ADVERTISEMENT

ಆಯಿಷ್‌: ಮಹಿಳಾ ಸಬಲೀಕರಣಕ್ಕೆ ಮಾದರಿ; ರಾಷ್ಟ್ರಪತಿ ದ್ರೌ‍ಪದಿ ಮುರ್ಮು ಶ್ಲಾಘನೆ

ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ವಜ್ರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ‘ವಜ್ರ ಮಹೋತ್ಸವ’ದ ಸ್ಮರಣ ಸಂಚಿಕೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಬಿಡುಗಡೆ ಮಾಡಿದರು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು 
ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ‘ವಜ್ರ ಮಹೋತ್ಸವ’ದ ಸ್ಮರಣ ಸಂಚಿಕೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಬಿಡುಗಡೆ ಮಾಡಿದರು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು    

ಮೈಸೂರು: ‘ಮಹಿಳಾ ಸಬಲೀಕರಣಕ್ಕೆ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯು ಅತ್ಯುತ್ತಮ ಉದಾಹರಣೆ. ‘ಕಾಕ್ಲಿಯರ್ ಇಂಪ್ಲಾಂಟ್‌’ನಂಥ ಶ್ರವಣ ಸಾಧನಗಳು ದೇಶದಲ್ಲೇ ತಯಾರಾಗಲು ಇದರ ನೆರವು ಅಗತ್ಯ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಸೋಮವಾರ ಸಂಸ್ಥೆಯ ‘ವಜ್ರ ಮಹೋತ್ಸವ‘ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು,  ‘ವಾಕ್ ಮತ್ತು ಶ್ರವಣ ಸಮಸ್ಯೆಯುಳ್ಳ ಮಕ್ಕಳು ಸ್ವಾವಲಂಬಿ ಜೀವನ ನಡೆಸಲು 6 ದಶಕದಿಂದ ನಿರಂತರ ಸಂಶೋಧನೆ, ಆವಿಷ್ಕಾರದಲ್ಲಿ ಕಾರುಣ್ಯದಿಂದ ಕೆಲಸ ಮಾಡಿರುವ ಸಂಸ್ಥೆಯನ್ನು 2 ದಶಕಕ್ಕೂ ಹೆಚ್ಚು ಕಾಲ ನಿರ್ದೇಶಕಿಯರೇ ಮುನ್ನಡೆಸಿದ್ದಾರೆ’ ಎಂದು ಪ್ರಶಂಸಿಸಿದರು. 

‘ದೇಶದಲ್ಲಿ 6 ಕೋಟಿ ಜನ ಶ್ರವಣ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಸ್ಥೆಯು ಸಂವಹನ ಸಮಸ್ಯೆ ಬಗೆಹರಿಸಲು ಬಹುಶಿಸ್ತೀಯ ಚಿಕಿತ್ಸಾ ಮಾದರಿಯನ್ನು ಜಗತ್ತಿಗೇ ಪರಿಚಯಿಸಿದೆ. ಇಲ್ಲಿನ ಸಮಗ್ರ ಚಿಕಿತ್ಸಾ ಉದ್ಯಾನವು (ಇನ್‌ಕ್ಲೂಸಿವ್‌ ಥೆರಪಿ ಪಾರ್ಕ್‌) ವಿಶ್ವಕ್ಕೆ ಮಾದರಿ’ ಎಂದು ಉದಾಹರಿಸಿದರು. 

ADVERTISEMENT

‘ಟೆಲಿ ಮೌಲ್ಯಮಾಪನ ಹಾಗೂ ಪುನರ್ವಸತಿ ಸೇವೆಯನ್ನು ಔಟ್‌ರೀಚ್‌ ಕೇಂದ್ರಗಳ ಮೂಲಕ ನೀಡುತ್ತಿರುವ ಸಂಸ್ಥೆ ದೇಶದ ಉತ್ಕೃಷ್ಟತಾ ಕೇಂದ್ರವಾಗಿದೆ. ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದ ನೋಡಲ್‌ ಕೇಂದ್ರವಾಗಿರುವ ಸಂಸ್ಥೆಗೆ ಕಳೆದ ವರ್ಷ ರಾಷ್ಟ್ರೀಯ ಪುರಸ್ಕಾರವನ್ನು ನೀಡಿದ್ದೆ’ ಎಂದು ಸ್ಮರಿಸಿದರು. 

ದೇಶೀಯ ಅಭಿವೃದ್ಧಿ ಅಗತ್ಯ: ‘ಕಾಕ್ಲಿಯರ್‌ ಇಂಪ್ಲಾಂಟ್‌ ಸೇರಿದಂತೆ ಶ್ರವಣದ ಸಾಧನಗಳು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡುವುದು ಆತ್ಮನಿರ್ಭರ ಭಾರತದ ಸಂಕಲ್ಪ.  ನವೀನ ತಂತ್ರಜ್ಞಾನ ಬಳಕೆ ಸೇರಿ ಆಯಿಷ್‌ ಅದಕ್ಕೆ ನೆರವಾಗಬೇಕು’ ಎಂದು ಸಲಹೆ ನೀಡಿದರು. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್‌, ‘ಇದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಅತ್ಯುತ್ತಮ ಸಂಸ್ಥೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಯಿಷ್‌ ಮಾದರಿಯಲ್ಲೇ ಮತ್ತೊಂದು ಕೇಂದ್ರ ತೆರೆಯಲಾಗುತ್ತಿದೆ’ ಎಂದರು. 

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌, ಆಯಿಷ್‌ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಪಾಲ್ಗೊಂಡಿದ್ದರು.  

‘ಕನ್ನಡ ನಿಮಗೆ ಗೊತ್ತಾಗುತ್ತಾ’

ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದಲ್ಲೇ ಭಾಷಣ ಆರಂಭಿಸಿ ರಾಷ್ಟ್ರಪತಿ ಅವರಿಗೆ ‘ಯು ನೋ ಕನ್ನಡ’ ಎಂದು ಕೇಳಿದರು. ಮುರ್ಮು ಅವರು ತಮ್ಮ ಭಾಷಣದಲ್ಲಿ ‘ನಿಮ್ಮ ಮಾತೃಭಾಷೆ ಗೊತ್ತಿಲ್ಲ. ಕರ್ನಾಟಕದ ಭಾಷೆಯಲ್ಲದೇ ಭಾರತದಲ್ಲಿರುವ ಬಹು ಭಾಷಾ ಸಂಸ್ಕೃತಿ ಪರಂಪರೆಯನ್ನು ಪ್ರೀತಿಸುವುದು ಗೌರವಿಸುವುದು ಹಾಗೂ ಸಮ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ. ಶೀಘ್ರದಲ್ಲೇ ಸ್ವಲ್ಪವಾದರೂ ಕನ್ನಡ ಕಲಿಯುವೆ’ ಎಂದು ನಕ್ಕರು. 

ವರುಣದಲ್ಲಿ 10 ಎಕರೆ ಭೂಮಿಯನ್ನು ಆಯಿಷ್‌ಗೆ ಉಚಿತವಾಗಿ ನೀಡುವ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಬೇಕಾದ ಎಲ್ಲ ನೆರವು ನೀಡಲಿದ್ದೇವೆ.
– ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.