ಉತ್ತರಾಖಂಡ್‌ನ ‘ಕೌರಿ ಟಾಪ್’ ಶಿಖರದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಸಂಭ್ರಮದಲ್ಲಿ ಮೈಸೂರಿನ ಪೌರಕಾರ್ಮಿಕರ ಮಕ್ಕಳು, ಮಾವುತರು ಹಾಗೂ ಅರಣ್ಯ ವೀಕ್ಷಕರ ತಂಡ
ಹಿಮಾಲಯ ಎನ್ನುವುದು ಶ್ರಮಿಕರು, ಬಡವರಿಗೆ ಕೈಗೆಟುಕದ ಪರ್ವತ. ಪೌರಕಾರ್ಮಿಕರ ಮಕ್ಕಳು, ಮಾವುತ–ಕಾವಾಡಿಗಳು ಹಾಗೂ ಅರಣ್ಯ ಗಸ್ತು ವೀಕ್ಷಕರ ಚಾರಣದ ಕನಸು ನನಸಾಗಲು 165ಕ್ಕೂ ಹೆಚ್ಚು ಪರ್ವಾತಾರೋಹಿಗಳು ಕೈ ಜೋಡಿಸಿದರು. ಹಿಮಾಲಯ ಎಂಬುದು ಈಗ ಅವರಿಗೆ ಹೃದ್ಯವಾಗಿದೆ. ‘ಜೂನೂನ್– 2025’ ಹಿಮಾಲಯ ಸಾಹಸ ಯಾತ್ರೆಯನ್ನು ಇದೇ ಏಪ್ರಿಲ್–ಮೇನಲ್ಲಿ ಕೈಗೊಳ್ಳಲಾಗಿತ್ತು.
ನಿತ್ಯಶ್ರೀ ಮೈಸೂರಿನ ಹೆಬ್ಬಾಳದ ಪೌರಕಾರ್ಮಿಕ ದಂಪತಿ ಜಯರಾಮು–ನಾಗವೇಣಿ ಅವರ ಪುತ್ರಿ. ಈಕೆ ಸಮೀಪವೇ ಇರುವ ಚಾಮುಂಡಿ ಬೆಟ್ಟವನ್ನು ಒಮ್ಮೆಯೂ ಹತ್ತಿರಲಿಲ್ಲ. ಈಕೆಯನ್ನು ಹಿಮಾಲಯ ಚಾರಣಕ್ಕೆ ಆಹ್ವಾನಿಸಿದಾಗ ಸ್ವತಃ ನಿತ್ಯಶ್ರೀಯೇ ನಕ್ಕಿದ್ದಳು. ಈಕೆಯ ಪೋಷಕರು ‘ಅಟ್ಟವನ್ನೇ ಏರದವಳು ಹಿಮಾಲಯ ಏರುವಳೇ’ ಎಂದು ತಮಾಷೆ ಮಾಡಿದ್ದರು. ಹಿಮಾಲಯ ಏರುವುದು ನಿತ್ಯಶ್ರೀ ಮತ್ತು ಅವಳ ಅಪ್ಪ–ಅಮ್ಮನಿಗೆ ತಮಾಷೆಯಂತೆ, ಕನಸಿನಂತೆ, ಭ್ರಮೆಯಂತೆ ಅನಿಸಿತ್ತು. ಆದರೆ, ಮೈಸೂರಿನ ‘ಟೈಗರ್ ಅಡ್ವೆಂಚರ್ ಫೌಂಡೇಷನ್’ನವರು ನಿತ್ಯಶ್ರೀ ಹಿಮಾಲಯವನ್ನು ಏರಿ ತ್ರಿವರ್ಣ ಧ್ವಜ ಹಾರಿಸುವಂತೆ ಮಾಡಿಯೇ ಬಿಟ್ಟರು. ಹೌದು, ಇದು ಕೇವಲ ನಿತ್ಯಶ್ರೀ ಒಬ್ಬಳ ಕತೆಯಲ್ಲ; ಪೌರಕಾರ್ಮಿಕರು, ದಸರಾ ಆನೆಗಳ ಮಾವುತರು–ಕಾವಾಡಿಗಳು, ಅರಣ್ಯ ಗಸ್ತು ಸಿಬ್ಬಂದಿಯೂ ಈ ಸಾಹಸದಲ್ಲಿ ಜೊತೆಯಾಗಿ ರಾಷ್ಟ್ರಧ್ವಜವನ್ನು ಎತ್ತಿ ಹಿಡಿದು ತಮ್ಮ ಸಾಧನೆಗೆ ಹೆಮ್ಮೆಪಟ್ಟಿದ್ದಾರೆ.
ಇದು ಶುರುವಾಗಿದ್ದು ಹೀಗೆ–ಹಿಮಾಲಯ ಚಾರಣ ಕೇವಲ ಹಣವಿದ್ದವರಿಗೆ ಮಾತ್ರವೇ? ನಗರವನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರ ಮಕ್ಕಳನ್ನೇಕೆ ಕರೆದೊಯ್ಯಬಾರದು ಎಂಬ ಯೋಚನೆ ‘ಟೈಗರ್ ಅಡ್ವೆಂಚರ್ ಫೌಂಡೇಷನ್’ಗೆ ಬಂದಿತು. ಈ ಉದಾತ್ತ ಯೋಚನೆಯ ಸಾಹಸವನ್ನು ಸಾಧ್ಯವಾಗಿಸಲು ಹತ್ತಾರು ಮಂದಿ ಜೊತೆಯಾದರು. ಅಷ್ಟೇ ಅಲ್ಲದೇ, ಚಾರಣಕ್ಕೆ ಪೌರಕಾರ್ಮಿಕ ಮಕ್ಕಳನ್ನು ಕರೆತರುವುದು, ಅವರಿಗೆ ತರಬೇತಿ ನೀಡಿ ಅಣಿಗೊಳಿಸುವುದು ಕೂಡ ಸಂಸ್ಥೆಗೆ ಸವಾಲೇ ಆಗಿತ್ತು. ಎಂಟು ಮಂದಿ ಪೌರಕಾರ್ಮಿಕರ ಮಕ್ಕಳೊಂದಿಗೆ ಕಳೆದ ದಸರಾದಲ್ಲಿ ಪಾಲ್ಗೊಂಡಿದ್ದ ಮಾವುತ–ಕಾವಾಡಿಗಳಾದ ಜಯಬಾಲ, ನವೀನ್ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಗಸ್ತು ವೀಕ್ಷಕರಾದ ಕೆ.ಡಿ.ಮಧು ಮತ್ತು ಅನಂತ ಕುಮಾರ್ ಅವರನ್ನೂ ಪ್ರತಿಷ್ಠಾನವು ಚಾರಣ ತಂಡದೊಂದಿಗೆ ಸೇರಿಸಿಕೊಂಡಿತು.
2019ರಲ್ಲಿ ಆದಿವಾಸಿ ಮಕ್ಕಳಿಗೆ ಹಿಮಾಲಯ ಚಾರಣ ಮಾಡಿಸಿದ್ದ ‘ಟೈಗರ್ ಅಡ್ವೆಂಚರ್ ಫೌಂಡೇಷನ್’ನ ಅಧ್ಯಕ್ಷ ಟೈಗರ್ ಡಿಎಸ್‌ಡಿ ಸೋಲಂಕಿ ಅವರಿಗೆ ಕೋವಿಡ್ ಸಂದರ್ಭದಲ್ಲಿ ಸೋಂಕಿನ ಭೀತಿಯ ನಡುವೆ ಜೀವ ಒತ್ತೆಯಿಟ್ಟು ದುಡಿದ ಪೌರಕಾರ್ಮಿಕರ ಮಕ್ಕಳಿಗೂ ಹಿಮಾಲಯ ತೋರಿಸಬೇಕೆಂಬ ಕನಸಿತ್ತು. ಈ ವಿಷಯವನ್ನು ತಮ್ಮ ಮನೆಗೆ ಕಸ ಸಂಗ್ರಹಿಸಲು ಬಂದ ಪೌರಕಾರ್ಮಿಕರಿಗೆ ಹೇಳಿದರು. ಅವರು ಆಸಕ್ತಿ ತೋರಿಸಲಿಲ್ಲ. ಹೀಗಾಗಿ, ಈ ಯೋಚನೆಯನ್ನು ಹಾಗೆಯೇ ಬಿಟ್ಟುಬಿಟ್ಟಿದ್ದರು.
2024ರ ಜುಲೈನಲ್ಲಿ ಮುಂದಿನ ಬೇಸಿಗೆಯಲ್ಲಾದರೂ ಪೌರಕಾರ್ಮಿಕ ಮಕ್ಕಳೊಂದಿಗೆ ಹಿಮಾಲಯ ಚಾರಣಕ್ಕೆ ಹೋಗಲೇಬೇಕು ಎಂಬ ಸಂಕಲ್ಪವನ್ನು ಮಾಡಿದರು. ಈ ಕುರಿತು ಗೆಳೆಯರಾದ ದಿಯಾ ಫೌಂಡೇಶನ್‌ನ ಟ್ರಸ್ಟಿ ನಮ್ರತಾ ಶೆಣೈ, ಫೋಟೊಗ್ರಾಫರ್ ಮಂಜು ಹಾಗೂ ಉಪನ್ಯಾಸಕ ಅನಿಲ್ ಕುಮಾರ್ ಅವರೊಂದಿಗೆ ಚರ್ಚಿಸಿದರು. ಪ್ರತಿದಿನ ಪೌರಕಾರ್ಮಿಕರ ಕಾಲೋನಿಗಳಿಗೆ ಇವರೆಲ್ಲರೂ ಅಲೆದು ‘ನಿಮ್ಮ ಮಕ್ಕಳನ್ನು ಚಾರಣಕ್ಕೆ ಕಳುಹಿಸಿಕೊಡಿ. ನಮ್ಮದೇ ಖರ್ಚಿನಲ್ಲಿ ಕರೆದುಕೊಂಡು ಹೋಗುತ್ತೇವೆ. ಸುರಕ್ಷಿತವಾಗಿ ನಿಮಗೆ ತಂದೊಪ್ಪಿಸುತ್ತೇವೆ’ ಎಂದು ಪರಿಪರಿಯಾಗಿ ಕೇಳಿಕೊಂಡರೂ ಯಾರೂ ಒಪ್ಪಲಿಲ್ಲ. ‘ಇವರ‍್ಯಾರೋ ಮಕ್ಕಳ ಕಳ್ಳರಿರಬೇಕು’ ಎಂದು ಪೌರಕಾರ್ಮಿಕರು ಅನುಮಾನಿಸಿದರು. ಅವರೇ ದುಡ್ಡು ಖರ್ಚು ಮಾಡಿ, ಹಿಮಾಲಯ ತೋರಿಸುತ್ತಾರೆ ಎಂದರೆ ಬೇರೇನೋ ಇರಬೇಕು ಎಂದು ಯಾರೊಬ್ಬರು ಇವರ ಮಾತಿಗೆ ಕಿವಿಗೊಡುತ್ತಿರಲಿಲ್ಲ.
ಏಕಲವ್ಯ ನಗರ, ಬನ್ನಿ ಮಂಟಪ, ಗೋಕುಲಂ, ಸಿಲ್ಕ್ ಫ್ಯಾಕ್ಟರಿ ಬಳಿಯ ಕಾಲೋನಿಗಳಿಗೆ ಹೋದಾಗೆಲ್ಲ ಇವರನ್ನು ನೋಡುತ್ತಲೇ ಪೌರಕಾರ್ಮಿಕರು ಜಾಗ ಖಾಲಿ ಮಾಡುತ್ತಿದ್ದರು! ಹೀಗಾಗಿ ಇವರು ನಿರಾಶೆಗೊಂಡರು. ದಸರಾ ಆನೆಗಳ ಮಾವುತರನ್ನಾದರೂ ಕರೆದೊಯ್ಯೋಣವೆಂದು ಪ್ರಯತ್ನಿಸಿದರು. ಅದೂ ಸಾಧ್ಯವಾಗಲಿಲ್ಲ. 13 ರಿಂದ 20 ವರ್ಷದೊಳಗಿನ ಕನಿಷ್ಠ ಹನ್ನೆರಡು ಮಂದಿಯಾದರೂ ತಂಡಕ್ಕೆ ಬೇಕಿತ್ತು. ಅಷ್ಟು ಮಂದಿ ಸಿಗಲಿಲ್ಲ.
ಪ್ರತಿದಿನ ಬೆಳಿಗ್ಗೆ ಪೌರಕಾರ್ಮಿಕರು ಸ್ವಚ್ಛತಾ ಕೆಲಸಕ್ಕೆ ಹೋಗುವ ಮುನ್ನ ಸೇರುವ ಪ್ರತಿ ವಾರ್ಡ್‌ನ ಜಾಗಗಳಿಗೆ ಅಲೆಯುವುದೇ ಸೋಲಂಕಿ ಮತ್ತವರ ಸಂಗಡಿಗರ ಕೆಲಸವಾಯಿತು. ಹೆಬ್ಬಾಳ ವಾರ್ಡ್‌ನ ಪಾಲಿಕೆಯ ಮಾಜಿ ಸದಸ್ಯೆ ಪ್ರೇಮಾ ಶಂಕರೇಗೌಡ ಅವರಲ್ಲಿ, ‘ಹೀಗೊಂದು ಆಲೋಚನೆಯಿದ್ದು, ಪೌರಕಾರ್ಮಿಕರೊಂದಿಗೆ ಮಾತನಾಡಬಹುದೇ’ ಎಂದು ವಿನಂತಿಸಿಕೊಂಡರು. ಅಲ್ಲಿದ್ದ ಮೂವತ್ತು ಪೌರಕಾರ್ಮಿಕರನ್ನೂ ಅವರು ಒಪ್ಪಿಸಿದರು. ಮಕ್ಕಳ ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಕೊಡುವಂತೆ ಕೇಳಿದಾಗ ಅಲ್ಲಿದ್ದವರಲ್ಲಿ ಹನ್ನೆರಡು ಮಂದಿ ಮಾತ್ರ ದಾಖಲೆ ತಂದುಕೊಟ್ಟರು. ಅವರಲ್ಲಿ ‘ಫಿಟ್‌ನೆಸ್’ ಪರೀಕ್ಷೆಯಲ್ಲಿ ಆಯ್ಕೆ ಆದವರು ಎಂಟು ಮಂದಿ ಮಾತ್ರ.
ಪೌರಕಾರ್ಮಿಕರ ಮಕ್ಕಳ ಜೊತೆ ಮಾವುತರನ್ನು ಕರೆದೊಯ್ಯಲು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರನ್ನು ಪ್ರತಿಷ್ಠಾನವು ಸಂಪರ್ಕಿಸಿತು. ಅವರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಸೀಮಾ ಅವರೊಂದಿಗೆ ಮಾತನಾಡಿ, ಅರಣ್ಯ ಇಲಾಖೆಯ ಗಸ್ತು ವೀಕ್ಷಕರು ಹಾಗೂ ಇಬ್ಬರು ಮಾವುತರನ್ನು ಚಾರಣಕ್ಕೆ ಕಳುಹಿಸಲು ಅನುಮತಿ ಕೊಡಿಸಿದರು. ಇವರೊಂದಿಗೆ ಆಲನಹಳ್ಳಿಯ ಶಾಶ್ವತ ಸೇವಾ ಶಾಲೆಯ ವಿದ್ಯಾರ್ಥಿಗಳಾದ ಅಂಜನಾ, ಮಿಂಚು ಅವರೂ ಸೇರಿ ಹದಿನಾಲ್ಕು ಮಂದಿಯ ತಂಡ ಅಣಿಗೊಂಡಿತು.
ಮರಿಮಲ್ಲಪ್ಪ ಪಿಯುಸಿ ಕಾಲೇಜಿನ ಉಪನ್ಯಾಸಕರೂ, ಚಾರಣಿಗರೂ ಆದ ಅನಿಲ್ ಕುಮಾರ್, ಸಂತೋಷ್, ನಂಜುಂಡಸ್ವಾಮಿ, ಹರ್ಷವರ್ಧನ್ ಸೇರಿದಂತೆ ಒಂಬತ್ತು ಜನರ ತಂಡ ಮಕ್ಕಳಿಗೆ ನಿತ್ಯ ತರಬೇತಿ ನೀಡಲು ಆರಂಭಿಸಿತು. ಕುಕ್ಕರಹಳ್ಳಿ ಕೆರೆಯಲ್ಲಿ ನಡಿಗೆ ಅಭ್ಯಾಸದ ಜೊತೆಗೆ ವಾರದ ಕೊನೆಯಲ್ಲಿ ಚಾಮುಂಡಿ ಬೆಟ್ಟ, ಕಬಿನಿ ಹಿನ್ನೀರು, ಕುಂತಿಬೆಟ್ಟ, ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಕರೆದೊಯ್ದು ಸಜ್ಜುಗೊಳಿಸಿದರು. ಏಪ್ರಿಲ್ 5 ರಿಂದ ನಡೆದ ತಯಾರಿಯು 20 ರಂದು 10 ಕಿಲೋಮೀಟರ್ ‘ಜೋಶ್ ರನ್’ನೊಂದಿಗೆ ಪೂರ್ಣಗೊಂಡಿತು.
‘ಏಪ್ರಿಲ್ 23ರಂದು ಬೆಂಗಳೂರಿನಿಂದ ಉತ್ತರಾಖಂಡದ ‘ಕೌರಿ ಟಾಪ್’ ಶಿಖರಕ್ಕೆ 24 ಜನರ ತಂಡ ಹೊರಟಿತು. ಆದರೆ, ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರಿಂದ ದೇಶದಲ್ಲಿ ಉಂಟಾಗಿದ್ದ ಭೀತಿ ತಂಡಕ್ಕೂ ತಟ್ಟಿತು. 24 ರಂದು ದೆಹಲಿ ತಲುಪಿ ಆಗ್ರಾದ ತಾಜ್‌ಮಹಲ್ ಸೇರಿದಂತೆ ಅಲ್ಲಿನ ಪ್ರೇಕ್ಷಣೀಯ ಸ್ಥಳ ತೋರಿಸಲಾಯಿತು. ನಂತರ ನವದೆಹಲಿಯ ಹೊಸ ಸಂಸತ್ ಭವನ, ರಾಷ್ಟ್ರಪತಿ ಭವನದಲ್ಲಿ ನಡೆಯುವ ‘ಚೇಂಜ್ ಆಫ್ ಗಾರ್ಡ್ಸ್’ ಅನ್ನು ನೋಡಿ, ಉತ್ತರಾಖಂಡದ ಹೃಷಿಕೇಶವನ್ನು ಬಸ್ ಮೂಲಕ ತಲುಪಿದೆವು’ ಎಂದು ಟೈಗರ್ ಸೋಲಂಕಿ ಹೇಳಿದರು.
ಏಪ್ರಿಲ್ 27 ರಂದು ಪೀಪಲ್‌ಕೋಟಿಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾದರು. ಕಳೆದ ವರ್ಷ ಶಾಸ್ತ್ರಕಾಲ್‌ನಲ್ಲಿ ಚಾರಣ ಮಾಡುವಾಗ ಬೆಂಗಳೂರಿನ ಒಂಬತ್ತು ಮಂದಿ ಮೃತಪಟ್ಟಿದ್ದ ಕಾರಣಕ್ಕೆ ವೈದ್ಯಕೀಯ ತಪಾಸಣೆ ಚಾರಣಕ್ಕೂ ಮೊದಲು ಕಡ್ಡಾಯವಾಗಿತ್ತು. ಪರೀಕ್ಷೆ ನಂತರ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದಲ್ಲಿರುವ ತುಗಾಸಿ ಬೇಸ್‌ಕ್ಯಾಂಪ್ ಅನ್ನು ತಲುಪಿದರು. ಅಲ್ಲಿಂದ ಚಾರಣ ಆರಂಭವಾಯಿತು. ಹಿಮಾಲಯದ ಹಸಿರು ಕಣಿವೆಯ ಸೌಂದರ್ಯ ಸವಿಯುತ್ತಾ, ಗುಲಿಂಗ್ ಕ್ಯಾಂಪ್ ತಲುಪಿದರು. ಅಲ್ಲಿಂದ 11,014 ಅಡಿ ಎತ್ತರದ ಖುಲ್ಹಾರ್ ಕ್ಯಾಂಪ್‌ನತ್ತ ಹೊರಟರು. ರಾತ್ರಿ ಅಲ್ಲಿಯೇ ಉಳಿದುಕೊಂಡರು. ಮೇ 1 ರಂದು ಆಮ್ಲಜನಕದ ಸಿಲಿಂಡರ್ ಹೊತ್ತು 25 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದ್ದ ಹಿಮಗಾಳಿ ಭೇದಿಸುತ್ತಾ ಮುಂಜಾನೆಯಿಂದಲೇ ಖುಲ್ಹಾರದಿಂದ 13,989 ಅಡಿ ಎತ್ತರದ ‘ಕೌರಿ ಟಾಪ್’ ಶಿಖರಕ್ಕೆ ನಡೆಯುತ್ತಾ ಸಾಗಿದರು. ಮಧ್ಯಾಹ್ನ 12.30ಕ್ಕೆ ಶಿಖರದ ತುದಿ ತಲುಪಿದಾಗ ಆದ ಸಂತಸ ಅಷ್ಟಿಷ್ಟಲ್ಲ. ಎಲ್ಲ ಮಕ್ಕಳು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು. ಕಾರ್ಮಿಕ ದಿನವನ್ನೂ ಆಚರಿಸಿದರು!
‘ಶಿಖರದಲ್ಲಿ ನಿಂತು ತ್ರಿಶೂಲ, ಹರ್ಡಿಯೊಲ್, ದೌನಗಿರಿ, ಚಂಗಬಂಗ್, ಹನುಮಾನ್, ಋಷಿಕೋಟ್, ನಂದಾದೇವಿ, ರೌಂತಿ, ಬೆತರ್‌ತೋಲಿ ಹಿಮಲ್, ಗೌರಿ ಪರ್ವತ, ಹಾತಿ ಪರ್ವತ ಸೇರಿದಂತೆ ವಿವಿಧ ಶಿಖರಗಳನ್ನು ಏರುತ್ತಿದ್ದ ಪರ್ವತಾರೋಹಿಗಳನ್ನು ನೋಡಿದ ಮಕ್ಕಳು ಖುಷಿಯಿಂದ ಕುಣಿದರು. ಅದೊಂದು ಸಾರ್ಥಕ ಅನುಭವವಾಗಿತ್ತು. ಕಣ್ಣುಗಳು ತುಂಬಿಬಂದವು. ಸಂಜೆ ವೇಳೆಗೆ ಬೇಸ್ ಕ್ಯಾಂಪ್‌ಗೆ ವಾಪಸ್ ಆದೆವು’ ಎಂದು ಸೋಲಂಕಿ ವಿವರಿಸಿದರು.
ಕೇವಲ ಇಪ್ಪತ್ತು ದಿನಗಳ ಕಠಿಣ ತರಬೇತಿಯ ಬಲದೊಂದಿಗೆ ಈ ಮಕ್ಕಳು ಹಿಮಾಲಯ ಏರಿ ಸಾಹಸ ಮೆರೆದರು. ಹತ್ತಾರು ವರ್ಷ ಚಾರಣ ಮಾಡಿದವರು ಈ ಮಕ್ಕಳ ದೈಹಿಕ ಮತ್ತು ಮನೋಬಲಕ್ಕೆ ಹುಬ್ಬೇರಿಸಿದರು.
ಪೌರಕಾರ್ಮಿಕರ ಮಕ್ಕಳಾದ ಪ್ರೀತಂ, ಚೇತನ್ ಬಾಬು, ಕುಮಾರ್, ಪ್ರೇಮ್, ಅಶ್ವಿನ್, ನಿತ್ಯಶ್ರೀ, ಪಲ್ಲವಿ, ಎಸ್.ಪುನೀತ್ ಅವರ ಹೃದಯದಲ್ಲಿ ‘ಹಿಮಾಲಯ’ ಎಂಬುದು ಈಗ ಅತ್ಯಾಪ್ತ. ಅವರ ಕಾಲಿನ ಮೀನಖಂಡಗಳು ಯಾವುದೇ ಚಾರಣ ಮಾಡುವಷ್ಟು ಕಸುವು ಪಡೆದಿವೆ. ಯಾತ್ರೆಯಲ್ಲಿ ಸಿಕ್ಕ ಅಗಾಧ ಅನುಭವಗಳೊಂದಿಗೆ ಮರಳಿ ಬಂದಿರುವ ಅವರನ್ನು ನೋಡಿದ ಪೋಷಕರು, ಗೆಳೆಯರು, ‘ಚಾಮುಂಡಿ ಬೆಟ್ಟ ಹತ್ತಲೂ ಕಷ್ಟಪಡುತ್ತಿದ್ದವರು ಹಿಮಾಲಯದ ತುದಿ ಏರಿ ಬಂದರಲ್ಲ’ ಎಂದು ಹೆಮ್ಮೆ ಪಡುತ್ತಿದ್ದಾರೆ.
ಪೌರಕಾರ್ಮಿಕ ದಂಪತಿ ಜಯರಾಮು– ನಾಗವೇಣಿ, ‘ನಾವ್ ಕಾಸ್ಮೀರ, ಹಿಮಾಲಯವನ್ನು ಟೀವೀಲಿ ನೋಡಿವಿ ಅಸ್ಟೆ. ನಮ್ಮಂತೋರು ಅಲ್ಲಿಗೆ ಹೋಗಕ್ಕೆ ಆಗದ್ದಾ? ಮಗ್ಳು ನಿತ್ಯಾ ಅದ್ನೆಲ್ಲ ಕಣ್ಣಾರೆ ನೋಡ್ಕಂಡು ಬಂದವ್ಳೆ. ಅವ್ಳು ನೋಡವ್ಳೆ ಅಂದ್ರೆ ನಾವೂ ನೋಡ್ದಂಗೆ’ ಎಂದು ಹೆಮ್ಮೆಪಟ್ಟರು.
‘ಚಾರಣಕ್ಕೆ ತರಬೇತಿ ಆರಂಭ ಆದಾಗ ಕುಕ್ಕರಹಳ್ಳಿ ಕೆರೆಯಲ್ಲಿ ಒಂದೇ ಸಮನೆ ಓಡಿ ವಾಂತಿ ಮಾಡಿಕೊಂಡಿದ್ದೆ. ಹಿಮಾಲಯ ಏರಲು ಸಾಧ್ಯವಿಲ್ಲ ಅಂದುಕೊಂಡಿದ್ದೆ. ಈಗ ಹಿಮವನ್ನು ನೋಡಿ ಬಂದ ಖುಷಿಯಿದೆ’ ಎನ್ನುತ್ತಾಳೆ ನಿತ್ಯಶ್ರೀ.
ಕನಸಿನಲ್ಲೂ ಊಹಿಲಾಗದ ಇಂಥ ನೂರಾರು ನೆನಪು, ಅನುಭವಗಳನ್ನು ಮೈಸೂರಿನ ‘ಟೈಗರ್ ಅಡ್ವೆಂಚರ್ ಫೌಂಡೇಷನ್’ ಪೌರಕಾರ್ಮಿಕರ ಮಕ್ಕಳು, ಮಾವುತರು–ಕಾವಾಡಿಗಳು, ಗಸ್ತು ಸಿಬ್ಬಂದಿಗೆ ಕಟ್ಟಿಕೊಟ್ಟಿದೆ. ಇವರು ಯಾವುದನ್ನು ಕನಸು ಅಂದುಕೊಂಡಿದ್ದರೋ ಅದು ನನಸಾಗಿದೆ. ಭ್ರಮೆ ಅಂದುಕೊಂಡಿದ್ದು ವಾಸ್ತವವಾಗಿದೆ. ಇಂಥದ್ದೇ ಅನುಭವ ತಬ್ಬಲಿ ಸಮುದಾಯದ ಮಕ್ಕಳಿಗೂ ಸಿಗುವಂತಾಗಲಿ.
ಎಲ್ಲವೂ ಮೊದಲು..
ಪೌರಕಾರ್ಮಿಕರ ಮಕ್ಕಳಿಗೆ ಇಡೀ ಯಾತ್ರೆಯೇ ಹಲವು ‘ಮೊದಲ’ ಮಧುರ ನೆನಪುಗಳನ್ನು ಉಳಿಸಿದೆ. ಇವರಲ್ಲಿ ಯಾರೊಬ್ಬರು ವಿಮಾನ ಪ್ರಯಾಣ ಮಾಡಿರಲಿಲ್ಲ. ಬೆಟ್ಟ, ಕಾಡು–ಮೇಡು ಅಲೆದಿದ್ದ ಮಾವುತ, ಕಾವಾಡಿಗರಿಗೂ ಮೋಡಗಳ ನಡುವಿನ ಪ್ರಯಾಣ ಮರೆಯಲಾಗದ ಖುಷಿ ಉಳಿಸಿದೆ.
‘ಎರಡು ವರ್ಷದ ಹಿಂದೆ ದಸರಾ ಏರ್‌ಶೋನಲ್ಲಿ ವಿಮಾನ ನೋಡಲು ಪಂಜಿನ ಕವಾಯತು ಮೈದಾನಕ್ಕೆ ಹೋಗಿದ್ದೆ. ಚಿಕ್ಕಂದಿನಿಂದಲೂ ವಿಮಾನವನ್ನು ಆಕಾಶದಲ್ಲಿ ನೋಡುತ್ತಿದ್ದೆಯಷ್ಟೇ. ವಿಮಾನದಲ್ಲಿ ಹೋಗಿದ್ದು ಖುಷಿ ಆಯಿತು’ ಎನ್ನುತ್ತಾರೆ ಹೆಬ್ಬಾಳದ ಪೌರಕಾರ್ಮಿಕ ದಂಪತಿ ಶಿವರಾಮು–ಜಯಾ
ಅವರ ಪುತ್ರ ಪುನೀತ್.
ಮತ್ತಿಗೋಡು ಆನೆ ಶಿಬಿರದಲ್ಲಿ ಮಾವುತ, ಕಾವಾಡಿಯಾಗಿರುವ ಜಯಬಾಲು ಮತ್ತು ನವೀನ್ ಅವರು ‘ವಿಮಾನ ಪ್ರಯಾಣವನ್ನು ನೆನೆದರೆ ಮೈ ಜುಮ್ಮೆನುತ್ತದೆ’ ಎಂದು ಈಗಲೂ ಹೇಳುತ್ತಾರೆ. ‘ದೆಹಲಿ, ಅಮೃತಸರ, ಆಗ್ರಾ ನೋಡಿದ್ದನ್ನು ನಮಗೆ ನಂಬಲು ಆಗುತ್ತಿರಲಿಲ್ಲ’ ಎಂದರು.
‘ಆನೆಗಳ ಜೊತೆ ಕಾಡು–ಮೇಡು, ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಮೈಲಿಗಟ್ಟಲೆ ನಡೆದಿದ್ದೇವೆ. ಆದರೆ, ವಿಮಾನ ಪ್ರಯಾಣ ಮಾಡಿರಲಿಲ್ಲ. ಮೇಲಿಂದ ಭೂಮಿ ಕಂಡಾಗ ಆದ ಖುಷಿ ಅಷ್ಟಿಷ್ಟಲ್ಲ. ಹಿಮಾಲಯ ಏರುವುದು ನಮಗೆ ಅಷ್ಟು ಕಷ್ಟ ಅನಿಸಲಿಲ್ಲ. ಎಲ್ಲರೂ ಜೊತೆಗಿದ್ದರಲ್ಲ ಅದಕ್ಕೆ ಭಯವಾಗಲಿಲ್ಲ. ಈಗ ನಮ್ಮ ಆನೆ ಕ್ಯಾಂಪಲ್ಲಿ ನಮ್ಮನ್ನು, ‘ಡೆಲ್ಲಿ– ಕಾಶ್ಮೀರಕ್ಕೆ ಹೋಗಿ ಬಂದವ್ರು’ ಅಂತ ಕರೀತಾರೆ. ಅದಕ್ಕಿಂತ ಇನ್ನೇನು ಬೇಕು’ ಎಂದು ‘ಶ್ರೀರಂಗ’ ಆನೆಯ ಕಾವಾಡಿ ಜಯಬಾಲು ಸಂತಸ ಹಂಚಿಕೊಂಡರು.
ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ‘ಗೋಪಿ’ ಆನೆಯ ಕಾವಾಡಿ ನವೀನ್ ತಮ್ಮಣ್ಣ ಅವರೂ ಇದೇ ಅನುಭವ ಹೇಳಿಕೊಂಡರು.
ಚಾರಣದ ಜೊತೆಗೆ ಪ್ರವಾಸ ಸುಖ
‘ಮೇ 3 ರಂದು ಬದ್ರಿನಾಥ ದರ್ಶನ ಮಾಡಿ, 4 ರಂದು ಹೃಷಿಕೇಶಕ್ಕೆ ವಾಪಸ್ ಬಂದೆವು. 5ರಂದು ಅಮೃತಸರಕ್ಕೆ ಹೋದೆವು. ಗೋಲ್ಡನ್ ಟೆಂಪಲ್, ಜಲಿಯನ್ ವಾಲಾಬಾಗ್ ತೋರಿಸಿದೆವು. ಫಿರೋಜ್‌ಪುರ್‌ನ ಪಾಕ್ ಗಡಿಯನ್ನು ನೋಡುವುದಿತ್ತು. ‘ಆಪರೇಷನ್ ಸಿಂದೂರ’ ಸೇನಾ ಕಾರ್ಯಾಚರಣೆ ಆರಂಭವಾಗುವ ಸನ್ನಿವೇಶವಿದ್ದರಿಂದ ಗಡಿ ಮುಚ್ಚಲಾಗಿತ್ತು. ಹೀಗಾಗಿ ವಾಪಸಾಗುವ ಯೋಚನೆ ಮಾಡಿದೆವು. ಯುದ್ಧ ಭೀತಿ ಕಾರಣ ಬೆಂಗಳೂರಿಗಿದ್ದ ನೇರ ವಿಮಾನ ರದ್ದಾಗಿತ್ತು. ಬಸ್‌ನಲ್ಲಿ ದೆಹಲಿ ತಲುಪಿದೆವು. ಹೆಚ್ಚುವರಿ ಖರ್ಚು ಬಿತ್ತು. ಆದರೆ, ಮಕ್ಕಳ ಸುರಕ್ಷತೆಯಷ್ಟೇ ನಮಗೆ ಮುಖ್ಯವಾಗಿತ್ತು’ ಎಂದರು ಸೋಲಂಕಿ.
‘ಇಂಥ ಸವಾಲಿನ ಯಾತ್ರೆಯ ಅನುಭವ ಹಿಂದೆಂದೂ ಆಗಿರಲಿಲ್ಲ. ಚಾರಣಕ್ಕೆ ₹ 11.55 ಲಕ್ಷ ಖರ್ಚಾಯಿತು. ಲೇಡಿಸ್ ಸರ್ಕಲ್ ಇಂಡಿಯಾ, ದಿಯಾ ಫೌಂಡೇಶನ್ ನೆರವಾದವು. ಅಲ್ಲದೇ, ಅಮೆರಿಕ, ಇಸ್ರೇಲ್ ಸೇರಿದಂತೆ ವಿವಿಧ ದೇಶಗಳಲ್ಲಿನ 165 ಪರ್ವತಾರೋಹಿ ಸ್ನೇಹಿತರೂ ಸಹಕಾರ ನೀಡಿದರು’ ಎಂದು ನೆನಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.