ADVERTISEMENT

14 ತಿಂಗಳ ನಂತರ ಕೈ ಸೇರಿದ ಒಡವೆಗಳು!

ಒಡವೆಗಳಿದ್ದ ಬ್ಯಾಗ್‌ ನೀಡಿ ಪ್ರಮಾಣಿಕತೆ ಮೆರೆದ ಸ್ವಚ್ಛತಾ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:39 IST
Last Updated 22 ಆಗಸ್ಟ್ 2019, 19:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ರೈಲಿನ ಶೌಚಾಲಯ ಸ್ವಚ್ಛಗೊಳಿಸುವಾಗ ಸಿಕ್ಕಿದ್ದ ₹ 2.31 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್‌ನ್ನು ಸ್ವಚ್ಛತಾ ಕಾರ್ಮಿಕರಾದ ಸುಂದರಿ ಎಂಬುವವರು ರೈಲ್ವೆ ಭದ್ರತಾ ಪಡೆಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಮೈಸೂರು ರೈಲ್ವೆ ಭದ್ರತಾ ಪಡೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಅವರು ಬ್ಯಾಗ್‌ನ್ನು ವಾರಸುದಾರ ತಮಿಳುನಾಡಿನ ದಿಂಡಿಗಲ್‌ನ ಟಿ.ಎಸ್.ಸುರೇಶ್‌ಕುಮಾರ್ ಎಂಬುವವರಿಗೆ ಹಸ್ತಾಂತರಿಸಿದ್ದಾರೆ.

ಘಟನೆ ವಿವರ: ಸುರೇಶ್‌ಕುಮಾರ್ ಹಾಗೂ ಅವರ ಕುಟುಂಬ 2018ರ ಜೂನ್ 11ರಂದು ಮೈಲಾಡುದೊರೈ–ಮೈಸೂರು ರೈಲಿನಲ್ಲಿ ಪ್ರಯಾಣಿಸುವಾಗ ಚಿನ್ನಾಭರಣಗಳಿದ್ದ ಬ್ಯಾಗ್‌ನ್ನು ಕಳೆದುಕೊಂಡಿದ್ದರು. ಇವರು ಈ ಕುರಿತು ಸೇಲಂನಲ್ಲಿ ದೂರು ನೀಡಿದ್ದರು.

ADVERTISEMENT

ರೈಲು ಮೈಸೂರಿಗೆ ಬಂದಾಗ ಸ್ವಚ್ಛತಾ ಸಿಬ್ಬಂದಿ ಸುಂದರಿ ಎಂಬ ಮಹಿಳೆಗೆ ಶೌಚಾಲಯದಲ್ಲಿ ಈ ಬ್ಯಾಗ್‌ ಸಿಕ್ಕಿತ್ತು. ತಕ್ಷಣ ಅವರು ಪೊಲೀಸರ ವಶಕ್ಕೆ ನೀಡಿದ್ದರು.

ಪೊಲೀಸರು ಕಳೆದ 14 ತಿಂಗಳುಗಳಿಂದ ವಾರಸುದಾರರಿಗೆ ಹುಡುಕಾಟ ನಡೆಸುತ್ತಿದ್ದರು. ರಾಜ್ಯದ ಎಲ್ಲ ಠಾಣೆಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಅವರು ತಮಿಳುನಾಡಿನ ರೈಲ್ವೆ ರೆಕಾರ್ಡ್ ಬ್ಯೂರೊವನ್ನು ಸಂಪರ್ಕಿಸಿದರು. ಚಿನ್ನಾಭರಣಗಳಿರುವ ಬ್ಯಾಗ್ ಕಳೆದುಕೊಂಡಿರುವ ಕುರಿತು ಸುರೇಶ್‌ಕುಮಾರ್ ಅವರು ಸೇಲಂನಲ್ಲಿ ದೂರು ದಾಖಲಿಸಿದ್ದು ಪತ್ತೆಯಾಯಿತು.

ಕೊನೆಗೂ ಸುರೇಶ್‌ಕುಮಾರ್‌ ಅವರನ್ನು ಸಂಪರ್ಕಿಸಿದ ಪೊಲೀಸರು ಬುಧವಾರ ಚಿನ್ನಾಭರಣ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.