
ಮೈಸೂರು: ‘ವಿಶ್ವಕರ್ಮ ಸಮುದಾಯದಲ್ಲಿ ಬುಡಕಟ್ಟು ಗುಣಲಕ್ಷಣ ಕಂಡುಬಂದಿಲ್ಲ. ಆದರೆ ಸಮುದಾಯದ ಉಪ ಜಾತಿಗಳ ಪುನರ್ ವರ್ಗೀಕರಣ ಮಾಡಬೇಕು. ವಿಶ್ವಕರ್ಮ ವೃತ್ತಿಗೆ ಕೈಗಾರಿಕೆ ಸ್ಥಾನಮಾನ ಕೊಡಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರವು (ಸಿಎಸ್ಎಸ್‌ಐ) ಶಿಫಾರಸು ಮಾಡಿದೆ.
‘ವಿಶ್ವಕರ್ಮ ಮತ್ತು ಅದರ 41 ಉಪಜಾತಿಗಳನ್ನು ಪ್ರಸ್ತುತ ‘ಹಿಂದುಳಿದ ವರ್ಗ 2ಎ’ ಅಡಿ ವರ್ಗೀಕರಿಸಲಾಗಿದೆ. ಆದರೆ, ಹಾಗೆ ಗುರುತಿಸಲಾಗಿರುವ ಕಮ್ಮಾರ, ಗೆಜ್ಜೆಗಾರ, ಬೈಲುಕಮ್ಮಾರ, ದೈವಜ್ಞ ಬ್ರಾಹ್ಮಣ, ಬೈಲುಪತ್ತಾರ (ಬೈಲು ಅಕ್ಕಸಾಲಿ) ಸಮುದಾಯದಲ್ಲಿ ಒಂದೇ ವೃತ್ತಿ ಇದ್ದರೂ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳು, ವಿವಾಹ ಪದ್ಧತಿಗಳಲ್ಲಿ ಭಿನ್ನತೆ ಇದ್ದು, ಪುನರ್ ವರ್ಗೀಕರಣ ಅಗತ್ಯ’ ಎಂದು ಕೇಂದ್ರವು ಪ್ರತಿಪಾದಿಸಿದೆ.
ವಿಶ್ವಕರ್ಮರನ್ನು ‘ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂಬ ಆಗ್ರಹ ಕೇಳಿಬಂದಿದ್ದರಿಂದ ಈ ಕುರಿತ ಅಧ್ಯಯನಕ್ಕೆ ಸರ್ಕಾರ ಆದೇಶಿಸಿತ್ತು. ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ₹ 18.75 ಲಕ್ಷ ಅನುದಾನ ನೀಡಿತ್ತು. ಕೇಂದ್ರದ ಸಹ ಪ್ರಾಧ್ಯಾಪಕ ಡಿ.ಸಿ. ನಂಜುಂಡ ನೇತೃತ್ವದಲ್ಲಿ ಮಹದೇವಯ್ಯ, ಕೃಷ್ಣಮೂರ್ತಿ ಮತ್ತು ಶುಭಮಂಗಳಾ ಪಿ. ಒಳಗೊಂಡ ತಂಡ ಅಧ್ಯಯನ ನಡೆಸಿ 900 ಪುಟಗಳ ವರದಿಯನ್ನು ಸಲ್ಲಿಸಿದೆ.
ಪರಸ್ಪರ ವಿಭಿನ್ನ:
‘ನಮ್ಮನ್ನು ವಿಶ್ವಕರ್ಮ ಪಟ್ಟಿಯಲ್ಲಿ ಸೇರಿಸಿರುವುದು ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಸೂಕ್ತವಲ್ಲ’ ಎಂದು ಕಮ್ಮಾರ, ಬೈಲುಕಮ್ಮಾರ ಮತ್ತು ಬೈಲುಪತ್ತಾರ ಸಮುದಾಯವು ಬಲವಾಗಿ ಪ್ರತಿಪಾದಿಸಿದೆ. ಹೀಗಾಗಿ, ಈ ಉಪಜಾತಿಗಳನ್ನು ವಿಶ್ವಕರ್ಮ ಉಪ ಜಾತಿ ಪಟ್ಟಿಯಿಂದ ಕೈಬಿಡುವಂತೆ ಶಿಫಾರಸು ಮಾಡಲಾಗಿದೆ.
‘ಕಮ್ಮಾರ, ಗೆಜ್ಜೆಗಾರ ಸಮುದಾಯಗಳು ‘ಸಾಂಸ್ಕೃತಿಕವಾಗಿ ಪರಸ್ಪರ ವಿಭಿನ್ನ’ ಎಂದು ದಾಖಲಿಸಲಾಗಿದೆ. ಕಂಸನ್, ಕಂಸಾಳ, ಕಂಚೋರ, ಕಂಚೋರಿ, ಕಂಸಾರ್, ಕಸಾರ್, ಕಂಚಗಾರ ಉಪಜಾತಿಗಳು ಕಂಚುಗಾರ (ಬ್ರಾನ್ಜ್ಸ್ಮಿತ್) ಜಾತಿಯಿಂದ ಬಂದಿದ್ದು ಇವೆಲ್ಲಾ ಒಂದೇ ಜಾತಿ (ಕಂಚುಗಾರ)’ ಎಂದು ತಿಳಿಸಲಾಗಿದೆ.
‘ಔಸಾಲ, ಬಡಿವಾಡ್ಲ, ತಸೆಹಾನ್, ಅಕ್ಸಾಲಿ ಉಪಜಾತಿಗಳು ರಾಜ್ಯದಲ್ಲಿ ಕಂಡುಬಂದಿಲ್ಲ. ವಿಶ್ವಕರ್ಮರ ಇನ್ನೆರಡು ಉಪಜಾತಿಗಳಾದ ಚಾರೋಡಿ, ಮೇಸ್ತ ಮತ್ತು ಕೊಂಕಣಿ ಆಚಾರಿ ಒಂದೇ ಆಗಿದ್ದು ‘2ಎ’ ಪಟ್ಟಿಯಲ್ಲಿ ಇವೆರಡಕ್ಕೂ ಪ್ರತ್ಯೇಕ ಕ್ರಮ ಸಂಖ್ಯೆ ನೀಡಲಾಗಿದೆ. ಈ ಬಗ್ಗೆ ಪುನರ್ ಪರಿಶೀಲನೆ ಅಗತ್ಯ’ ಎಂದು ಹೇಳಲಾಗಿದೆ.
ವಿಸ್ತರಿಸಲು ಸಾಧ್ಯವಿಲ್ಲ:
‘ಕಮ್ಮಾರರಿಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ದಕ್ಷಿಣ ಕನ್ನಡದ ಕೆಲವೆಡೆ ಎಸ್.ಟಿ. (ಪರಿಶಿಷ್ಟ ಪಂಗಡ) ಸ್ಥಾನಮಾನ ನೀಡಿದ್ದು, ರಾಜ್ಯದಾದ್ಯಂತ ಇದನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ನೀಡಲಾಗಿದೆ’ ಎಂದು ನಂಜುಂಡ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.
‘ಆರ್ಥಿಕ ಅಸ್ಥಿರತೆ, ಕೈಗಾರಿಕಾ ಮಾನ್ಯತೆ ಮತ್ತು ಮಾರುಕಟ್ಟೆ ಒಗ್ಗೂಡಿಸುವಿಕೆಯ ಸಮಸ್ಯೆಗಳಿಂದ ವಿಶ್ವಕರ್ಮ ಕುಶಲಕರ್ಮಿಗಳು ಸಂಕಷ್ಟದಲ್ಲಿದ್ದಾರೆ. ಕಬ್ಬಿಣ, ಆಭರಣ ತಯಾರಿಕೆ ಕ್ಷೇತ್ರಗಳ ದೀರ್ಘಕಾಲೀನ ಬೆಳವಣಿಗೆಯನ್ನು ಉತ್ತೇಜಿಸಲು ವಿಶ್ವಕರ್ಮ ಕರಕುಶಲ ವೃತ್ತಿಯನ್ನು ಕೈಗಾರಿಕೀಕರಣಗೊಳಿಸಬೇಕು. ಅದಕ್ಕಾಗಿ ಕಾನೂನು ಮಾನ್ಯತೆ, ಬ್ರ‍್ಯಾಂಡಿಂಗ್ ಸೌಕರ್ಯ ವೃದ್ಧಿ, ಆಧುನಿಕತೆ ಮತ್ತು ಮಾರುಕಟ್ಟೆ ಹೆಚ್ಚಿಸುವ ಹೊಸ ನೀತಿ ಅವಶ್ಯ ಎಂದು ಶಿಫಾರಸು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಪಿಎಂ–ವಿಶ್ವಕರ್ಮ ಯೋಜನೆಯಡಿ ಸಂಕೀರ್ಣ ನಿಯಮಗಳ ಕಾರಣದಿಂದಾಗಿ ಕಮ್ಮಾರ ಸೇರಿದಂತೆ ಕೆಲವು ಉಪ ಜಾತಿಗಳಿಗೆ ಅವರ ವೃತ್ತಿಯ ಹೆಸರಿನ ಕಾರಣದಿಂದಾಗಿ ಲಾಭ ಸಿಗುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ. ಸದ್ಯ ಯೋಜನೆಯಡಿ ಗುರುತಿಸಿರುವ 18 ಕೌಶಲ ತರಬೇತಿ ಪೈಕಿ ಕೇವಲ 6ಕ್ಕೆ ಮಾತ್ರ ತರಬೇತಿ ಸಿಗುತ್ತಿದೆ ಎಂಬುದು ಅಧ್ಯಯನದ ವೇಳೆ ತಿಳಿದುಬಂದಿದೆ’ ಎಂದು ನಂಜುಂಡ ತಿಳಿಸಿದರು.
900 ಪುಟಗಳ ವರದಿ ಸಿದ್ಧ ಸರ್ಕಾರಕ್ಕೆ ಸಲ್ಲಿಸಿದ ಕೇಂದ್ರ ಅಧ್ಯಯನದಲ್ಲಿ ಹಲವು ವಿಷಯ ಅನಾವರಣ
ವಿಶ್ವಕರ್ಮ-ಅಕ್ಕಸಾಲಿಗರಿಗೆ ಚಿನ್ನದ ಬಗ್ಗೆ ಉತ್ತಮ ಜ್ಞಾನವಿದೆ. ಹೀಗಾಗಿಯೇ ದೊಡ್ಡ ಚಿನ್ನಾಭರಣ ಅಂಗಡಿಗಳಲ್ಲಿ ಅವರಿಗೆ ಕೆಲಸ ಕೊಡಲು ಹಿಂಜರಿಯುವುದು ಕಂಡುಬಂದಿದೆಡಿ.ಸಿ. ನಂಜುಂಡ ಸಹ ಪ್ರಾಧ್ಯಾಪಕ ಸಿಎಸ್ಎಸ್‌ಐ ಮೈಸೂರು ವಿ.ವಿ.
ವಿಶ್ವಕರ್ಮ ಪಟ್ಟಿಗೆ ‘ಗುಡಿಗಾರ’ ಸೇರಿಸಿ
ಶಿವಮೊಗ್ಗ ಮತ್ತು ಉತ್ತರಕನ್ನಡದಲ್ಲಿ ಅಲ್ಪ ಪ್ರಮಾಣದಲ್ಲಿ ಕಂಡುಬರುವ ‘ಗುಡಿಗಾರ’ ಸಮುದಾಯವನ್ನು ವಿಶ್ವಕರ್ಮರ ಉಪ ಜಾತಿಯಾಗಿ ಸೇರಿಸುವಂತೆ ಶಿಫಾರಸು ಮಾಡಲಾಗಿದೆ. ಅವರು ಬಡಿಗರಂತೆ ದೇವಸ್ಥಾನದ ಗರ್ಭಗುಡಿಗಳು ಮತ್ತಿತರ ಮರಗೆಲಸವನ್ನು ಮಾಡುತ್ತಾರೆ ಮತ್ತು ವಿಶ್ವಕರ್ಮರೊಂದಿಗೆ ಸಾಂಸ್ಕೃತಿಕ ಇತಿಹಾಸ ಹೊಂದಿದ್ದಾರೆ. ಪಟ್ಟಿಗೆ ಸೇರಿಸುವಂತೆ ಸಮುದಾಯ ಹತ್ತು ವರ್ಷಗಳಿಂದ ಹೋರಾಡುತ್ತಿದೆ. ಉತ್ತರ ಕರ್ನಾಟಕದ ಪೋತೆದಾರ್ ಸಮುದಾಯವನ್ನೂ ವಿಶ್ವಕರ್ಮ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗಿದೆ.
ಬುಡಕಟ್ಟು ಗುಣಲಕ್ಷಣವಿಲ್ಲ...
‘ಯಾವುದೇ ಸಮುದಾಯವನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಲು ಸಂವಿಧಾನದ 342ನೇ ಪರಿಚ್ಛೇದದಲ್ಲಿ ನಮೂದಿಸಿರುವ ಮಾನದಂಡಗಳು ಮತ್ತು ಲೋಕೂರು ಸಮಿತಿ(1965) ನಿಗದಿಪಡಿಸಿರುವ ನಿರ್ದಿಷ್ಟ ಗುಣಲಕ್ಷಣಗಳು ವಿಶ್ವಕರ್ಮ ಮತ್ತು ಉಪಜಾತಿಗಳಲ್ಲಿ ಕಂಡುಬಂದಿಲ್ಲ’ ಎಂದು ವರದಿ ತಿಳಿಸಿದೆ. ದಾಖಲೆಗಳ ಪ್ರಕಾರ ವಿಶ್ವಕರ್ಮದ ಪಂಚವೃತ್ತಿಗಳಾದ ಕಮ್ಮಾರ ಬಡಗಿ ಅಕ್ಕಸಾಲಿಗ ಕಂಚುಗಾರ ಮತ್ತು ಶಿಲ್ಪಿ ಕರಕುಶಲ ಕೆಲಸಗಳಲ್ಲಿ ಆರಂಭದಿಂದಲೂ ತೊಡಗಿದ್ದವರು ಮತ್ತು ಪಾರಂಪರಿಕವಾಗಿ ಗ್ರಾಮ ಮತ್ತು ನಗರ ಆರ್ಥಿಕ ವ್ಯವಸ್ಥೆಯ ಭಾಗವಾಗಿದ್ದರು ಎಂಬುದು ಕಂಡುಬಂದಿದೆ. ‘ವಿಶ್ವಕರ್ಮ ಹಿಂದೂ ಜಾತಿ ವ್ಯವಸ್ಥೆಯ ಒಳಗೆ ಸ್ಥಾನ ಪಡೆದ ಸಮುದಾಯವಾಗಿದ್ದು ಸಾಮಾಜಿಕ ಅಥವಾ ಭೌಗೋಳಿಕ ಪ್ರತ್ಯೇಕತೆ ಕಂಡುಬಂದಿಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಕಾರಣವಷ್ಟೆ ಬುಡಕಟ್ಟು ವರ್ಗಕ್ಕೆ ಸೇರಲು ಮಾನದಂಡವಲ್ಲ ಎಂದು ನ್ಯಾಯಾಲಯಗಳೂ ಸ್ಪಷ್ಟಪಡಿಸಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.