ADVERTISEMENT

ಚುನಾವಣಾ ರಾಜಕಾರಣದಲ್ಲಿ ಇಲ್ಲದಿರಬಹುದು, ಸೇವೆ ನಿಲ್ಲಿಸಿಲ್ಲ: ಮಾಜಿ ಸಚಿವ ರಾಮದಾಸ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 12:35 IST
Last Updated 2 ಜನವರಿ 2026, 12:35 IST
   

ಮೈಸೂರು: ‘ನಾನು ಸದ್ಯ ಚುನಾವಣಾ ರಾಜಕಾರಣದಲ್ಲಿ ಸಕ್ರಿಯನಾಗಿ ಇಲ್ಲದಿರಬಹುದು. ಆದರೆ, ಜನಸೇವೆಗೆ ಇರುವ ಇತರ ಕೆಲಸಗಳಲ್ಲಿ ಮಗ್ನನಾಗಿದ್ದೇನೆ’ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.

ಮೈಸೂರು ನಗರ ಪತ್ರಿಕಾ ವಿತರಕರ ಸಂಘದಿಂದ ಇಲ್ಲಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರ ಬಗ್ಗೆ ಎಂದೂ ಚಿಂತಿಸಿಲ್ಲ. ಯಾರಿಗೆ ಟಿಕೆಟ್‌ ಕೊಡಲಾಯಿತೋ ಅವರಿಗಾಗಿ ಶ್ರಮಿಸಿದ್ದೇನೆ’ ಎಂದರು.

‘ನಿಮಗೆ ಟಿಕೆಟ್‌ ನೀಡುತ್ತೇವೆ, ಒಂದು ಪೈಸೆಯನ್ನೂ ಖರ್ಚು ಮಾಡಬೇಡಿ, ನಿಮ್ನನ್ನು ಗೆಲ್ಲಿಸುತ್ತೇವೆ ಎಂದು ಮುಖಂಡರೊಬ್ಬರು ಹೇಳಿದ್ದರು. ಪಕ್ಷವನ್ನು ತಾಯಿ ಎಂದು ನಂಬಿರುವ ನಾನು ಇತರ ಪಕ್ಷಕ್ಕೆ ಹೋಗಲಿಲ್ಲ. ಒಮ್ಮೊಮ್ಮೆ ಸುತ್ತಮುತ್ತ ನೂರಾರು ಮಂದಿ ಇರುತ್ತಾರೆ. ಮಾರನೇ ದಿನ ಒಬ್ಬರೂ ಇರುವುದಿಲ್ಲ. ಇದನ್ನು ಒಪ್ಪಿಕೊಳ್ಳಲು ಸಮಚಿತ್ತ ಬೇಕು. ಇದನ್ನು ಜನರ ಪ್ರೀತಿ ಕಲಿಸಿದೆ’ ಎಂದು ಹೇಳಿದರು.

ADVERTISEMENT

‘ಈ ಹಿಂದೆ ಜನೌಷಧಿ ಕೇಂದ್ರ ತೆರೆದಾಗ, ಅದರ ವಿರುದ್ಧ ಔಷಧಿ ಕಂಪನಿಗಳು ಲಾಬಿ ಮಾಡಿದ್ದವು. ರಾಜ್ಯದ ವಿವಿಧೆಡೆ ನನ್ನ ವಿರುದ್ಧ ಪ್ರತಿಭಟನೆ ನಡೆಸಿ, ಭಾವಚಿತ್ರಕ್ಕೆ ಮಸಿ ಬಳಿದು ಅಪಮಾನಿಸಲಾಯಿತು. ಆದರೆ, ಅದ್ಯಾವುದಕ್ಕೂ ಎದೆಗುಂದಲಿಲ್ಲ. ಬಳಿಕ ಅದು ಎಷ್ಟು ಜನಪ್ರಿಯವಾಯಿತೆಂದರೆ ದೇಶದಾದ್ಯಂತ ಪ್ರಧಾನಮಂತ್ರಿ ಜನೌಷಧಿ ಕೇಂದ್ರವಾಗಿ ಸಾವಿರಾರು ಸಂಖ್ಯೆಯಲ್ಲಿ ಆರಂಭವಾಗಿವೆ. ಇದು ತೃಪ್ತಿ ತಂದಿದೆ’ ಎಂದು ತಿಳಿಸಿದರು.

‘ನನಗೆ ಬರುವ ಒಂದೂವರೆ ಲಕ್ಷ ರೂಪಾಯಿ ಪಿಂಚಣಿಯಲ್ಲೇ ಜೀವನ ಸಾಗಿಸುತ್ತಿದ್ದೇನೆ. ನನ್ನ ಹೆಸರಿನಲ್ಲಿ ಆಸ್ತಿ ಇಲ್ಲ. ಯಾರು ಏನೇ ಹೇಳಿದರೂ, ನನ್ನ ಕುಟುಂಬದವರು ಉದ್ಯಮಿಗಳಾಗುವುದು ತಪ್ಪಲ್ಲ. ಆದರೆ ನಾನಂತೂ ಎಲ್ಲಿಯೂ ಆಸ್ತಿ ಮಾಡಿಲ್ಲ. ರಕ್ತ, ಕೈ ಮಲಿನ ಮಾಡಿಕೊಂಡಿಲ್ಲ’ ಎಂದು ಹೇಳಿದರು.

‘ಮೊಟ್ಟ ಮೊದಲಿಗೆ ಮೈಸೂರಿನಲ್ಲಿ ಪತ್ರಿಕಾ ವಿತರಕರ ಸಂಘ ಆರಂಭವಾಯಿತು, ಈಗ 150ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಶುರುವಾಗಿವೆ. ಪಿಎಂ–ಸ್ವನಿಧಿ ಯೋಜನೆಗೆ ಪತ್ರಿಕಾ ವಿತರಕರ ಹೆಸರನ್ನೂ ಸೇರ್ಪಡೆ ಮಾಡಿಸಲು ಶ್ರಮಿಸಿ ಯಶಸ್ವಿಯಾದೆ. ಅವರಿಗೆ ₹ 2 ಲಕ್ಷದವರೆಗೆ ವಿಮೆ ಕೂಡ ದೊರೆಯುತ್ತಿದೆ’ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿದ ವಿಧಾನಪರಿಷತ್‌ ಸದಸ್ಯ ಕೆ.ಶಿವಕುಮಾರ್ ಮಾತನಾಡಿ, ‘ನಗರದಲ್ಲಿ ಪತ್ರಿಕಾ ವಿತರಕರಿಗೆ ಪತ್ರಿಕೆ ವಿಂಗಡಿಸಿಕೊಳ್ಳಲು ಸೂಕ್ತ ಜಾಗವಿಲ್ಲವೆಂಬುದರ ಅರಿವಿದೆ. ಹೀಗಾಗಿ ನಗರದಲ್ಲಿನ ಎಲ್ಲ ಪತ್ರಿಕಾ ವಿತರಕರು ಸಹಮತ ವ್ಯಕ್ತಪಡಿಸಿದಲ್ಲಿ ಕಾಡಾ ಕಚೇರಿ ಆವರಣ ಅಥವಾ ನೀರಾವರಿ ಇಲಾಖೆ ಕಚೇರಿ ಬಳಿ ಸೂಕ್ತ ಆಶ್ರಯದಾಣ ನಿರ್ಮಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಸುರೇಶ್, ಲೋಕೇಶ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.