
ಮೈಸೂರಿನ ಗಾನಭಾರತಿ ರಮಾಗೋವಿಂದ ಕಲಾವೇದಿಕೆಯಲ್ಲಿ ‘ಕರ್ನಾಟಕ ಗಾನಕಲಾ ಪರಿಷತ್ತು’ ಬುಧವಾರದಿಂದ ಆಯೋಜಿಸಿರುವ 5 ದಿನಗಳ ರಾಜ್ಯ ಸಂಗೀತ ಸಮ್ಮೇಳನದಲ್ಲಿ ವಿದುಷಿ ಅಕ್ಷತಾ ರುದ್ರಪಟ್ಟಣ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಲಹರಿ.
ಮೈಸೂರು: ವಿದ್ವಾನ್ ಹರೀಶ್ ಪಾಂಡವ್ ಅವರ ‘ಸ್ಯಾಕ್ಸೋಫೋನ್’ ವಾದನ, ವಿದುಷಿ ಅಕ್ಷತಾ ರುದ್ರಪಟ್ಟಣ ಅವರ ಗಾಯನ ಹಾಗೂ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಎ.ಶ್ರೀಧರ ಅವರ ಕೊಳಲು ವಾದನದ ಕಛೇರಿಯೊಂದಿಗೆ ‘ರಾಜ್ಯ ಸಂಗೀತ ಸಮ್ಮೇಳನ’ವು ಗರಿಗೆದರಿತು.
ನಗರದ ಗಾನಭಾರತಿ ರಮಾಗೋವಿಂದ ಕಲಾವೇದಿಕೆಯಲ್ಲಿ ‘ಕರ್ನಾಟಕ ಗಾನಕಲಾ ಪರಿಷತ್ತು’ ಬುಧವಾರದಿಂದ ಆಯೋಜಿಸಿರುವ 54ನೇ ಹಿರಿಯ ಹಾಗೂ 36ನೇ ಯುವ ಸಂಗೀತ ವಿದ್ವಾಂಸರ 5 ದಿನಗಳ ಸಮ್ಮೇಳನದಲ್ಲಿ ಸಂಗೀತ ಗಾಯನ, ವಾದನದ ಜೊತೆಗೆ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ದ ಇತಿಹಾಸ, ಬೆಳವಣಿಗೆಯ ಬಗ್ಗೆ ಸಂವಾದಕ್ಕೆ ಸಹೃದಯರು ಕಿವಿಯಾದರು.
ಸಂಶೋಧನೆ ನಡೆಯಲಿ: ‘ಕರ್ನಾಟಕ ಸಂಗೀತವು ಸಂಕರಗೊಳ್ಳದೇ ಮೂಲ ಶಾಸ್ತ್ರೀಯ ಚೌಕಟ್ಟನ್ನು ಉಳಿಸಿ ಕೊಂಡಿದ್ದು, ಕಲೆಯಲ್ಲದೇ ವಿಜ್ಞಾನವೂ ಆಗಿದೆ. ಸಂಗೀತ ಪ್ರಯೋಗಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯ ಬೇಕಿವೆ’ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಎ.ಶ್ರೀಧರ ಪ್ರತಿಪಾದಿಸಿದರು.
‘ಶಾಸ್ತ್ರೀಯ ಸಂಗೀತದ ಭವ್ಯ ಪರಂಪರೆಯ ಉಳಿವು, ಬೆಳವಣಿಗೆ ಆಗಲು ಸರ್ಕಾರದ ಪ್ರೋತ್ಸಾಹವೂ ಅಗತ್ಯ’ ಎಂದರು.
‘ಉತ್ತರಾದಿ ಸಂಗೀತವು ಕಸಿಯಿಂದ ಕಟ್ಟಿದ್ದಾಗಿದ್ದು, ಪರ್ಶಿಯನ್ ಸಂಗೀತ ಸಂಸ್ಕೃತಿಯೊಂದಿಗೆ ಮೇಳೈಸಿದೆ. ಆದರೆ, ಕರ್ನಾಟಕ ಸಂಗೀತವು ಸಾಮವೇದದಿಂದಲೂ ಮೂಲದಾಟಿಯನ್ನು ಜತನದಿಂದ ಕಾಪಾಡಿಕೊಂಡಿದೆ. ಜಾನಪದ ಸಂಗೀತ, ವಾದ್ಯಗಳಿಂದ ಪ್ರಭಾವಿತಗೊಂಡಿದ್ದಲ್ಲದೇ ಹಿಂದೂಸ್ಥಾನಿ ಸಂಗೀತದೊಂದಿಗೆ ಕೊಡು–ಕೊಳ್ವಿಕೆ ಮಾಡಿದೆ’ ಎಂದು ಹೇಳಿದರು.
‘ಚಾಲುಕ್ಯ ಚಕ್ರವರ್ತಿ ಸೋಮೇಶ್ವರ, ವಿಜಯನಗರದ ವಿದ್ಯಾರಣ್ಯ, ಪುರಂದರದಾಸರ, ‘ಬತ್ತೀಸ’ ರಾಗಗಳನ್ನು ಉಲ್ಲೇಖಿಸಿದ ಬಸವಾದಿ ಶರಣರು, ಕೀರ್ತನಕಾರರು, ನಿಜಗುಣ ಶಿವಯೋಗಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನಡೆಸಿದ ಪ್ರಯೋಗಗಳು ಕರ್ನಾಟಕ ಸಂಗೀತವನ್ನು ಶ್ರೀಮಂತಗೊಳಿಸಿವೆ. ಅದರಂತೆ ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು ಸೇರಿದಂತೆ ವಾಗ್ಗೇಯಕಾರರು ಈ ದಕ್ಷಿಣಾದಿ ಸಂಗೀತಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ’ ಎಂದು ವಿವರಿಸಿದರು.
ಶಾರೀರ ಕಾಪಾಡಿಕೊಳ್ಳಿ: ‘ಧ್ವನಿ, ಶಾರೀರ ಸಂಸ್ಕರಣವನ್ನು ಯುವ ಸಂಗೀತಗಾರರು ಕಾಪಾಡಿಕೊಳ್ಳಬೇಕು. ಸಂಗೀತ ವಾದ್ಯಗಳಲ್ಲಿ ತಂತ್ರಜ್ಞಾನದ ನಾವೀನ್ಯತೆಯು ಹೊಕ್ಕಿದೆ. ಎಲೆಕ್ಟ್ರಾನಿಕ್, ಫೈಬರ್ ವಾದ್ಯಗಳು ಬಂದಿವೆ. ಸಾಂಪ್ರದಾಯಿಕ ವಾದ್ಯ ಉಳಿಸಿಕೊಂಡು ಹೋಗುವುದು ಮುಖ್ಯ. ಪ್ರಸಿದ್ಧಿಗೆ ಬಾರದ ರಾಗಗಳಲ್ಲಿ ಯುವ ಸಮುದಾಯವು ಪ್ರಯೋಗ ನಡೆಸಬೇಕು. ಪರಂಪರೆ ಉಳಿಸಬೇಕು’ ಎಂದು ಶ್ರೀಧರ ಸಲಹೆ ನೀಡಿದರು.
ಯುವ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷ ವಿದ್ವಾನ್ ಮತ್ತೂರು ಆರ್.ಶ್ರೀನಿಧಿ ಹಾಗೂ ಲೇಖಕ ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿದರು. ವಿದುಷಿ ಕಲಾವತಿ ಅವಧೂತ್, ಉದ್ಯಮಿ ಜಗನ್ನಾಥ ಶೆಣೈ, ಮೃದಂಗ ವಿದ್ವಾನ್ ಜಿ.ಎಸ್.ರಾಮಾನುಜನ್ ಪಾಲ್ಗೊಂಡಿದ್ದರು.
‘ಪ್ರತಿ ಸಮ್ಮೇಳನಕ್ಕೂ ₹ 40 ಲಕ್ಷ ಖರ್ಚಾಗುತ್ತಿದೆ. ಪರಿಷತ್ತಿಗೆ ಆರ್ಥಿಕ ಶ್ರೀಮಂತಿಕೆ ಇಲ್ಲದಿದ್ದರೂ ಗಾನ ಶ್ರೀಮಂತಿಕೆಯಿರುವ ಕಲಾವಿದರಿಗೆ ಪ್ರೋತ್ಸಾಹ ನೀಡಲು ಜೋಳಿಗೆ ಹಿಡಿದಿದೆ. ಅದಕ್ಕೆ ಕಲಾಪೋಷಕರು ನೆರವಾಗಿದ್ದಾರೆ’ ಎಂದು ಪರಿಷತ್ತಿನ ಕಾರ್ಯಕಾರಿ ಸಮಿತಿ ಅಧ್ಯಕ್ಷ ವಿದ್ವಾನ್ ಆರ್.ಕೆ.ಪದ್ಮನಾಭ ಹೇಳಿದರು. ‘ಸಮ್ಮೇಳನದಲ್ಲಿ ಕಛೇರಿ ನೀಡುತ್ತಿರುವ 95 ಕಲಾವಿದರು ರಾಜ್ಯದವರೇ ಆಗಿದ್ದಾರೆ. ನಾಡಿನ ಕಲಾವಿದರ ಪ್ರತಿಭೆಗೆ ಜಾಗತಿಕ ಮನ್ನಣೆ ಸಿಗುತ್ತಿದೆ. ಮೊದಲೆಲ್ಲ ಈಗಿನಂತೆ ಇರಲಿಲ್ಲ. ನಮ್ಮಲ್ಲಿಯೂ ಪ್ರತಿಭಾನ್ವಿತರಿದ್ದಾರೆ’ ಎಂದರು.
ಸಮ್ಮೇಳನದಲ್ಲಿ ಇಂದು
ವಿದ್ವತ್ ಗೋಷ್ಠಿ: ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೇಳಗಳು ಮತ್ತು ಅವುಗಳ ವ್ಯಾಪ್ತಿ– ಪ್ರೊ.ಸಿ.ಎ.ಶ್ರೀಧರ ಶಾಸ್ತ್ರೀಯ ಸಂಗೀತದಲ್ಲಿ ಪಲ್ಲವಿಗಳ ಸೊಬಗು– ಎಂ.ಕೆ.ತೇಜಸ್ವಿನಿ ಪಕ್ಕವಾದ್ಯ ಮತ್ತು ತನಿವಾದ್ಯವಾಗಿ ಪಿಟೀಲು– ಮತ್ತೂರು ಆರ್.ಶ್ರೀನಿಧಿ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1.20 ಸಂಗೀತ ಕಾರ್ಯಕ್ರಮ: ಪುರಂದರದಾಸರ ಕೃತಿಗಳ ಕಛೇರಿ. ಗಾಯನ– ಮನೋಜ್ ಆರ್.ಎಸ್.ಚಿಂತಲಪಲ್ಲಿ. ಸಂಜೆ 4.15. ವಯಲಿನ್ ವಾದನ– ಮತ್ತೂರು ಆರ್.ಶ್ರೀನಿಧಿ. ಸಂಜೆ 6.45
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.