ADVERTISEMENT

ಫ್ಲ್ಯಾಟ್‌ಗಳ ಬೆಲೆ ದುಬಾರಿ?

ನಗರದಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 10:06 IST
Last Updated 29 ಜೂನ್ 2019, 10:06 IST
ಅಪಾರ್ಟ್‌ಮೆಂಟ್‌ಗಳು – ಸಾಂದರ್ಭಿಕ ಚಿತ್ರ
ಅಪಾರ್ಟ್‌ಮೆಂಟ್‌ಗಳು – ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೊಸ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿರ್ಮಾಣ ಯೋಜನೆಗಳಿಗೆ ರಾಜ್ಯ ಸರ್ಕಾರವು ಐದು ವರ್ಷಗಳವರೆಗೆ ನಿಷೇಧ ವಿಧಿಸಿದರೆ ಅದರಿಂದ ನಗರದಲ್ಲಿನ ಫ್ಲ್ಯಾಟ್‌ಗಳ ಬೆಲೆಯು ತಕ್ಷಣದಿಂದಲೇ ಶೇ 10 ರಿಂದ ಶೇ 15ರಷ್ಟು ಹೆಚ್ಚಳಗೊಳ್ಳುವ ಸಾಧ್ಯತೆ ಇದೆ.

ಹೊಸ ವಸತಿ ಯೋಜನೆಗಳಲ್ಲಿನ ಫ್ಲ್ಯಾಟ್‌ಗಳ ಲಭ್ಯತೆಯು ಸೀಮಿತ ಪ್ರಮಾಣದಲ್ಲಿ ಇರುವುದರಿಂದ ಸದ್ಯಕ್ಕೆ ವಸತಿಗೆ ಸಿದ್ಧ ಇರುವ ಫ್ಲ್ಯಾಟ್‌ಗಳ ಬೇಡಿಕೆಯು ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ. ಇದರಿಂದ ಖರೀದಿ ಬೆಲೆಯೂ ಗಣನೀಯವಾಗಿ ಏರಿಕೆ ಕಾಣಲಿದೆ ಎಂದು ರಿಯಲ್‌ ಎಸ್ಟೇಟ್‌ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಅಂತರ್ಜಾಲ ತಾಣದಲ್ಲಿನ ಮಾಹಿತಿ ಪ್ರಕಾರ, ವಸತಿ ನಿರ್ಮಾಣದ 328 ಯೋಜನೆಗಳು ಸರ್ಕಾರದ ವಿವಿಧ ಪ್ರಾಧಿಕಾರಗಳ ಅನುಮತಿಯನ್ನು ಎದುರು ನೋಡುತ್ತಿವೆ.

ADVERTISEMENT

ಉದ್ದೇಶಿತ ನಿಷೇಧವು ಈಗಾಗಲೇ ನಿರ್ಮಾಣ ಹಂತದಲ್ಲಿ ಇರುವ ಯೋಜನೆಗಳಿಗೂ ಅನ್ವಯಗೊಳ್ಳಲಿದೆಯೇ ಎನ್ನುವುದು ಸ್ಪಷ್ಟಗೊಂಡಿಲ್ಲ.

ಉದ್ಯಮದಲ್ಲಿ ಲಭ್ಯ ಇರುವ ಅಂಕಿ ಅಂಶಗಳ ಪ್ರಕಾರ, ಇದುವರೆಗೆ 106 ಹೊಸ ಅಪಾರ್ಟ್‌ಮೆಂಟ್‌ ಸಮುಚ್ಚಯ ಯೋಜನೆಗಳು ಕಾರ್ಯಾರಂಭ ಮಾಡಿವೆ. ಈ ಯೋಜನೆಗಳಲ್ಲಿ 18,600 ಹೊಸ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ.

‘ಇಂತಹ ಅಹಿತಕರ ಪರಿಸ್ಥಿತಿ ನಿರ್ಮಾಣವಾಗಲು ಕಾರಣಗಳೇನು ಎನ್ನುವುದನ್ನು ವಿಮರ್ಶಿಸಬೇಕು. ಅತಿಯಾದ ನಿರ್ಮಾಣ ಯೋಜನೆಗಳು ಮತ್ತು ನೀರಿನ ಸಮರ್ಪಕ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದ ಕಾರಣಕ್ಕೆ ನಿರ್ಮಾಣ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವಂತಹ ಪರಿಸ್ಥಿತಿ ಉದ್ಭವಿಸಿದೆ’ ಎಂದು ಅನ್‌ರಾಕ್‌ ಪ್ರಾಪರ್ಟಿ ಕನ್ಸಲ್ಟಂಟ್ಸ್‌ನ ಅಧ್ಯಕ್ಷ ಅನುಜ್‌ ಪುರಿ ಪ್ರತಿಕ್ರಿಯಿಸಿದರು.

ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಫ್ಲ್ಯಾಟ್‌ಗಳ ಬೆಲೆಗಳು ಸರಾಸರಿ ಶೇ 6ರಷ್ಟು ಏರಿಕೆಯಾಗಿವೆ. ಸದ್ಯಕ್ಕೆ ನಗರದಲ್ಲಿ ಪ್ರತಿ ಚದರ ಅಡಿಯ ಸರಾಸರಿ ಬೆಲೆ ₹ 4,950 ಇದೆ.

ವ್ಯತಿರಿಕ್ತ ಪರಿಣಾಮ: ಈ ನಿಷೇಧವು ಹೊಸ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

132 ಯೋಜನೆಗಳ ಬಗ್ಗೆ ವಿವಿಧ ಪ್ರಾಧಿಕಾರಗಳು ಹಲವು ಪ್ರಶ್ನೆಗಳನ್ನು ಎತ್ತಿವೆ. ಯೋಜನೆಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆಗಳು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವುದು ಸೇರಿದಂತೆ ಅನೇಕ ಅಗತ್ಯಗಳನ್ನು ಪೂರೈಸಬೇಕಾಗಿದೆ.

ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಭೂಮಿ ಹೊಂದಿದ, ಯೋಜನಾ ರೂಪುರೇಷೆ, ಕಟ್ಟಡದ ವಿನ್ಯಾಸ ಸಿದ್ಧಪಡಿಸಿಕೊಂಡಿರುವವರು ಈಗ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಎಲ್ಲ ಪೂರ್ವಭಾವಿ ವೆಚ್ಚಗಳು ವ್ಯರ್ಥವಾಗಲಿವೆ.

ಉದ್ಯೋಗ ನಷ್ಟ
ವಸತಿ ಯೋಜನೆಗಳ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧ ಜಾರಿಗೆ ಬರುವುದರಿಂದ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರ ಉದ್ಯೋಗಕ್ಕೆ ಕುತ್ತು ಬರಲಿದೆ. ಇತರ ರಾಜ್ಯಗಳಿಗೆ ಅನಿವಾರ್ಯವಾಗಿ ವಲಸೆ ಹೋಗುತ್ತಾರೆ. ಕರ್ನಾಟಕ ರಾಜ್ಯ ನಿರ್ಮಾಣ ಕೆಲಸಗಾರರ ಕೇಂದ್ರೀಯ ಸಂಘದ (ಕೆಸ್‌ಸಿಡಬ್ಲ್ಯುಸಿಯು) ಪ್ರಕಾರ, ಕರ್ನಾಟಕದಲ್ಲಿ ಬೇರೆ, ಬೇರೆ ರಾಜ್ಯಗಳಿಂದ ಬಂದಿರುವ 12 ಲಕ್ಷ ಕಾರ್ಮಿಕರು ಕಟ್ಟಡ ನಿರ್ಮಾಣ ರಂಗದಲ್ಲಿ ದುಡಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.