ADVERTISEMENT

ಮೈಸೂರು | ಮಳೆಯಲ್ಲೂ ಕಿಚ್ಚೆಬ್ಬಿಸಿದ ‘ಯುವ’ ಸಂಭ್ರಮ!

‘ಬ್ಯಾಂಗಲ್‌ ಬಂಗಾರಿ’ ಹಾಡಿಗೆ ಯುವ ರಾಜ್‌ಕುಮಾರ್, ಅಮೃತಾ ಅಯ್ಯಂಗಾರ್ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 7:15 IST
Last Updated 11 ಸೆಪ್ಟೆಂಬರ್ 2025, 7:15 IST
ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ಬುಧವಾರ ಆರಂಭವಾದ ‘ಯುವ ಸಂಭ್ರಮ’ದಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ‍ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ‘ಸ್ವರ ಭಾರತಿ’ ನೃತ್ಯ ರೂಪಕ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ. 
ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ಬುಧವಾರ ಆರಂಭವಾದ ‘ಯುವ ಸಂಭ್ರಮ’ದಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ‍ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ‘ಸ್ವರ ಭಾರತಿ’ ನೃತ್ಯ ರೂಪಕ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.    

ಮೈಸೂರು: ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಬುಧವಾರ ತುಂತುರು ಮಳೆ ನಡುವೆಯೇ ‘ಯುವ ಸಂಭ್ರಮ’ವು ಮೇಳೈಸಿತು. ಸಾಂಸ್ಕೃತಿಕ ದಸರೆಗೆ ವೈಭವದ ಮುನ್ನುಡಿ ಬರೆಯಿತು. 

ಯುವ ಸಮುದಾಯವೇ ತುಂಬಿದ್ದ ಅಂಗಳದ ಬೆಳಕಿನ ವೇದಿಕೆಯನ್ನು ಚಲನಚಿತ್ರ ನಟರಾದ ಯುವ ರಾಜ್‌ಕುಮಾರ್, ಅಮೃತಾ ಅಯ್ಯಂಗಾರ್ ಪ್ರವೇಶಿಸುತ್ತಿದ್ದಂತೆಯೇ  ಶಿಳ್ಳೆ- ಚಪ್ಪಾಳೆ ಮುಗಿಲು ಮುಟ್ಟಿತ್ತು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಸ್ಪರ್ಧಿಗಳು, ನೆರೆದಿದ್ದ ಪ್ರೇಕ್ಷಕ ಯುವ ಸಮೂಹವು ಜಯಕಾರ ಹಾಕಿತು. 

‘ಬ್ಯಾಂಗಲ್‌ ಬಂಗಾರಿ’ ಹಾಡಿಗೆ ಹೆಜ್ಜೆಗೆ ಹಾಕಿದ ಇಬ್ಬರೂ, ಮಿಂಚಿನ ಸಂಚಲನೆ ಉಂಟು ಮಾಡಿದರು. ಮಳೆ ಬೀಳುತ್ತಿದ್ದರೂ ಯುವ ಸಮೂಹವು ಹುಚ್ಚೆದ್ದು ಕುಣಿಯಿತು. ಜೊತೆಗೆ ಅವರ ಮಾತುಗಳಿಗೂ ಕಿವಿಯಾಯಿತು. 

ADVERTISEMENT

ಹೆಜ್ಜೆ ಹಾಕಿದ್ದೆ: ‘ಶಾಲಾ– ಕಾಲೇಜಿನ ದಿನಗಳಲ್ಲಿ ಇದೇ ಬಯಲು ರಂಗಮಂದಿರದ  ವೇದಿಕೆಯಲ್ಲಿ ಕಾಲಿಗೆ ಗೆಜ್ಜೆ ಕಟ್ಟಿದ್ದೆ, ನೃತ್ಯ ಮಾಡಿದ್ದೆ. ಇದೀಗ ನಿಮ್ಮೆದುರು ಮಾತನಾಡುತ್ತಿರುವುದೇ ಅಪೂರ್ವ ಕ್ಷಣ’ ಎಂದು ಅಮೃತ ಅಯ್ಯಂಗಾರ್ ಹೇಳಿದರು. 

‘ಮೈಸೂರಲ್ಲಿ ಓಡಿದ ಸಿನಿಮಾ ಎಲ್ಲೆಡೆ ಯಶಸ್ಸು ಗಳಿಸುತ್ತದೆ ಎಂಬುದು ಮಾತು. ನನ್ನ ಊರು  ಕೊಟ್ಟಿರುವ ಕೊಡುಗೆ ದೊಡ್ಡದು. ನಮ್ಮ ಜನ ಎಷ್ಟು ಒಳ್ಳೆಯವರು, ಬುದ್ಧಿವಂತರು. ಹೆಚ್ಚು ಕಲಾವಿದರನ್ನು ನಾಡಿಗೆ ಕೊಟ್ಟವರು. ಇಲ್ಲಿಂದ ಮತ್ತಷ್ಟು ಕಲಾವಿದರು ಬರಲಿ’ ಎಂದು ಆಶಿಸಿದರು.  

ಯುವ ರಾಜ್‌ಕುಮಾರ್ ಮಾತನಾಡಿ, ‘ಮೈಸೂರು ನನ್ನಿಷ್ಟದ ಊರು. ಅರಮನೆಯಂತೆಯೇ  ಕುವೆಂಪು, ನಾಲ್ವಡಿ, ಸರ್‌ಎಂವಿ ನೆನಪಾಗುತ್ತಾರೆ. ನಾಡಿನ ಕಲೆ ಸಂಸ್ಕೃತಿಯನ್ನು ಸಂಭ್ರಮಿಸುವ ಹಬ್ಬ ದಸರೆ. ಅದು ರಂಗೇರುವುದು ಯುವ ಸಂಭ್ರಮದಿಂದಲೇ. ಈ ವೇದಿಕೆಯೇ ನಿಮ್ಮದು’ ಎಂದು ಹೇಳಿದರು. 

ಚಾಲನೆ: ಜಗಮಗಿಸುವ ವಿದ್ಯುತ್ ದೀ‍ಪಾಲಂಕಾರ ಕಣ್ಮನ ಸೆಳೆಯುವ ವೇದಿಕೆಯಲ್ಲಿ ಕಿವಿಗಡಚಿಕ್ಕುವ ಉದ್ಘೋಷಗಳ ನಡುವೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಜ್ಯೋತಿ ಬೆಳಗಿ, ಡೊಳ್ಳು ಬಾರಿಸುವ ಮೂಲಕ ‘ಯುವ ಸಂಭ್ರಮ’ಕ್ಕೆ ಸಡಗರದ ಚಾಲನೆ ನೀಡಿದರು. 

ನಂತರ ಮಾತನಾಡಿ, ‘ನಾಡಹಬ್ಬದ ದಸರಾದ ಖ್ಯಾತಿ ವಿಶ್ವದಾದ್ಯಂತ ಚಾಚಿದೆ. ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ವಿದ್ಯಾರ್ಥಿಗಳ ಮೂಲಕ ವಿವಿಧ ಜಿಲ್ಲೆಗಳ ಕಲಾ ಸಂಸ್ಕೃತಿಯು  ಅನಾವರಣ ಆಗುತ್ತದೆ’ ಎಂದರು.

ಶಾಸಕ ತನ್ವೀರ್ ಸೇಠ್‌, ‘ಯುವ ಸಮುದಾಯವನ್ನು ರಂಜಿಸಲು ಯುವ ದಸರಾ ಇತ್ತು. ರಾಜ್ಯದ ಎಲ್ಲ ಜಿಲ್ಲೆಗಳ ಯುವಕರು ತಮ್ಮ ಪ್ರತಿಭೆ ತೋರಿಸುವುದಕ್ಕೆ 2018ರಲ್ಲಿ ಯುವ ಸಂಭ್ರಮ ಶುರು ಮಾಡಲಾಯಿತು. ಇದು ನಿಮಗೆ ನೀಡಿದ ಪ್ರಾತಿನಿಧ್ಯ’ ಎಂದು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್‌, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಯುಕೇಶ್‌ ಕುಮಾರ್,  ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಡಿಸಿಪಿ ಆರ್.ಎನ್‌.ಬಿಂದುಮಣಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಪಾಲ್ಗೊಂಡಿದ್ದರು. 

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ‘ಶಿವನ ನೃತ್ಯ’ ಪ್ರದರ್ಶಿಸಿದರು 
ನಟ ಯುವ ರಾಜಕುಮಾರ್ ಹಾಗೂ ನಟಿ ಅಮೃತಾ ಅಯ್ಯಂಗಾರ್ ‘ಬ್ಯಾಂಗಲ್‌ ಬಂಗಾರಿ’ ಹಾಡಿಗೆ ಹೆಜ್ಜೆ ಹಾಕಿದ ಕ್ಷಣ 
ನಲಿದ ಯುವ ಪ್ರೇಕ್ಷಕ ಸಮೂಹ 

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಚಾಲನೆ ಹಾಡುಗಳಿಗೆ ಧೂಳೆಬ್ಬಿಸಿದ ಕಾಲೇಜು ವಿದ್ಯಾರ್ಥಿಗಳು  ಮಳೆಯಲ್ಲೂ ಹೆಜ್ಜೆ ಹಾಕಿದ ಯುವ ‍ಪಡೆ 

ಸಾಂಸ್ಕೃತಿಕ ವೈಭವ ಪರಿಸರ ಪ್ರೀತಿ
ಯುವಸಂಭ್ರಮದ ಮೊದಲ ದಿನ 25 ಕಾಲೇಜುಗಳ ತಂಡಗಳು ‘ದಸರಾ ವೈಭವ’ ‘ಕನ್ನಡ ಸಿನಿಮಾ’ ರೈತರು ಆದಿವಾಸಿಗಳ ಜೀವನ ಸಾಮಾಜಿಕ ನ್ಯಾಯ  ಭಾರತದ ಸಂವಿಧಾನ ಶಿವ ನೃತ್ಯ ಜಾನಪದ ಅರ್ಜುನ ಆನೆ ಸೇರಿದಂತೆ ವಿವಿಧ ವಿಷಯಗಳನ್ನು ಆಧರಿಸಿದ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ತಂಡವು ‘ಸ್ವರ ಭಾರತಿ’ ನೃತ್ಯ ರೂಪಕ ಪ್ರದರ್ಶಿಸಿತು. ಸರಸ್ವತಿ ಲಕ್ಷ್ಮಿ ಹಾಗೂ ಪಾರ್ವತಿಯ ಕಥನ ಅಲ್ಲಿ ಅನಾವರಣಗೊಂಡಿತ್ತು.  ಬೆಂಗಳೂರಿನ ಜಿ.ಸಿ.ಮ್ಯಾಟ್‌ ಗುಪ್ತ ಕಾಲೇಜು ತಂಡದವರು ‘ಆದಿವಾಸಿ ಜೀವನ’ ವೇದಿಕೆಯ ಮೇಲೆ ತಂದರು. ಅರಣ್ಯದಲ್ಲಿ ಆದಿವಾಸಿ ಹೋರಾಟ ಸಾರುವ ‘ಅಪೊಕ್ಯಾಲಿ‍ಪ್ಟೊ’ ಚಿತ್ರದ ‘ಜಾಗ್ವಾರ್ ಪಾ’ ಪಾತ್ರವು ಹೇಳುವ ‘ನಾನು ಜಾಗ್ವಾರ್ ಪಾ ಇದು ನನ್ನ ಕಾಡು ಯಾರಿಗೂ ಹೆದರುವುದಿಲ್ಲ’ ಎಂದು ಹೇಳಿದ ಕಲಾವಿದರು ತೈಕುಡಂ ಬ್ರಿಡ್ಜ್‌ ಬ್ಯಾಂಡ್‌ನ ‘ನವರಸಂ’ ‘ಕಾಂತಾರ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.   ಮಹಾತ್ಮ ಗಾಂಧಿ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ‘ನಾಲ್ವಡಿ’ ವಾತ್ಸಲ್ಯ ಶಿಕ್ಷಣ ವಿದ್ಯಾಲಯದವರು ‘ಅಂಬೇಡ್ಕರ್‌’ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ‘ಶಿವ ನೃತ್ಯ’ ಮಾಡಿದರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ‘ದಸರಾ ವೈಭವ’ ಅನಾವರಣಗೊಳಿಸಿದರೆ ಛಾಯಾದೇವಿ ಕಾಲೇಜಿನವರು ‘ಗ್ಯಾರಂಟಿ ಯೋಜನೆಗಳ ಗೀತಗುಚ್ಛ’ ಅರ್ಪಿಸಿದರು. ಎಂಎಂಕೆ ಕಾಲೇಜು ತಂಡದ ಜಾನಪದ ವೈಭವ  ಸಪ್ತಗಿರಿ ಕಾಲೇಜಿನ ‘ಅರ್ಜುನ ಆನೆ’ ಕಥನವು ಸೆಳೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.