮೊಟಕುಗೊಳಿಸುವ ಅಪಾಯ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘‌ತಮಿಳುನಾಡಿನಲ್ಲಿ 2 ಭಾಷೆಗಳನ್ನಷ್ಟೇ ಕಲಿಯಲಾಗುತ್ತಿದೆ. ಅಲ್ಲಿಯ ರಾಜಕಾರಣಿಗಳ ಭಾಷಾಭಿಮಾನ ನಮ್ಮ ನಾಡಿನ ರಾಜಕಾರಣಿಗಳಿಗೂ ಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ವಿರೋಧ ಹಿಂದಿ ಭಾಷೆಯ ವಿರುದ್ಧ ಅಲ್ಲ. ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ಮಾತ್ರವೇ ನಮ್ಮ ಆಕ್ರೋಶ ಇದೆ. ವಚನಕಾರರು ಈಗಾಗಲೇ ಸಂಸ್ಕೃತದಲ್ಲಿದ್ದ ಅತಿ ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಕನ್ನಡದಲ್ಲಿ ಹೇಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಿರುವಾಗ, ಕನ್ನಡಕ್ಕೆ ಅನ್ಯ ಭಾಷೆಗಳ ಹಂಗೇಕೆ’ ಎಂದು ಪ್ರಶ್ನಿಸಿದರು.

ನಿವೃತ್ತ ಪ್ರಾಧ್ಯಾಪಕ ನಂಜರಾಜಅರಸು, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ರಾಜು, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಸ್ವರಾಜ್ ಇಂಡಿಯಾದ ಎನ್.ಪುನೀತ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಸಂಚಾಲಕ ಕೆ.ಎಸ್.ಶಿವರಾಜು, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪನಾಯಕ, ಕನ್ನಡ ಚಳವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ನಾಲ್ವಡಿ ಫೌಂಡೇಷನ್ನಿನ ನಂದೀಶ್ ಜಿ.ಅರಸ್, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅರವಿಂದ ಶರ್ಮಾ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಮರಂಕಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.