ADVERTISEMENT

ರಾಜ್ಯದ ಭಿಕ್ಷೆಯಿಂದ ನಿರ್ಮಲಾ ಸೀತಾರಾಮನ್‌ ರಾಜ್ಯಸಭೆ ಸದಸ್ಯೆ: ಲಕ್ಷ್ಮಣ್‌ ಟೀಕೆ

ಆತ್ಮನಿರ್ಭರ್‌ ಅಲ್ಲ; ಇದು ಆತ್ಮ ಬರ್ಬಾದ್‌ ಬಜೆಟ್‌ ಎಂದ ಕೆಪಿಸಿಸಿ ವಕ್ತಾರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 11:13 IST
Last Updated 2 ಫೆಬ್ರುವರಿ 2021, 11:13 IST
ಎಂ.ಲಕ್ಷ್ಮಣ್‌
ಎಂ.ಲಕ್ಷ್ಮಣ್‌    

ಮೈಸೂರು: ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕ ರಾಜ್ಯದ ಜನರ ಭಿಕ್ಷೆಯಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಆದರೆ, ಬಜೆಟ್‌ನಲ್ಲಿ ರಾಜ್ಯವನ್ನೇನಿರ್ಲಕ್ಷಿಸಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಟೀಕಾ ಪ್ರಹಾರ ನಡೆಸಿದರು.

‘ತಮಿಳುನಾಡಿನವರಾದ ಸೀತಾರಾಮನ್‌, ತವರು ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಕಾರಣ ₹ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ಮೀಸಲಿಟ್ಟಿದ್ದಾರೆ. ಕರ್ನಾಟಕದ ಪ್ರತಿನಿಧಿಯಾಗಿದ್ದರೂ ರಾಜ್ಯಕ್ಕೆ ಕೇವಲ ₹ 14,788 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಆತ್ಮನಿರ್ಭರ್‌ ಅಲ್ಲ; ಇದು ಆತ್ಮ ಬರ್ಬಾದ್‌ (ವಿನಾಶ) ಬಜೆಟ್‌’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘2020–21ರಲ್ಲಿ ಶೇ 9.5 ಮತ್ತು 2022ರಲ್ಲಿ ಶೇ 6.8 ವಿತ್ತೀಯ ಕೊರತೆ ಇರುವುದಾಗಿ ಕೇಂದ್ರ ಸರ್ಕಾರವೇ ಹೇಳಿಕೊಂಡಿದೆ. ಈ ಕೊರತೆ ನೀಗಿಸಿಕೊಳ್ಳಲು ಮತ್ತಷ್ಟು ಸಾಲ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಬ್ಯಾಂಕ್‌ನಲ್ಲಿ ಜನರು ಇಟ್ಟಿರುವ ಠೇವಣಿಗೂ ಕೈ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ADVERTISEMENT

‘ಬಜೆಟ್‌ನಲ್ಲಿ ಖಾಸಗೀಕರಣಕ್ಕೆ ಒತ್ತು ನೀಡಲಾಗಿದೆ. ವಿಮಾ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿ, ದೇಶದ ಜನರನ್ನು ಭಿಕ್ಷುಕರನ್ನಾಗಿ ಮಾಡಲು ಪ್ರಯತ್ನ ನಡೆದಿದೆ. ಪ್ರತಿ ದಿನ ಕೂಲಿ ಮಾಡಿ ತಿನ್ನಬೇಕು, ಯಾವುದೇ ಸಂಪಾದನೆ ಮಾಡಬಾರದು ಎಂಬುದು ಬಿಜೆಪಿ ಹುನ್ನಾರ’ ಎಂದು ಆರೋಪಿಸಿದರು.

‘ಕಾರ್ಪೊರೇಟ್‌ ಹಾಗೂ ಆಟೊ ಮೊಬೈಲ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಘೋಷಣೆ ಮಾಡಲಾಗಿದೆ. ಎಷ್ಟೋ ಜನರು 20 ವರ್ಷಗಳಾದರೂ ತಮ್ಮ ವಾಹನಗಳನ್ನು ಉತ್ತಮ ಕಂಡಿಷನ್‌ನಲ್ಲಿ ಇಟ್ಟುಕೊಂಡಿರುತ್ತಾರೆ. ಹೆಚ್ಚು ಚಲಾಯಿಸಿರುವುದಿಲ್ಲ. ಗುಜರಿಗೆ ಹಾಕಿ ಮತ್ತೆ ಹೊಸ ವಾಹನ ಖರೀದಿಸಲು ಇವರಿಗೆ ಸಾಧ್ಯವೇ’ ಎಂದು ಪ್ರಶ್ನಿಸಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಮಾಧ್ಯಮ ವಿಭಾಗದ ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.