ಹುಣಸೂರು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಕಟ್ಟಡ ಮತ್ತು ಮೂಲಸವಲತ್ತು ಉತ್ತಮಗೊಳಿಸುವ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸವನ್ನು ರೋಟರಿ ಅಂತರರಾಷ್ಟ್ರೀಯ ಸಂಸ್ಥೆ ನಿರಂತರವಾಗಿ ನಡೆಸಿದೆ ಎಂದು ರೋಟರಿ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಸುಕಿನ್ ಪದ್ಮನಾಭ ಹೇಳಿದರು.
ತಾಲ್ಲೂಕಿನ ಉದ್ದೂರು ಗ್ರಾಮದ ಸರ್ಕಾರಿ ಶಾಲೆಗೆ ಹುಣಸೂರು ರೋಟರಿ ಮತ್ತು ಬೆಂಗಳೂರು ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಆಸನದ ವ್ಯವಸ್ಥೆ, ಶಾಲೆಗೆ ಕಾಂಪೌಂಡ್ ನಿರ್ಮಾಣ, ಗೇಟ್ ಸೇರಿ ಅಗತ್ಯವಿದ್ದ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಇಂತಹ ಕೆಲಸಗಳನ್ನು ರೋಟರಿ ಕ್ಲಬ್ ಬೆಂಗಳೂರು ದಶಕಗಳಿಂದ ನಡೆಸಿದ್ದು, ಗ್ರಾಮೀಣ ಶಾಲೆಗಳ ಜೀರ್ಣೋದ್ಧಾರ ನಿರಂತರವಾಗಿ ನಡೆದಿದೆ ಎಂದರು.
ಹುಣಸೂರು ರೋಟರಿ ಸಂಸ್ಥೆ ಅಧ್ಯಕ್ಷ ಕೃಷ್ಣಕುಮಾರ್ ಮಾತನಾಡಿ, ರೋಟರಿ ಸಂಸ್ಥೆ ಈಗಾಗಲೇ ಜಿಲ್ಲಾ ಯೋಜನೆಯಲ್ಲಿ ಒಂದಾದ ಅಂಗನವಾಡಿ ಉನ್ನತೀಕರಣ, ಮಕ್ಕಳಿಗೆ ಆಸನದ ವ್ಯವಸ್ಥೆ ಮತ್ತು ಸಮವಸ್ತ್ರ ಕೊಡುಗೆ ನೀಡಿದೆ. ರೋಟರಿ ಹುಣಸೂರು ಮುಂದಿನ ದಿನದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ನೀಡುವ ಯೋಜನೆ ಸಿದ್ಧಪಡಿಸಿದೆ ಎಂದರು.
ರೋಟರಿ ಹುಣಸೂರು ಕಾರ್ಯದರ್ಶಿ ಶಾಮಣ್ಣ ಧರ್ಮಾಪುರ, ಲೂಯಿಸ್ ಫೆರೇರಾ, ಮಂಜುನಾಥ್, ಮೋಹನ್, ಮೀರಾ,ಶಂಕರ್, ಅಂಜು, ಗೌರಿ, ಶಿಕ್ಷಕರಾದ ಚಿನ್ನಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.