
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆರಂಭವಾದ 6ನೇ ರಾಷ್ಟ್ರೀಯ ಹುಲಿ ಗಣತಿ ಕಾರ್ಯದ ಮೊದಲ ಹಂತದ ಮೂರು ದಿನಗಳ ಗಣತಿ ಕಾರ್ಯ ಮುಕ್ತಾಯವಾಗಿದ್ದು, ಎರಡನೇ ಹಂತದ ಗಣತಿ ಆರಂಭವಾಗಿದೆ ಎಂದು ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
‘ಜ.5 ರಿಂದ 12 ವರೆಗೆ ದೇಶದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ , ವನ್ಯಜೀವಿ ಸಂಸ್ಥೆ , ರಾಜ್ಯ ಸರ್ಕಾರದ ಸಹಯೋಗದಲ್ಲಿ ಹುಲಿ ಗಣತಿ ಕಾರ್ಯದ ಮೊದಲ ಹಂತ ಜ. 7 ಕ್ಕೆ ಕೊನೆಗೊಂಡಿದೆ. ಎರಡನೇ ಹಂತದಲ್ಲಿ 2 ದಿನ ಪೂರ್ಣಗೊಂಡಿದ್ದು, ಇಲಾಖೆ ಸಿಬ್ಬಂದಿಯೊಂದಿಗೆ ಪೊನ್ನಂಪೇಟೆ ಅರಣ್ಯ ಕಾಲೇಜಿನ 30 ವಿದ್ಯಾರ್ಥಿಗಳು ಭಾಗವಹಿಸಿದ್ದರು’ ಎಂದರು.
ಎರಡನೇ ಹಂತದ ಗಣತಿ ಕಾರ್ಯದಲ್ಲಿ ಇಲಾಖೆ ಸಿಬ್ಬಂದಿ ಟ್ರ್ಯಾನ್ಸಿಟ್ ಲೈನಲ್ಲಿ 2 ಕಿ.ಮೀ. ಕ್ರಮಿಸಿ ಇಲಾಖೆ ನಿಯಮಾನುಸಾರ ವನ್ಯಪ್ರಾಣಿಗಳ ಹಿಕ್ಕೆ ಮತ್ತು ಅವುಗಳು ಓಡಾಡುವ ಸ್ಥಳದಲ್ಲಿ ಕಂಡು ಬರುವ ಪ್ರತಿಯೊಂದು ಗುರುತುಗಳನ್ನು ದಾಖಲಿಸಿ ಭಾರತೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (ಎನ್.ಟಿ.ಸಿ.ಎ.)ಗೆ ದಾಖಲೆ ಸಮೇತ ಆನ್‌ಲೈನ್‌ನಲ್ಲಿ ಕಳುಹಿಸಲಾಗುವುದು ಎಂದರು.
ಆಹಾರ ಸರಪಳಿ: ನಾಗರಹೊಳೆ ಅರಣ್ಯದಲ್ಲಿ ಹುಲಿ ಸಂತತಿ ವೃದ್ಧಿಯಾಗುತ್ತಿದ್ದು, ಕಳೆದ ಸಾಲಿಗೂ ಇಂದಿನ ಪರಿಸ್ಥಿತಿಗೆ ಅರಣ್ಯದಲ್ಲಿ ಹುಲಿ ಸಂತತಿ ವೃದ್ಧಿಗೆ ತಕ್ಕಷ್ಟು ಸ್ಥಳ, ಆಹಾರ ಸರಪಳಿ ಲಭ್ಯತೆ ಎಲ್ಲವನ್ನೂ ದಾಖಲಿಸಲಾಗುವುದು. ಅರಣ್ಯದಲ್ಲಿ ಹುಲಿ ಪರಭಕ್ಷಕನಾಗಿದ್ದು, ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ತಿಳಿಯುವುದು ಅವಶ್ಯಕವಿದ್ದು, ಹುಲಿಗೆ ಪೂರಕವಾದ ಆಹಾರ ಮತ್ತು ವಾಸಕ್ಕೆ ಯೋಗ್ಯ ಸ್ಥಳ ಸಂರಕ್ಷಣೆಯ ಪ್ರಮಾಣ ತಿಳಿಯಲು ಸಹಕಾರಿ ಆಗಿದೆ ಎಂದು ಲಕ್ಷ್ಮಿಕಾಂತ್ ಹೇಳಿದರು.
ಜ 5 ರಿಂದ ಆರಂಭವಾದ ಹುಲಿ ಗಣತಿ ಮಾಹಿತಿ ಆನ್‌ಲೈನ್ ಆ್ಯಪ್‌ನಲ್ಲಿ ದಾಖಲಾಗಿದೆ ಉಳಿದ ಎರಡು ಹಂತ ಪ್ರಗತಿಯಲ್ಲಿದೆ. ಗಣತಿಯಲ್ಲಿ ಸ್ವಯಂ ಸೇವಕರನ್ನು ಹೊರಗಿಡಲಾಗಿದೆ. ಇಲಾಖೆ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ ಮಾರ್ಗಸೂಚಿಯಲ್ಲಿ ದಾಖಲಿಸುತ್ತಿದೆ.ಲಕ್ಷ್ಮಿಕಾಂತ್ ಎಸಿಎಫ್ ನಾಗರಹೊಳೆ
‘ಹುಲಿ ಸಂತತಿ ವೃದ್ಧಿ’
ಗಣತಿ ಕಾರ್ಯದಲ್ಲಿ ಹುಲಿ ಮರಿಗಳ ಸಂಖ್ಯೆ ಹೆಚ್ಚಿರುವುದು ಕಂಡು ಬಂದಿದೆ ಅರಣ್ಯದಲ್ಲಿ ಹುಲಿ ಮರಿಗಳ ಹೆಜ್ಜೆ ಗುರುತು ಅಲ್ಲಲ್ಲಿ ಕಂಡು ಬಂದಿದ್ದು ಹುಲಿ ಸಂತತಿ ಮತ್ತಷ್ಟು ವೃದ್ಧಿಯಾಗಿದೆ ಎಂಬ ವಿಶ್ವಾಸವಿದೆ. ಅಂತಿಮವಾಗಿ ಭಾರತೀಯ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ ಖಚಿತಪಡಿಸಲಿದೆ ಎಂದು ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ವಿನೋದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.