
ಹುಲಿ (ಪ್ರಾತಿನಿಧಿಕ ಚಿತ್ರ)
ಮೈಸೂರು: ಜಿಲ್ಲೆಯ ನುಗು ವನ್ಯಜೀವಿಧಾಮ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಮೂವರ ಬಲಿ ಪಡೆದಿದ್ದ ಹುಲಿಯ ಡಿಎನ್‌ಎ ಮಾದರಿಯನ್ನು ಹೈದರಾಬಾದ್‌ನ ಜೀವಕೋಶ ಮತ್ತು ಆಣ್ವಿಕ ಜೀವವಿಜ್ಞಾನ ಕೇಂದ್ರಕ್ಕೆ (ಸಿಸಿಎಂಬಿ) ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನೂ ವರದಿ ಬಂದಿಲ್ಲ.
ಅರಣ್ಯ ಇಲಾಖೆಯು ನೆರೆ ರಾಜ್ಯ ತೆಲಂಗಾಣದ ಪ್ರಯೋಗಾಲಯವನ್ನೇ ಅವಲಂಬಿಸಿದೆ. ಬೆಂಗಳೂರಿನ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ಆವರಣದಲ್ಲಿ ಸ್ಥಾಪಿಸಿರುವ ₹2.7 ಕೋಟಿ ವೆಚ್ಚದ ವನ್ಯಜೀವಿ ವಿಧಿವಿಜ್ಞಾನ ಕೋಶ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲವೇಕೆ ಎಂಬ ಪ್ರಶ್ನೆಯೂ ಮೂಡಿದೆ.
ವನ್ಯಜೀವಿ ಜೆನೆಟಿಕ್ಸ್ ಪ್ರಯೋಗಾಲಯಗ ಸ್ಥಾಪನೆ ಕುರಿತು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ 2024ರ ಫೆ.16ರಂದು ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿದ್ದರು. ಅದೇ ವರ್ಷದ ಮಾರ್ಚ್‌ನಲ್ಲಿ ಪ್ರತಿಕ್ರಿಯಿಸಿದ್ದ ಆಗಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್, ‘ ಮಡಿವಾಳದಲ್ಲಿ ವನ್ಯಜೀವಿ ವಿಧಿವಿಜ್ಞಾನ ಕೋಶ ಸ್ಥಾಪಿಸುತ್ತಿದ್ದು ಹೊಸ ಪ್ರಯೋಗಾಲಯ ಅಗತ್ಯವಿಲ್ಲ’ ಎಂದಿದ್ದರು.
ಖಚಿತ ಪಡಿಸಿಕೊಳ್ಳಿ: ರೈತರ ಮೇಲೆ ದಾಳಿ ಮಾಡಿದ್ದ ಹುಲಿಯನ್ನು ನ.8ರ ರಾತ್ರಿ ಇಲಾಖೆ ಸರಗೂರು ತಾಲ್ಲೂಕಿನ ಹೊಸಕೋಟೆಯಲ್ಲಿ ಸೆರೆ ಹಿಡಿದಿತ್ತು. ‘ಡಿಎನ್‌ಎ ಮಾದರಿ ಆಧರಿಸಿ, ಇದು ದಾಳಿ ಮಾಡಿದ್ದ ಹುಲಿ ಎಂದು ಖಚಿತಪಡಿಸಿಕೊಳ್ಳಬೇಕು’ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ, ಹುಲಿ ಡಿಎನ್‌ಎ ಮಾದರಿಯ ವರದಿ ಹೈದರಾಬಾದ್‌ನಿಂದ ವರದಿ ಬರುವುದು ತಡವಾಗಲಿದೆ. ‘ದಾಳಿ ಮಾಡಿದ್ದ ಹುಲಿ ಯಾವುದು’ ಎಂಬುದು ಕೆಳ ಹಂತದ ಅಧಿಕಾರಿಗಳಿಗೆ ಇನ್ನೂ ಖಚಿತವಾಗದೆ, ಕಾಣಿಸಿದ ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯ ಮುಂದುವರಿಸಿದ್ದಾರೆ.
‘ಹೊಸಕೋಟೆಯಲ್ಲಿ ಸೆರೆಸಿಕ್ಕ ಹುಲಿ, ಹಿಂದೆ ಸೆರೆಯಾಗಿದ್ದ ಹುಲಿಗಳ ಕೂದಲು, ಎಂಜಲಿನ ಮಾದರಿ ಸೇರಿದಂತೆ ಡಿಎನ್‌ಎ ಮಾದರಿಗಳನ್ನು ಹೈದರಾಬಾದ್‌ಗೆ ಕಳುಹಿಸಲಾಗಿದೆ. ಅದರ ವರದಿ ಬರಲು ತಿಂಗಳಾಗಬಹುದು’ ಎಂದು ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ತರಬೇತಿ ಹಂತದಲ್ಲಿದ್ದಾರೆ: ‘ಹುಲಿ ಅಥವಾ ಇನ್ನಾವುದೇ ವನ್ಯಜೀವಿಗಳು ಸತ್ತರೆ, ಅದಕ್ಕೆ ಕಾರಣಗಳೇನು ಎಂದು ರಾಜ್ಯದ ಪ್ರಯೋಗಾಲಯದಲ್ಲಿ ಪತ್ತೆ ಮಾಡಲಾಗುತ್ತಿದೆ. ರಾಜ್ಯದ ಸಿಬ್ಬಂದಿಯೇ ಇಲ್ಲಿದ್ದು, ತರಬೇತಿ ಹಂತದಲ್ಲಿದ್ದಾರೆ’ ಎಂದು ಮಡಿವಾಳದ ವನ್ಯಜೀವಿ ವಿಧಿವಿಜ್ಞಾನ ಕೋಶದ ತಜ್ಞರು ಖಚಿತ ಪಡಿಸಿದ್ದಾರೆ.
ವರ್ಷದ ಹಿಂದೆ ಆರಂಭವಾಗಿರುವ ಕೋಶ ₹ 2.7 ಕೋಟಿ ವೆಚ್ಚದ ಪ್ರಯೋಗಾಲಯ ತರಬೇತಿ ಹಂತದಲ್ಲಿಯೇ ಇರುವ ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.