ADVERTISEMENT

ಸ್ಯಾಂಟ್ರೊ ರವಿ ಪ್ರಕರಣ; ದಾಖಲೆ ಸಮೇತ ಎಡಿಜಿಪಿಗೆ ಸಂತ್ರಸ್ತೆ ದೂರು

ಸ್ಯಾಂಟ್ರೊ ರವಿ ಶೀಘ್ರ ಬಂಧನ ಭರವಸೆ; ಸಮಗ್ರ ದಾಖಲೆಗಳ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 18:39 IST
Last Updated 10 ಜನವರಿ 2023, 18:39 IST
ಮೈಸೂರು ಪೊಲೀಸ್‌ ಆಯುಕ್ತರ ಕಚೇರಿಗೆ ಮಂಗಳವಾರ ತೆರಳಿದ ಸಂತ್ರಸ್ತೆಯರು ಹೇಳಿಕೆ ದಾಖಲಿಸಿದರು  – ಪ್ರಜಾವಾಣಿ ಚಿತ್ರ
ಮೈಸೂರು ಪೊಲೀಸ್‌ ಆಯುಕ್ತರ ಕಚೇರಿಗೆ ಮಂಗಳವಾರ ತೆರಳಿದ ಸಂತ್ರಸ್ತೆಯರು ಹೇಳಿಕೆ ದಾಖಲಿಸಿದರು – ಪ್ರಜಾವಾಣಿ ಚಿತ್ರ   

ಮೈಸೂರು: ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ ಪ್ರಕರಣದ ಹೆಚ್ಚಿನ ವಿಚಾರಣೆ ಸಂಬಂಧ, ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರು ಮಂಗಳವಾರ ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಒಡನಾಡಿ ಸಂಸ್ಥೆಯ ಕಾರ್ಯದರ್ಶಿಗಳಾದ ಸ್ಟ್ಯಾನ್ಲಿ ಮತ್ತು ಎಂ.ಎಲ್‌.ಪರಶುರಾಮ್‌, ಸಂತ್ರಸ್ತ ಮಹಿಳೆ ಹಾಗೂ ಕುಟುಂಬದ ಸದಸ್ಯರಿಂದ ದಾಖಲೆಗಳ ಸಮೇತ ಮಾಹಿತಿ ಪಡೆದುಕೊಂಡರು.

ಎರಡೂವರೆ ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಅವರಿಗೆ, ಸ್ಯಾಂಟ್ರೊ ರವಿ ವಿರುದ್ಧ 1986ರಿಂದ 2023ರ ಜ.2ರವರೆಗೆ ದಾಖಲಾದ ಪ್ರಕರಣಗಳ ಮಾಹಿತಿ, ಹಣಕಾಸು ಸಂಸ್ಥೆಗಳ ಮಾಹಿತಿ, ಆಸ್ತಿ ದಾಖಲೆ, ಪ್ರಭಾವಿಗಳೊಂದಿಗೆ ಆತನ ಭಾವಚಿತ್ರಗಳು, ಪೊಲೀಸರ ವರ್ಗಾವಣೆಯಲ್ಲಿ ಆತನ ಪಾತ್ರದ ಕುರಿತಂತೆ 140 ಪುಟಗಳ ದಾಖಲೆಗಳನ್ನು ಸ್ಟ್ಯಾನ್ಲಿ, ಪರಶುರಾಮ್‌ ಸಲ್ಲಿಸಿದರು.

‘ರವಿ ವಿರುದ್ಧ ದಾಖಲಾಗಿರುವ ಪ್ರಕರಣ, ಹಣಕಾಸು ವ್ಯವಹಾರ, ಅತ್ಯಾಚಾರ ಪ್ರಕರಣಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಅವರಿಗೆ ಅಲೋಕ್‌ ಕುಮಾರ್‌ ಸಭೆಯಲ್ಲಿಯೇ ಸೂಚನೆ ನೀಡಿದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌, ಡಿಸಿಪಿಗಳಾದ ಗೀತಾ, ಮುತ್ತುರಾಜ್‌, ವಿಜಯನಗರ ಎಸಿಪಿ ಶಿವಶಂಕರ್‌, ವಿಜಯನಗರ ಠಾಣೆ ಇನ್‌ಸ್ಪೆಕ್ಟರ್‌ ರವಿಶಂಕರ್‌ ಇದ್ದರು.

‘ಏಕೆ ಬಂಧಿಸಿಲ್ಲ’
ಮೈಸೂರು:
‘ಆರೋಪಿಯನ್ನು ಇದುವರೆಗೂ ಏಕೆ ಬಂಧಿಸಿಲ್ಲ? ನನಗೆ ದೊಡ್ಡಮಟ್ಟದ ಅನ್ಯಾಯವಾಗಿದೆ’ ಎಂದು ಸಂತ್ರಸ್ತೆ ಎಡಿಜಿಪಿ ಮುಂದೆ ಅಳಲು ತೋಡಿಕೊಂಡರು.

ಸಂಚು ರೂಪಿಸಿ, ಸುಳ್ಳುಪಾತ್ರ ಹಾಗೂ ಸಾಕ್ಷ್ಯಗಳನ್ನು ಸೃಷ್ಟಿಸಿ ಸಂತ್ರಸ್ತೆ, ಆಕೆಯ ಸಹೋದರಿಯನ್ನು ಬಂಧಿಸಿದ್ದಕ್ಕೆ ಪ್ರತಿಯಾಗಿ ಆರೋಪಿಯು ಪೊಲೀಸ್‌ ಅಧಿಕಾರಿಗಳಿಗೆ ‘ಗೂಗಲ್‌ ಪೇ’ ಮೂಲಕ ಹಣ ಪಾವತಿಸಿದರೆನ್ನಲಾದ ದಾಖಲೆಗಳನ್ನು ಸಲ್ಲಿಸಿದರು.

‘ಲುಕ್‌ ಔಟ್‌ ನೋಟಿಸ್‌ ಜಾರಿ’
ಮೈಸೂರು:
‘ಸ್ಯಾಂಟ್ರೊ ರವಿ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ 8 ದಿನಗಳಾಗಿವೆ. ಆರೋಪಿ ಪತ್ತೆಗಾಗಿ 4 ತಂಡಗಳನ್ನು ರಚಿಸಲಾಗಿದೆ. ಆತ ಹೊರದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿರುವುದರಿಂದ ಲುಕ್‌ ಔಟ್‌ ನೋಟಿಸ್‌ ಕೂಡ ನೀಡಲಾಗಿದೆ’ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

‘ಮಂಡ್ಯ, ರಾಮನಗರ, ಮೈಸೂರು, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲಿ ಶೋಧ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲೂ ಶೋಧ ನಡೆಸಲಾಗಿದೆ. ಬ್ಯಾಂಕ್‌ ಖಾತೆ, ಲಾಕರ್‌ ಮಾಹಿತಿ ಸಂಗ್ರಹಿಸಿದ್ದು, ಖಾತೆ ಮುಟ್ಟುಗೋಲಿಗೆ ಕ್ರಮ ವಹಿಸಲಾಗುವುದು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲೂ ವಿಚಾರಣೆ ನಡೆಸಲಾಗುವುದು’ ಎಂದರು.

*
ಸ್ಯಾಂಟ್ರೊ ರವಿಯ ಒಡನಾಟದಿಂದ ಕಳಂಕಿತರಾದ ಪೊಲೀಸ್‌ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸಬೇಕು.
-ಸ್ಟ್ಯಾನ್ಲಿ, ಎಂ.ಎಲ್‌.ಪರಶುರಾಮ್, ‘ಒಡನಾಡಿ’ ನಿರ್ದೇಶಕರು

*
ವಕೀಲರ ಸಂಪರ್ಕಕ್ಕೆ ಸಿಗುವ ಆರೋಪಿಯು ಪೊಲೀಸರ ಕೈಗೆ ಸಿಗುತ್ತಿಲ್ಲ. ಎಲ್ಲಿಯೇ ಇದ್ದರೂ ಆತನನ್ನು ಬಂಧಿಸಿ ಜೈಲಿಗಟ್ಟಬೇಕು
-ಸಂತ್ರಸ್ತೆ

*
ಸ್ಯಾಂಟ್ರೊ ರವಿ ವಿಧಾನಸೌಧ ಹಾಗೂ ಕುಮಾರಕೃಪಾಕ್ಕೆ ಅನೇಕ ವರ್ಷಗಳಿಂದ ಬಂದು ಹೋಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಸಚಿವರ ಸಂಪರ್ಕ ಅವರಿಗೆ ಇತ್ತು. ಎಲ್ಲ ರೀತಿಯಿಂದಲೂ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರನ್ನು ಸರ್ಕಾರ ರಕ್ಷಿಸುವುದಿಲ್ಲ. -ಬಿ.ಸಿ.ನಾಗೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.