
ಮೈಸೂರು: ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಐಕ್ಯಾಟ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಏರೋ-ಮೆಡಿಕಲ್ ಸೈನ್ಸ್ ಫೆಲೋಶಿಪ್ ಪಠ್ಯಕ್ರಮಕ್ಕೆ ಅಧಿಕೃತ ಮಾನ್ಯತೆ ಲಭಿಸಿದ್ದು, ಇದರ ಅಂಗವಾಗಿ ವಿವಿಧ ದೇಶಗಳ 25 ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.
ಪ್ರಸ್ತುತ ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ಆವರಣದಲ್ಲಿ ನಡೆಯುತ್ತಿರುವ ಈ ತರಬೇತಿಯು ವೈದ್ಯಕೀಯ ವೃತ್ತಿಪರರನ್ನು ಹೆಲಿಕಾಪ್ಟರ್ ಮತ್ತು ವಿಮಾನಗಳ ಮೂಲಕ ಅತ್ಯಾಧುನಿಕ ಜೀವ ರಕ್ಷಣಾ ಚಿಕಿತ್ಸೆ ನೀಡಲು ಸಜ್ಜುಗೊಳಿಸುತ್ತದೆ. ವಿಶೇಷವಾಗಿ ಗಂಭೀರ ಸ್ಥಿತಿಯ ರೋಗಿಗಳ ತ್ವರಿತ ಹಾಗೂ ಸುರಕ್ಷಿತ ವರ್ಗಾವಣೆಗೆ ಅಗತ್ಯವಾದ ತಾಂತ್ರಿಕ ಹಾಗೂ ವೈದ್ಯಕೀಯ ಕೌಶಲಗಳನ್ನು ಇಲ್ಲಿ ಅಭ್ಯಾಸ ಮಾಡಲಾಗುತ್ತಿದೆ.
ಈ ತಂಡದ ಮೌಲ್ಯಮಾಪನ ಪ್ರಕ್ರಿಯೆ ಫೆ. 12ರಂದು ನಡೆಯಲಿದ್ದು, ಫೆ. 13ರಂದು ಸಂಜೆ 4.30ಕ್ಕೆ ನಗರದ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಪದವಿ ಪ್ರದಾನ ಸಮಾರಂಭ ಜರುಗಲಿದೆ.
‘ವಿಪತ್ತು ನಿರ್ವಹಣೆ ಹಾಗೂ ತುರ್ತು ಕ್ಷಿಪ್ರ ವರ್ಗಾವಣೆಗಳಿಗೆ ಅನುಗುಣವಾಗುವಂತೆ ಜಾಗತಿಕ ಮಟ್ಟದ ಏರೋ-ಮೆಡಿಕಲ್ ತಜ್ಞರ ಹೊಸ ಪೀಳಿಗೆಯನ್ನು ರೂಪಿಸುವುದು ಈ ತರಬೇತಿಯ ಉದ್ದೇಶವಾಗಿದೆ’ ಎಂದು ಐಕ್ಯಾಟ್ ಸಂಸ್ಥೆಯ ಸಂಸ್ಥಾಪಕಿ ಡಾ. ಶಾಲಿನಿ ನಲ್ವಾಡ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.