ADVERTISEMENT

ತಾಕತ್ತಿದ್ದರೆ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿಸು: ಪ್ರತಾಪ ಸಿಂಹಗೆ ಜಿಟಿಡಿ ಸವಾಲು

​ಪ್ರಜಾವಾಣಿ ವಾರ್ತೆ
Published 28 ಮೇ 2021, 11:32 IST
Last Updated 28 ಮೇ 2021, 11:32 IST
   

ಮೈಸೂರು: ‘ನಿನಗೆ ತಾಕತ್ತಿದ್ದರೆ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿಸು. ಹಾದಿ ಬೀದಿಯಲ್ಲಿ ನಿಂತು ಮಾತನಾಡಬೇಡ’ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ ಸಿಂಹ ಅವರಿಗೆ ಶುಕ್ರವಾರ ಇಲ್ಲಿ ಸವಾಲು ಹಾಕಿದರು.

‘ಮಾಧ್ಯಮಗಳ ಮುಂದೆ ಹೇಳಿಕೆ‌ ನೀಡಿದರೆ ಹುಲಿ ಆಗಲ್ಲ. ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಬೇಡ. ಜಿಲ್ಲೆಯ ಶಾಸಕರು ನಿಮಗಿಂತಲೂ ಹೆಚ್ಚು ಕೆಲಸ ಮಾಡ್ತಿದ್ದಾರೆ. ಸ್ವಂತ ಹಣ ವೆಚ್ಚ ಮಾಡಿದ್ದಾರೆ. ಸಂಸದರಾಗಿ ನೀನೆಷ್ಟು ಸ್ವಂತ ದುಡ್ಡು ಖರ್ಚು ಮಾಡಿದ್ದೀಯಾ’ ಎಂದು ಹರಿಹಾಯ್ದರು.

‘ಮುಖ್ಯಮಂತ್ರಿ ನೀನು ಹೇಳಿದಂತೆ ಕೇಳ್ತಾರೆ. ತಾಕತ್ತಿದ್ದರೆ ವರ್ಗಾವಣೆ ಮಾಡಿ ತೋರಿಸು. ಸುಮ್ಮನೆ ಯಾಕೆ ಗೊಂದಲ ಸೃಷ್ಟಿಸುತ್ತೀಯಾ. ನಿಮ್ಮ ಆರೋಪ, ಹೇಳಿಕೆ ಹಿಂದೆ ವೈಯಕ್ತಿಕ ಸಮಸ್ಯೆ ಇದೆ. ಇದು ಜನರಲ್ಲಿ ಅನುಮಾನ ಸೃಷ್ಟಿಸಿದೆ’ ಎಂದು ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದರು.

ADVERTISEMENT

‘ಜಿಲ್ಲಾಧಿಕಾರಿ ರಕ್ಷಣೆಗೆ ಮೊದಲು ನಿಲ್ಲುತ್ತಿದ್ದವನೇ ನೀನು. ಇದೀಗ ವಿರೋಧಿಸುತ್ತಿರೋದು ಏಕೆ?’ ಎಂದು ಶಾಸಕರು ಗರಂ ಆದರು.

ಜನ ಸಾಯುವಾಗ ಸರ್ಕಾರ ತೆಗೆಯಬೇಕಾ: ‘ಕೋವಿಡ್‌ನಿಂದ ಜನ ಸಾಯುತ್ತಿದ್ದಾರೆ. ಈ ಹೊತ್ತಲ್ಲಿ ಸರ್ಕಾರ ತೆಗೆಯಬೇಕಿದೆಯಾ’ ಎಂದು ಜಿ.ಟಿ.ದೇವೇಗೌಡ ಬಿಜೆಪಿ ಮುಖಂಡರ ವಿರುದ್ಧವೂ ಹರಿಹಾಯ್ದರು.

‘ಜನರ ಕಷ್ಟ ನೋಡುವ ಬದಲು ನವದೆಹಲಿಗೆ ಹೋಗುವ ಅಗತ್ಯ ಇತ್ತಾ?. ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೆಲಸ ಮಾಡಲು ಬಿಡಿ’ ಎಂದು ಶಾಸಕರು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.