ADVERTISEMENT

ಮೈಸೂರು: ಫೆ.10ರಿಂದ ತಿರುಮಕೂಡಲು ಮಹಾಕುಂಭಮೇಳ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 8:49 IST
Last Updated 26 ಡಿಸೆಂಬರ್ 2024, 8:49 IST
<div class="paragraphs"><p>ಸುತ್ತೂರು ಶಾಖಾ ಮಠದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆ</p></div>

ಸುತ್ತೂರು ಶಾಖಾ ಮಠದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆ

   

ಮೈಸೂರು: ದಕ್ಷಿಣದ ಪ್ರಯಾಗರಾಜ್ ಎಂದೇ ಖ್ಯಾತಿ ಗಳಿಸಿರುವ ಜಿಲ್ಲೆಯ ತಿ.ನರಸೀ‍ಪುರದಲ್ಲಿರುವ ಕಾವೇರಿ–ಕಪಿಲಾ ನದಿಗಳು–ಸ್ಫಟಿಕ ಸರೋವರಗಳ ‘ತ್ರಿವೇಣಿ ಸಂಗಮ’ದ ಪುಣ್ಯಕ್ಷೇತ್ರವಾದ ತಿರುಮಕೂಡಲಿನಲ್ಲಿ 12ನೇ ಮಹಾಕುಂಭಮೇಳವನ್ನು 2025ರ ಫೆ.10ರಿಂದ 12ರವರೆಗೆ ಹಮ್ಮಿಕೊಳ್ಳಲಾಗಿದೆ.

ದಕ್ಷಿಣದಲ್ಲೂ ಮಹಾಕುಂಭಮೇಳ ನಡೆಯಬೇಕು ಎನ್ನುವ ವಿವಿಧ ಮಠಾಧಿಪತಿಗಳ ಆಶಯದಂತೆ 1989ರಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿತು. ಪ್ರತಿ 3 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿದೆ. 2019ರಲ್ಲಿ ನಡೆದಿತ್ತು. ಕೋವಿಡ್ ಸಮಯದಲ್ಲಿ ಆಯೋಜನೆಗೊಂಡಿರಲಿಲ್ಲ. ಹೀಗಾಗಿ, ಆರು ವರ್ಷಗಳ ಬಳಿಕ ಜರುಗುತ್ತಿದೆ. ಮುಂದಿನ ವರ್ಷ ಜರುಗಲಿರುವುದು 12ನೇ ಮಹಾಕುಂಭಮೇಳವಾಗಿದೆ. ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದಾಗಿ, ಮಠಾಧೀಶರ ಬಳಗ ಹಾಗೂ ಜಿಲ್ಲಾಡಳಿತದಿಂದ ಈಗಿನಿಂದಲೇ ಪೂರ್ವಸಿದ್ಧತೆ ಆರಂಭಿಸಲಾಗಿದೆ.

ADVERTISEMENT

ಇಲ್ಲಿನ ಚಾಮುಂಡಿಬೆಟ್ಟದ ಪಾದದಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ದಿನಾಂಕವನ್ನು ಘೋಷಿಸಲಾಯಿತು. ಮಾಡಿಕೊಳ್ಳಬೇಕಾದ ಸಿದ್ಧತೆಯ ಕುರಿತು ಚರ್ಚಿಸಲಾಯಿತು. ಜವಾಬ್ದಾರಿಯನ್ನು ಹಂಚಿಕೆ ಮಾಡಲಾಯಿತು. ಸರ್ಕಾರದ ಸಹಕಾರ ಕೋರಲಾಯಿತು.

ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಹಾಗೂ ತಿ.ನರಸೀಪುರ ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ಚರ್ಚಿಸಬೇಕೆಂದು ನಿರ್ಧರಿಸಲಾಯಿತು. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪುಣ್ಯಸ್ನಾನ ಕಾರ್ಯಕ್ರಮಕ್ಕೆ ಆಹ್ವಾನಿಸುವ ಬಗ್ಗೆ ಚರ್ಚೆಯಾಯಿತು.

ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ತಿರುಚ್ಚಿ ಮಹಾಸಂಸ್ಥಾನದ ಮಠಾಧೀಶ ಜಯೇಂದ್ರಸರಸ್ವತಿ ಸ್ವಾಮೀಜಿ, ವಾಟಾಳು ಮಠದ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಎಸ್ಪಿ ಎನ್.ವಿಷ್ಣುವರ್ಧನ್‌, ಉಪವಿಭಾಗಾಧಿಕಾರಿ ರಕ್ಷಿತ್, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.