
ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗನಪುರ ಗ್ರಾಮದಲ್ಲಿ ರೈತರ ಮೇಲೆ ದಾಳಿ ಮಾಡಿದ ಹುಲಿ
ಸರಗೂರು: ತಾಲ್ಲೂಕಿನ ಬಡಗಲಪುರ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆಯು ಕೂಂಬಿಂಗ್ ಕಾರ್ಯಾಚರಣೆಯನ್ನು ಗುರುವಾರ ನಡೆಸಿದ್ದಾಗ, ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ರೈತ ಮಹದೇವ್ ಮೇಲೆ ಹುಲಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದಾರೆ.
ಮುಖ, ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದರು. ಸ್ಥಳಕ್ಕೆ ಆಗಮಿಸಿದ ಎಸಿಎಫ್ ಸತೀಶ್ ತಮ್ಮ ವಾಹನದಲ್ಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕಳೆದ ವಾರದಿಂದ ಹುಲಿ ಕಾಣಿಸಿಕೊಂಡು ಜನರಲ್ಲಿ ಅತಂಕವಾಗಿತ್ತು. ಅದರಿಂದಾಗಿ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಇಲಾಖೆಯು ನಾಲ್ಕು ದಿನದಿಂದ ಅನುಭವಿ ಆನೆ ‘ಅಭಿಮನ್ಯು’, ‘ಭಗೀರಥ’ ಆನೆಗಳ ನೆರವಿನಿಂದ ಸೆರೆ ಕಾರ್ಯಾಚರಣೆ ಆರಂಭಿಸಿದ್ದರು. ಬೋನ್ ಇರಿಸಲಾಗಿತ್ತು. ಹುಲಿಯು ಗ್ರಾಮದ ಬೋಳೆಗೌಡನಕಟ್ಟೆ ಕೆರೆ ಬಳಿ ಅವಿತು ಕುಳಿತಿತ್ತು. ಅದನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಬಳಿ ಯಾರು ಹೋಗದಂತೆ ಎಚ್ಚರಿಕೆ ನೀಡಿದ್ದರು. ಆದರೆ, ಹುಲಿ ಗಾಬರಿಯಾಗಿ ಕುಮಾರ್ ಎಂಬುವರ ತೋಟದ ಕಡೆಗೆ ಓಡಿದ್ದು, ನಂತರ ಮತ್ತೆ ಅಲ್ಲಿಂದ ನುಗು ಅರಣ್ಯದ ಕಡೆಗೆ ಓಡಿ ಹೋಗಿ ಪೊದೆಯಲ್ಲಿ ಅವಿತಿತ್ತು.
ಅಲ್ಲಿಗೆ ಸಾಕಾನೆಗಳಾದ ಅಭಿಮನ್ಯು, ಭಗೀರಥ ನುಗ್ಗಿದವು. ಅದರಿಂದ ಬೆದರಿದ ಹುಲಿ ಪೊದೆಯಿಂದ ಹೊರ ಬಂದು ಮತ್ತೆ ಕಾಡಿನತ್ತ ಓಡುವಾಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವ್ ಮಾಡಿ ದಾಳಿ ಮಾಡಿ ಪರಾರಿಯಾಗಿದೆ. ಕಾರ್ಯಾಚರಣೆ ಮುಂದುವರಿದಿದೆ.
ಎಸಿಎಫ್ ಸತೀಶ್, ಆರ್‌ಎಫ್‌ಒ ವಿವೇಕ್ ಹಾಗೂ ಚಿರತೆ ಕಾರ್ಯಪಡೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಕೂಂಬಿಂಗ್ ಕಾರ್ಯಾಚರಣೆಯಲ್ಲಿ ‘ಅಭಿಮನ್ಯು’ ಆನೆ, ಮಾವುತ ವಸಂತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.