ADVERTISEMENT

ಸಿಂಧನೂರು| ಅಂಬಾದೇವಿ ಮಹಾರಥೋತ್ಸವ: ಅಪಾರ ಭಕ್ತರು, ಹೆಚ್ಚುವರಿ ಬಸ್, ಬಿಗಿ ಭದ್ರತೆ

ಡಿ.ಎಚ್.ಕಂಬಳಿ
Published 4 ಜನವರಿ 2026, 6:19 IST
Last Updated 4 ಜನವರಿ 2026, 6:19 IST
   

ಸಿಂಧನೂರು: ವಾಹನ ದಟ್ಟಣೆಯಂತ ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತು ಪಡಿಸಿ  ಶಾಂತಿಯುತವಾಗಿ ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದ ಮಹಾರಥೋತ್ಸವ ಹಾಗೂ ಜಂಬೂ ಸವಾರಿ ಅದ್ದೂರಿಯಾಗಿ ನಡೆದಿದೆ. ಜಾತ್ರೆಯಲ್ಲಿ ಕಂಡ ಕೆಲ ಘಟನೆಗಳ ಬಗ್ಗೆ ಸ್ಥಳೀಯ ಪ್ರಜಾವಾಣಿ ಪ್ರತಿನಿಧಿ ಡಿ.ಎಚ್.ಕಂಬಳಿ ಪ್ರತ್ಯಕ್ಷ ವರದಿ ನೀಡಿದ್ದಾರೆ.

ಜಾತ್ರಾ ವಿಶೇಷ ಹೆಚ್ಚುವರಿ ಬಸ್‍ಗಳ ಸಂಚಾರ: ಅಂಬಾದೇವಿ ದೇವಸ್ಥಾನದ ಮಹಾರಥೋತ್ಸವ ಹಾಗೂ ಜಂಬೂ ಸವಾರಿ ನಿಮಿತ್ತ ಸಿಂಧನೂರು ಬಸ್ ಘಟಕದಿಂದ ಸುಮಾರು 25ಕ್ಕೂ ಹೆಚ್ಚು ಬಸ್‍ಗಳನ್ನು ಭಕ್ತರ ಅನುಕೂಲಕ್ಕಾಗಿ ಸಂಚಾರಕ್ಕೆ ಬಿಡಲಾಗಿತ್ತು. ಸಿಂಧನೂರಿನ ಬಸ್ ನಿಲ್ದಾಣ ಮತ್ತು ಅಂಬಾಮಠದ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಬಸ್‍ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರ ಜತೆ ಸಿರಗುಪ್ಪ, ಮಾನ್ವಿ, ಮಸ್ಕಿ ಘಟಕದಿಂದಲೂ ಜಾತ್ರಾ ಮಹೋತ್ಸವ ಅಂಗವಾಗಿ ಬಸ್‍ಗಳನ್ನು ಸಂಚಾರಕ್ಕೆ ಬಿಡಲಾಗಿದೆ.

ಅಪಾರ ಭಕ್ತರು:  ಸಿಂಧನೂರು, ಮಸ್ಕಿ, ಮಾನ್ವಿ, ಲಿಂಗಸೂಗೂರು, ಸಿರಗುಪ್ಪ, ತಾವರಗೇರಾ, ರಾಯಚೂರು, ಗಂಗಾವತಿ, ಬಾಗಲಕೋಟ, ಬೆಳಗಾವಿ, ವಿಜಯಪುರ ಸೇರಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಂದ ಸುಮಾರು ಮೂರ್ನಾಲ್ಕು ಲಕ್ಷ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ADVERTISEMENT

ವಿದ್ಯಾರ್ಥಿಗಳಿಗಾಗಿ 14 ಬಸ್‍ಗಳ ಉದ್ಘಾಟನೆ: ಅಂಬಾಮಠದ ಮಹಾರಥೋತ್ಸವಕ್ಕೆ ಚಾಲನೆಗೂ ಮುನ್ನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹5 ಕೋಟಿ ಅನುದಾನದಲ್ಲಿ ಗ್ರಾಮೀಣ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಸಂಚಾರದ ಅನುಕೂಲಕ್ಕಾಗಿ ಮಂಜೂರಾಗಿರುವ 14 ವಿಶೇಷ ಬಸ್‍ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಮತ್ತು ಮುಜುರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿ ಅಧಿಕೃತವಾಗಿ ಸಂಚಾರಕ್ಕೆ ಚಾಲನೆ ನೀಡಿದರು.

ಸಾಧು-ಸಂತರಿಂದ ಗಾಂಜಾ ಸೇವನೆ: ಅಂಬಾಮಠ ಜಾತ್ರಾ ಮಹೋತ್ಸವ ಜ.2 ರಿಂದ ಆರಂಭವಾಗಿದ್ದು, ಡಿ.3 ರಂದು ನಡೆದ ಮಹಾರಥೋತ್ಸವದಲ್ಲಿ ಅಪಾರ ಸಂಖ್ಯೆಯ ಜನ ಭಾಗವಹಿಸಿ ಅಂಬಾದೇವಿಯ ಕೃಪೆಗೆ ಪಾತ್ರರಾಗಿದ್ದು ಒಂದು ಕಡೆಯಾದರೆ, ವಿವಿಧ ರಾಜ್ಯಗಳಿಂದ ಬಂದಿದ್ದ ಸಾಧು ಸಂತರು ಗುಡ್ಡ, ದೇವಸ್ಥಾನ ಹಿಂಭಾಗ, ಅವಧೂತರ ಮಠದ ಪಕ್ಕದಲ್ಲಿ ಸೇರಿದಂತೆ ಹೊಲ ಗದ್ದೆಗಳಲ್ಲಿ ಗಾಂಜಾ ಸೇವಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಪೊಲೀಸರು ಕಂಡೂ ಕಾಣದಂತೆ ಮೌನ ವಹಿಸಿದ್ದರು.

1500 ಪೊಲೀಸರ ನಿಯೋಜನೆ: ಮಹಾರಥೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನೇತೃತ್ವದಲ್ಲಿ ಅನೇಕ ಡಿವೈಎಸ್‍ಪಿ, ಸರ್ಕಲ್ ಇನ್‌ಪೆಕ್ಟರ್, ಪಿಎಸ್‌ಐ, ಎಎಸ್‍ಐ, ಎಚ್‍ಸಿ, ಪಿಸಿ, ಕೆಎಸ್‍ಆರ್‌ಪಿ, ಡಿಆರ್ ಸೇರಿದಂತೆ ಸುಮಾರು 1500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ  ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಒದಗಿಸಿದ್ದರು.

ನೆಟ್ ವರ್ಕ್ ಸಮಸ್ಯೆ, ಜನರ ಪರದಾಟ: ಜಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಮೊಬೈಲ್ ನೆಟ್‍ವರ್ಕ್ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿತ್ತು. ಏನಾದರೂ ಖರೀದಿಸಿದಾಗ ಆನ್‌ಲೈನ್‌ ಮೂಲಕ ಪೇ ಮಾಡಲು ಜನರು ಪರದಾಡಿದರು. ಖರೀದಿಸಿ ನಂತರ ಹಣ ಕೊಡುತ್ತೇವೆ ಎಂದು ಹೇಳುವವರು ಪುನಃ ಬರಲಿಲ್ಲ. ಇದರಿಂದ ವ್ಯಾಪಾರಿಗಳಿಗೆ ತುಂಬಾ ಹಾನಿಯಾಯಿತು.

ಟ್ರಾಫಿಕ್ ಸಮಸ್ಯೆ: ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಬಸ್, ಕಾರು, ಕ್ರೂಷರ್, ಟ್ರ್ಯಾಕ್ಟರ್, ಬೈಕ್, ಟಂಟಂ ಆಟೊ ಸೇರಿ ವೈಯಕ್ತಿಕ ವಾಹನಗಳಲ್ಲಿ ಬಂದಿದ್ದರಿಂದ ಸೋಮವಾರ ಕ್ರಾಸ್‍ನಿಂದ ಅಂಬಾದೇವಿ ದೇವಸ್ಥಾನದವರೆಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿತ್ತು. ಇದರಿಂದ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ಜಾತ್ರೆಗೆ ಬಂದವರು ಮರಳಿ ಹೋಗಲು ತಾಸುಗಟ್ಟಲೇ ವಾಹನ ದಟ್ಟಣೆ ಒಳಗೆ ಸಿಕ್ಕು ತೊಂದರೆ ಅನುಭವಿಸಿದರು.