ADVERTISEMENT

ಸರಗೂರು | ಶಿಕ್ಷಕರ ಶ್ರಮಕ್ಕೆ ಬೆಲೆ ಕಟ್ಟಲಾಗದು: ಡಾ.ವೈ.ಡಿ.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:38 IST
Last Updated 30 ಸೆಪ್ಟೆಂಬರ್ 2025, 6:38 IST
ಸರಗೂರು ಪಟ್ಟಣದ ಲಯನ್ಸ್ ಶಾಲೆಯಲ್ಲಿ ಸೋಮವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಅಭಿನಂದಿಸಲಾಯಿತು
ಸರಗೂರು ಪಟ್ಟಣದ ಲಯನ್ಸ್ ಶಾಲೆಯಲ್ಲಿ ಸೋಮವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಅಭಿನಂದಿಸಲಾಯಿತು   

ಸರಗೂರು: ಶಾಲೆಗಳಲ್ಲಿ ಶಿಕ್ಷಕರ ಶ್ರಮ ಅವಿರತವಾಗಿದ್ದು, ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೆಶಕ ಡಾ.ವೈ.ಡಿ.ರಾಜಣ್ಣ ತಿಳಿಸಿದರು.

ಪಟ್ಟಣದ ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಸೋಮವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಭಕ್ತಿ ಗೀತೆ, ಸಾಹಿತ್ಯ, ಕ್ರೀಡೆ, ಸಂಗೀತ ಹೀಗೆ ನಾನಾ ಕ್ಷೇತ್ರಗಳಲ್ಲಿ ಭಾಗಿಯಾಗುವಂತೆ ಪ್ರೇರಣೆ ನೀಡಬೇಕು. ಇಂಥ ಕೆಲಸವನ್ನು ನಮ್ಮ ಶಿಕ್ಷಕರು ಮಾಡಿದ್ದಾರೆ. ಹೀಗಾಗಿಯೇ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯಲು ಸಹಕಾರಿಯಾಯಿತು. ಶಿಕ್ಷಕರಿಂದಲೇ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯಲು ಅನುಕೂಲವಾಯಿತು. ಮಕ್ಕಳ ಬೌದ್ಧಿಕ, ಮಾನಸಿಕ ವಿಕಸನಕ್ಕೆ ಶಿಕ್ಷಕರು ಶ್ರಮಿಸುತ್ತಾರೆ ಎಂದು ಅವರು ಹೇಳಿದರು.

ಇತ್ತೀಚಿಗೆ ಶಿಕ್ಷಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಹಿಂದಿಗಿಂತ ಅವರು ಜವಾಬ್ದಾರಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಲಯನ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು, ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ನೀಡಬೇಕು. ಇದಲ್ಲದೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ಹೇಳಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಬಿ.ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲೆ ಪ್ರಾಂತೀಯ ಅಧ್ಯಕ್ಷ ಎಸ್.ವಾಸುಕಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಕಾರ್ಯದರ್ಶಿ ಎಸ್.ಎಸ್.ಪ್ರಭುಸ್ವಾಮಿ, ಖಜಾಂಚಿ ಬ್ರಹ್ಮದೇವಯ್ಯ, ಎಸ್.ವಿ.ಯೋಗೀಶ್, ಎಸ್. ನಾರಾಯಣ್, ಮೋಹನ್ ಕುಮಾರ್, ಶಾಂಭವಮೂರ್ತಿ, ಪ್ರಾಂಶುಪಾಲ್ ದಾಸಚಾರ್, ಮುಖ್ಯ ಶಿಕ್ಷಕಿ ಪದ್ಮಶ್ರೀ ಸೇರಿದಂತೆ ಶಾಲಾ ಶಿಕ್ಷಕರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕ ವಾಸುದೇವ ಅವರನ್ನು ಸನ್ಮಾನಿಸಲಾಯಿತು.

ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಟಿ.ಎಂ.ಸುರೇಶ್ ಕುಮಾರ್, ದೀರ್ಘಾವಧಿ ಸೇವಾ ಪ್ರಶಸ್ತಿಯನ್ನು ಪದ್ಮಿನಿ ಅವರಿಗೆ ಪ್ರದಾನ ಮಾಡಲಾಯಿತು. ಲಯನ್ಸ್ ಅಕಾಡೆಮಿ ಶಾಲೆಯು 2023-24 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ100 ಫಲಿತಾಂಶ ನೀಡಿದ್ದರಿಂದ ಶಿಕ್ಷಣ ಇಲಾಖೆ ಪ್ರಶಸ್ತಿ ನೀಡಲಾಯಿತು. ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಖಾಸಗಿ ಶಾಲೆಯ ಶಿಕ್ಷಕ ದಾಸಚಾರ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.