ಮೈಸೂರು: ‘ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್’ ಎಂಬ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಹೇಳಿಕೆಗೆ, ಮಾಜಿ ಸಂಸದ ಪ್ರತಾಪ ಸಿಂಹ ತಿರುಗೇಟು ನೀಡಿದ್ದಾರೆ.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜೂನಿಯರ್ ಡಾಕ್ಟರ್ ಯತೀಂದ್ರ ಅವರು ನಾಲ್ವಡಿಗಿಂತಲೂ ನಮ್ಮಪ್ಪನೇ ದೊಡ್ಡವ ಎಂದಿದ್ದರು. ಈಗ ಸೀನಿಯರ್ ಡಾಕ್ಟರ್ ಮಹದೇವಪ್ಪ ಅವರ ಸರದಿ. ಯತೀಂದ್ರ ಹೊಸ ಇತಿಹಾಸ ಬರೆಯಲು ಹೊರಟರೆ, ಸಿನೀಯರ್ ಡಾಕ್ಟ್ರು ಇತಿಹಾಸ ತಿರುಚಲು ಯತ್ನಿಸಿದ್ದಾರೆ’ ಎಂದು ಟೀಕಿಸಿದರು.
‘ಟಿಪ್ಪು ಸುಲ್ತಾನ್ ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದ್ದರೆ ಯಾರೋ ಮುಲ್ಲಾನೋ, ಮೌಲ್ವಿನೋ ಡಿಪಿಆರ್ ಮಾಡಿರಬೇಕು ತಾನೇ? ಅವರ‍್ಯಾರೆಂದು ತಿಳಿಸಲಿ’ ಎಂದು ಸವಾಲು ಹಾಕಿದರು.
‘ಟಿಪ್ಪು ಅಳ್ವಿಕೆ ಇದ್ದ ವೇಳೆ ವಿಶ್ವೇಶ್ವರಯ್ಯ ಅವರು ಹುಟ್ಟಿರಲೇ ಇಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಇರದಿದ್ದರೆ ಕೆಆರ್‌ಎಸ್ ಜಲಾಶಯ ನಿರ್ಮಾಣವೇ ಆಗುತ್ತಿರಲಿಲ್ಲ. 1799ರಲ್ಲಿ ಟಿಪ್ಪು ಸತ್ತು ಹೋದ. 1911ರಲ್ಲಿ ಕೆಆರ್‌ಎಸ್ ಅಣೆಕಟ್ಟೆ ಕಟ್ಟಲು ಶುರು ಮಾಡಿದರು. ಎಲ್ಲಿಂದ ಎಲ್ಲಿಗೆ ಲಿಂಕ್ ಇದೆ ಮಹದೇವಪ್ಪನವರೇ?’ ಎಂದು ಕೇಳಿದರು.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ನಿಮಗೆಲ್ಲಾ ಯಾಕಿಷ್ಟು ಕೋಪ? ಯತೀಂದ್ರ ಕಳೆದ ವಾರ ಅವಹೇಳನ ಮಾಡಿದ್ದರು. ಈಗ ನೀವು ಮುಂದುವರಿಸಿದ್ದೀರಿ. ಟಿಪ್ಪು ಸುಲ್ತಾನನೇ ದಸರಾ ಆಚರಣೆ ಶುರು ಮಾಡಿದ ಎಂದೂ ಹೇಳಿಬಿಡಿ’ ಎಂದು ವ್ಯಂಗ್ಯವಾಡಿದರು.
‘ಸುಳ್ಳು ಸುದ್ದಿ ಹರಡುವವರ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ತ್ವರಿತವಾಗಿ ಆ ಕೆಲಸ ಮಾಡಲಿ. ಮೊದಲಿಗೆ ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಯತೀಂದ್ರ ಸಿದ್ದರಾಮಯ್ಯ ಮೇಲೆಯೇ ಕೇಸ್ ಹಾಕಲಿ’ ಎಂದರು.
‘ಮೈಸೂರು ಮಹಾರಾಜರ ಬಗ್ಗೆ ಸಿದ್ದರಾಮಯ್ಯ ದ್ವೇಷ ರಕ್ತಗತವಾಗಿಯೇ ಬಂದಿದೆ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದ ಎನ್ನುವುದರಲ್ಲಿ ತಕರಾರಿಲ್ಲ. ಆದರೆ, ಹೇಗೆ ಸ್ವಾತಂತ್ರ್ಯ ಹೋರಾಟಗಾರ ಆಗುತ್ತಾನೆ? ಟಿಪ್ಪು ಅಳ್ವಿಕೆ ವೇಳೆ ಸ್ವಾತಂತ್ರ್ಯ ಹೋರಾಟದ ಕಲ್ಪನೆಯೇ ಇರಲಿಲ್ಲ. ಸಂಸ್ಥಾನ ಉಳಿಸಿಕೊಳ್ಳಲು ಹಲವರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅದನ್ನೇ ಟಿಪ್ಪು ಕೂಡ ಮಾಡಿದ್ದಾರೆ. ಒಂದು ಸಮುದಾಯದ ಮತಕ್ಕಾಗಿ ಇತಿಹಾಸ ತಿರುಚುವುದು ಮಹದೇವಪ್ಪ ಅವರಿಗೆ ಶೋಭೆ ತರುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.