ADVERTISEMENT

ಸ್ತುತಿ ಶಂಕರ-ಸ್ತೋತ್ರ ಮಹಾಸಮರ್ಪಣೆ ಇಂದು; 20,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
ಭಾರತೀ ತೀರ್ಥ ಸ್ವಾಮೀಜಿ
ಭಾರತೀ ತೀರ್ಥ ಸ್ವಾಮೀಜಿ   

ಮೈಸೂರು: ಶೃಂಗೇರಿ ಶಾರದಾಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಪ್ರಯುಕ್ತ ಡಿ.20ರಂದು ಸಂಜೆ 4ಕ್ಕೆ ನಗರದ ಅರಮನೆ ಆವರಣದಲ್ಲಿ ‘ಸ್ತುತಿ ಶಂಕರ’– ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸ್ತುತಿ ಶಂಕರ ಸಂಚಾಲನ ಸಮಿತಿ ಕಾರ್ಯಾಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸುವರ್ಣಭಾರತೀ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿರುವ ಕಲ್ಯಾಣವೃಷ್ಟಿ ಮಹಾಭಿಯಾನ ಸ್ತೋತ್ರ ಸಮರ್ಪಣಾ ಕಾರ್ಯಕ್ರಮದಲ್ಲಿ ಶಂಕರಾಚಾರ್ಯ ವಿರಚಿತ ಕಲ್ಯಾಣವೃಷ್ಟಿಸ್ತವ, ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಹಾಗೂ ಲಕ್ಷ್ಮೀನರಸಿಂಹಕರುಣಾರಸ ಸೇರಿದಂತೆ ಸ್ತೋತ್ರಗಳ ಪಠಣ ನಡೆಯಲಿದೆ. 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

‘ಶೃಂಗೇರಿ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೃಷ್ಣರಾಜನಗರ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಸ್ವಾಮೀಜಿ ಹಾಗೂ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿರುವರು. ರಾಜವಂಶಸ್ಥೆ  ಪ್ರಮೋದಾದೇವಿ ಒಡೆಯರ್ ಮತ್ತು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‍ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಸ್ತೋತ್ರ ಮಹಾಸಮರ್ಪಣೆಗಾಗಿ ಒಂದು ವರ್ಷದಿಂದ ಸಿದ್ಧತೆ ನಡೆದಿದೆ.  ಜಿಲ್ಲೆಯಾದ್ಯಂತ ಭಕ್ತ ಮಹಿಳೆಯರು, ವಿದ್ಯಾರ್ಥಿಗಳು ಸ್ತೋತ್ರ ಪಠಣವನ್ನು ಅಭ್ಯಾಸ ಮಾಡಿದ್ದಾರೆ. ಪಾರಾಯಣ ಮಾಡುವ ಎಲ್ಲರಿಗೂ ಗುರುತಿನ ಚೀಟಿ ನೀಡಲಾಗಿದೆ. ಎಲ್ಲರನ್ನೂ ವಾಹನಗಳಲ್ಲಿ ಕರೆತರಲಾಗುವುದು’ ಎಂದರು.

ಪ್ರವೇಶ:

ಅರಮನೆ ಪೂರ್ವ ಮುಖ್ಯದ್ವಾರ, ಉತ್ತರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದ್ವಾರ, ದಕ್ಷಿಣದ ವರಾಹ ದ್ವಾರಗಳ ಮೂಲಕ ಪ್ರವೇಶವಿದೆ. ವಾಹನ ನಿಲುಗಡೆಗೆ ಅರಮನೆಯ ವರಾಹ ದ್ವಾರ, ಕೋಟೆ ಮಾರಮ್ಮ ಗುಡಿಯ ಸಮೀಪ, ಕಾಡಾ ಕಚೇರಿ ಆವರಣ, ದೊಡ್ಡಕೆರೆ ಫುಟ್‌ಬಾಲ್ ಮೈದಾನ ಹಾಗೂ ವಸ್ತುಪ್ರದರ್ಶನ ಮೈದಾನದ ಹಿಂಭಾಗ, ತರಕಾರಿ ಮಾರುಕಟ್ಟೆಯ ಪಕ್ಕದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯಕೀಯ ಸೇವೆ, ತುರ್ತುಚಿಕಿತ್ಸೆ, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಶೋತೃಗಳಾಗಿ ಭಾಗವಹಿಸಲು ಯಾವುದೇ ಗುರುತಿನ ಚೀಟಿ, ಶುಲ್ಕವಿರುವುದಿಲ್ಲ ಎಂದು ಮಾಹಿತಿ ನೀಡಿದರು. 

ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ರಘು ಕೌಟಿಲ್ಯ, ಶ್ರೀಹರಿ ದ್ವಾರಕಾನಾಥ್, ಮಂಜುನಾಥ್ ಶ್ರೀವತ್ಸ ಇದ್ದರು.

‘ವರ್ಷದಿಂದ ಸಿದ್ಧತೆ’

‘ಸ್ತೋತ್ರ ಮಹಾಸಮರ್ಪಣೆಗಾಗಿ ಒಂದು ವರ್ಷದಿಂದ ಸಿದ್ಧತೆ ನಡೆದಿದೆ. ಜಿಲ್ಲೆಯಾದ್ಯಂತ ಭಕ್ತ ಮಹಿಳೆಯರು, ವಿದ್ಯಾರ್ಥಿಗಳು ಸ್ತೋತ್ರ ಪಠಣವನ್ನು ಅಭ್ಯಾಸ ಮಾಡಿದ್ದಾರೆ. ಪಾರಾಯಣ ಮಾಡುವ ಎಲ್ಲರಿಗೂ ಗುರುತಿನ ಚೀಟಿ ನೀಡಲಾಗಿದೆ. ಎಲ್ಲರನ್ನೂ ವಾಹನಗಳಲ್ಲಿ ಕರೆತರಲಾಗುವುದು’ ಎಂದು ಸ್ತುತಿ ಶಂಕರ ಸಂಚಾಲನ ಸಮಿತಿ ಕಾರ್ಯಾಧ್ಯಕ್ಷ ಸುಧಾಕರ ಶೆಟ್ಟಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.