ADVERTISEMENT

ಮೈಸೂರು | ನಾಡಿನ ಮಠಗಳಿಗೆ ಸುತ್ತೂರು ಮಾದರಿ: ಕೆ.ಎಚ್‌. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:10 IST
Last Updated 18 ಜನವರಿ 2026, 4:10 IST
ಸುತ್ತೂರಿನಲ್ಲಿ ಶನಿವಾರ ಧಾರ್ಮಿಕ ಸಭೆಯನ್ನು ಸಚಿವ ಕೆ.ಎಚ್‌. ಮುನಿಯಪ್ಪ ಉದ್ಘಾಟಿಸಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿವಸಿದ್ದೇಶ್ವರ ಸ್ವಾಮೀಜಿ, ಜಿ.ಟಿ.ದೇವೇಗೌಡ, ನಿತೀಶ್‌ ಪಾಟೀಲ, ಶಿವಾನಂದ, ಸಿ. ಸೋಮಶೇಖರ್, ಕುಮಾರ್ ರಾಜಶೇಖರ್ ಜೊತೆಗಿದ್ದರು– ಪ್ರಜಾವಾಣಿ ಚಿತ್ರ
ಸುತ್ತೂರಿನಲ್ಲಿ ಶನಿವಾರ ಧಾರ್ಮಿಕ ಸಭೆಯನ್ನು ಸಚಿವ ಕೆ.ಎಚ್‌. ಮುನಿಯಪ್ಪ ಉದ್ಘಾಟಿಸಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿವಸಿದ್ದೇಶ್ವರ ಸ್ವಾಮೀಜಿ, ಜಿ.ಟಿ.ದೇವೇಗೌಡ, ನಿತೀಶ್‌ ಪಾಟೀಲ, ಶಿವಾನಂದ, ಸಿ. ಸೋಮಶೇಖರ್, ಕುಮಾರ್ ರಾಜಶೇಖರ್ ಜೊತೆಗಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ಸುತ್ತೂರು ಮಠ ಕಾರ್ಯರೂಪಕ್ಕೆ ತಂದಿದೆ. ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದೆ’ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶನಿವಾರ ‘ಧಾರ್ಮಿಕ ಸಭೆ’ಯಲ್ಲಿ ಮಾತನಾಡಿದ ಅವರು, ‘ಸುತ್ತೂರು ಕ್ಷೇತ್ರ ಬಹುದೊಡ್ಡ ಪ್ರಮಾಣದಲ್ಲಿ ವಿದ್ಯಾಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡುತ್ತಿದೆ. ಮಠಗಳಲ್ಲೇ ಶ್ರೇಷ್ಠ ಸ್ಥಾನ ಪಡೆದಿದೆ’ ಎಂದರು.

ನಾಸಾ ವಿಜ್ಞಾನಿ ಶಿವಾನಂದ, ‘ಅಮೆರಿಕದಲ್ಲಿಯೂ ಜೆಎಸ್‌ಎಸ್ ತನ್ನ ಕೇಂದ್ರ ತೆರೆದಿದ್ದು, ವಿದೇಶಗಳಲ್ಲೂ ಅಧ್ಯಾತ್ಮದ ಜ್ಞಾನ ಪಸರಿಸುತ್ತಿದೆ’ ಎಂದು ಹೇಳಿದರು.

ADVERTISEMENT

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ಸೋಮಶೇಖರ್, ‘ಸಿದ್ಧಗಂಗಾ ಹಾಗೂ ಸುತ್ತೂರು ಮಠಗಳು ಕರ್ನಾಟಕದ ಅಧ್ಯಾತ್ಮದ ಎರಡು ಕಣ್ಣುಗಳು. ಈ ಎರಡೂ ಮಠಗಳ ನಡುವೆ ಅನನ್ಯ ಸಂಬಂಧ ಇದೆ’ ಎಂದರು.

‘ಜಾತ್ರೆ ಬದುಕಿನ ಆತ್ಮ ಇದ್ದ ಹಾಗೆ. ಸಂಬಂಧಗಳನ್ನು ಬೆಸೆಯುವುದೇ ಇವುಗಳ ಆಶಯ. ಇದೊಂದು ಜಾತ್ಯತೀತ–ಪಕ್ಷಾತೀತವಾದ ಸಾಂಸ್ಕೃತಿಕ ಹಬ್ಬ. ಇದು ಧರ್ಮದ ಸಂಕೇತವೂ ಹೌದು. ಇದಕ್ಕೊಂದು ಸಾಂಸ್ಕೃತಿಕ ಆಯಾಮವಿದೆ’ ಎಂದು ನುಡಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ, ‘ಸುತ್ತೂರು ಮಠವು ಧಾರವಾಡ ಭಾಗದಲ್ಲೂ ಶಿಕ್ಷಣ ಸಂಸ್ಥೆಗಳ ಮೂಲಕ ಉತ್ತಮ ಸೇವೆ ನೀಡುತ್ತ ಬಂದಿದೆ. ಸಂಸ್ಕಾರ ಕೊಡುವ ಜಾತ್ರೆಯ ಜೊತೆಗೆ ಲಕ್ಷಾಂತರ ಮಂದಿಗೆ ದಾಸೋಹದ ಸೇವೆ ನೀಡುತ್ತಿದೆ. ಕೆಲವು ಮಠಗಳು ವಿನಾಶದ ಅಂಚಿಗೆ ಹೋಗುತ್ತಿದ್ದು, ಅಂತಹವರು ಸುತ್ತೂರು ಮಠವನ್ನು ನೋಡಿ ಕಲಿಯಬೇಕಿದೆ’ ಎಂದರು.

ಇದೇ ವೇಳೆ ‘ಚನ್ನಬಸವಣ್ಣನ ವಚನ ವ್ಯಾಖ್ಯಾನ’ ಕೃತಿ ಬಿಡುಗಡೆ ಹಾಗೂ ಜೆಎಸ್‌ಎಸ್‌ ಸಂಚಾರಿ ಗ್ರಂಥಮಾಲೆ ಉದ್ಘಾಟಿಸಲಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿದ್ಧಗಂಗಾ ಮಠದ ಕಿರಿಯಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಹೊಸಪೇಟೆಯ ಸಾಲಿ ಸಿದ್ದಯ್ಯ ಸ್ವಾಮೀಜಿ, ಶಾಸಕ ಜಿ.ಟಿ. ದೇವೇಗೌಡ, ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್‌ ಪಾಟೀಲ, ಯುಎಸ್‌ಎ ಮೆ.ಮಾರ್ಸಿಲ್ಲಿ ಅಧ್ಯಕ್ಷ ಕುಮಾರ ರಾಜಶೇಖರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷ ಶಂಕರ್ ಪಿಳ್ಳೈ, ಕಾರ್ಯದರ್ಶಿ ಮನೋಹರ್ ಪಾಲ್ಗೊಂಡಿದ್ದರು.

ಈಚಿನ ದಿನಗಳಲ್ಲಿ ಅದ್ದೂರಿ ವಿವಾಹಗಳು ಜನರನ್ನು ಸಾಲಕ್ಕೆ ತಳ್ಳುತ್ತಿವೆ. ಸುತ್ತೂರು ಮಠವು ಪ್ರತಿ ತಿಂಗಳು ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ಇತರರಿಗೆ ಮಾದರಿ ಆಗಿದೆ
ಜಿ.ಟಿ. ದೇವೇಗೌಡ ಶಾಸಕ