ಮೈಸೂರು: ಗಿಡ್ಡದಾದ ಕಾಲು ಹೊಂದಿದ ಮುದ್ದಾದ ಬಂಡೂರು ಕುರಿ, ಸದೃಢ ಮೈಕಟ್ಟಿನೊಂದಿಗೆ ಚೂಪಾದ ತುದಿಯ ಕೊಂಬಿನ ಹಳ್ಳಿಕಾರ್ ಹಸು, ಕಪ್ಪು ಪುಕ್ಕ ಕೊಕ್ಕಿನ ಕಡಕ್‌ನಾಥ್ ಕೋಳಿಗಳು..
ಇವು ನಗರದ ಜೆ.ಕೆ.ಮೈದಾನದಲ್ಲಿ ಆಯೋಜಿಸಿದ್ದ ಈ ಬಾರಿಯ ರೈತ ದಸರಾದಲ್ಲಿ ಪ್ರದರ್ಶನಗೊಂಡ ವಿಭಿನ್ನ ದೇಶಿ ತಳಿಯ ಆಕರ್ಷಣೆ.
ಇನ್ನೊಂದೆಡೆ ಕೃಷಿ ಯಂತ್ರೋಪಕರಣಗಳು, ರೈತರು ಬೆಳೆದ ಸಾವಯವ ಪದಾರ್ಥಗಳ ಮಳಿಗೆಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. 35ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು,
ಬಂಡೂರಿ ಕುರಿ, ಹಳ್ಳಿಕಾರ್ ಹಸು, ಮಲೆನಾಡ ಗಿಡ್ಡ, ಪುಂಗನೂರು ಹಸು, ಆಂಧ್ರ ಮೂಲದ ಒಂಗೋಲ್, ಗಿರ್ ತಳಿಗಳೊಂದಿಗೆ ನೋಡುಗರು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರೆ, ಬೆಲೆ ಕೇಳಿ ಆಶ್ಚರ್ಯಗೊಂಡರು.
ಸ್ಥಳೀಯ ನಾಟಿಕೋಳಿ, ಕಡಕ್‌ನಾಥ್, ಟರ್ಕಿ, ಗಿರಿರಾಜ ಹಾಗೂ ಸ್ವರ್ಣದಾರ ಕೋಳಿಗಳನ್ನು ಪ್ರದರ್ಶಿಸಲಾಯಿತು. ಕುರಿ ಮೇಕೆ ತಳಿಗಳು ಪ್ರದರ್ಶನದ ಸೊಬಗನ್ನು ಹೆಚ್ಚಿಸಿದವು.
ವಿವಿಧ ತೋಟಗಾರಿಕೆಯ ಬೆಳೆಗಳು, ಹಸಿರು ಮೇವಿನ ಬೆಳೆಗಳು, ಹಣ್ಣು ಮತ್ತು ತರಕಾರಿ ಸಸಿ ಪ್ರದರ್ಶನದಲ್ಲಿ ಇಡಲಾಗಿತ್ತು.
ಕೃಷಿ ಉತ್ಪನ್ನಗಳ ಪ್ರದರ್ಶನ: ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಿಸಲು ಪೂರಕವಾಗಿ ಪ್ರದರ್ಶನದಲ್ಲಿ ವಿವಿಧ ಮಾದರಿ ಯಂತ್ರ ಪ್ರದರ್ಶಿಸಲಾಯಿತು. ಸುಧಾರಿತ, ಹೈಟೆಕ್ ಯಂತ್ರೋಪಕರಣಗಳ ಕಬ್ಬು, ನಾಟಿ–ಕೊಯ್ಲು ಯಂತ್ರ, ಭತ್ತ–ರಾಗಿ ಸೇರಿದಂತೆ ವಿವಿಧ ಕೃಷಿ ಬೆಳೆಗಳ ಕೊಯ್ಲು, ಒಕ್ಕಣೆ ಯಂತ್ರಗಳು ಹಾಗೂ ಸಮಗ್ರ ಮೀನು ಕೃಷಿ, ಕೃಷಿ ಬಳಕೆ ಸಲಕರಣೆಗಳು ಪ್ರದರ್ಶನಕ್ಕಿದ್ದವು.
ಕೃಷಿ ಉಪಕಸುಬುಗಳ ಬಗ್ಗೆ ಮಾಹಿತಿ: ಹೈನುಗಾರಿಕೆ, ಮೀನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮುಂತಾದ ಕೃಷಿ ಸಂಬಂಧಿತ ಉಪಕಸುಬುಗಳ ಬಗ್ಗೆ ಮಾಹಿತಿ ನೀಡುವ ಪ್ರದರ್ಶನವೂ ಗಮನ ಸೆಳೆದವು. ಲಾಭ ಪಡೆಯುವ ವಿಧಾನ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಿಂದ ದೊರೆಯುವ ಸವಲತ್ತುಗಳು ಮಾಹಿತಿ ನೀಡಲಾಯಿತು. ವಿಶೇಷವಾಗಿ ಮೀನು ಸಾಕಣೆ ಬಗ್ಗೆ ಪ್ರತ್ಯೇಕ ಪ್ರದರ್ಶನ ಆಯೋಜಿಸಲಾಗಿತ್ತು.
‘ರೈತ ದಸರಾದ ಆಯೋಜನೆಯಿಂದ ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ. ಇಲ್ಲಿನ ಪ್ರತಿ ಅಂಶವನ್ನು ಗಮನಿಸಬೇಕು. ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದರಿಂದ ಕೃಷಿ ಮಾಡಿದರೆ ಖರ್ಚು ಕಡಿಮೆಯಾಗುತ್ತದೆ. ಉತ್ತಮ ಆದಾಯ ಪಡೆಯಬಹುದು’ ಎಂದು ರೈತ ಸಂಘ ರೈತ ಪರ್ವದ ಮಂಜು ಜಿ.ಪಿ ಹೇಳಿದರು.
ಬಂಡೂರು ಕುರಿ ತಳಿ ಪ್ರೋತ್ಸಾಹಿಸಲು ರೈತ ದಸರಾ ಅನುಕೂಲ ಕಲ್ಪಿಸಿದೆ. ಇದರ ಸಾಕಣೆಕೆಯಿಂದ ಲಾಭಾಂಶ ಹೆಚ್ಚುತ್ತಿರುವುದು.-ಸಂತಸ ಕುಮಾರ್, ಕುರಿ ಸಾಕಾಣಿಕೆದಾರ ಬಂಡೂರು
ಹಳ್ಳಿಕಾರ್ ವಿಶೇಷ ತಳಿ. ಇದರ ನಿರ್ವಹಣೆ ಮತ್ತು ಸಂವರ್ಧನೆ ಮಾಡುವ ರೈತರಿಗೆ ಸರ್ಕಾರ ಆರ್ಥಿಕ ಮತ್ತು ತಾಂತ್ರಿಕ ಪ್ರೋತ್ಸಾಹ ನೀಡಬೇಕು.-ವೈ.ಕೆ.ಸಿದ್ದರಾಮ ಹಳ್ಳಿಕಾರ್, ಸಂರಕ್ಷಕ ಬನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.