ಮಸ್ಕಿ (ರಾಯಚೂರು ಜಿಲ್ಲೆ): ಅಶೋಕನ ಶಿಲಾಶಾಸನದ ಮೂಲಕ ಐತಿಹಾಸಿಕ ಮಹತ್ವ ಪಡೆದಿರುವ ಮಸ್ಕಿ, ಈಗ ಉತ್ಖನನದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಪಟ್ಟಣದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಜನವಸತಿ ಇತ್ತು ಎಂಬುದನ್ನು ದೃಢಪಡಿಸುವ ಕುರುಹುಗಳು ಇಲ್ಲಿ ಉತ್ಖನನ ನಡೆಸಿದ ವೇಳೆ ಲಭಿಸಿವೆ.
ಅಮೆರಿಕ, ಕೆನಡಾ ಹಾಗೂ ಭಾರತದ 20 ಸಂಶೋಧಕರ ತಂಡ ಕಳೆದ ಮೂರು ತಿಂಗಳಿನಿಂದ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಯಲು ಆಂಜನೇಯ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ನಡೆಸಿದ ಉತ್ಖನನ ಹಾಗೂ ಸಂಶೋಧನೆ ವೇಳೆ ಈ ಅಂಶ ಕಂಡುಬಂದಿದೆ.
ಉತ್ಖನನ ಹಾಗೂ ಸಂಶೋಧನೆಗಾಗಿ ಈ ತಂಡವು ಇಲ್ಲಿ 271 ಸ್ಥಳಗಳನ್ನು ಗುರುತಿಸಿದೆ. ಗುರುತಿಸಿದ ಸ್ಥಳಗಳಲ್ಲಿ ಭೂಮಿ ಅಗೆದಾಗ 11ರಿಂದ 14ನೇ ಶತಮಾನದಲ್ಲಿ ಜನವಸತಿ ಇತ್ತು ಎಂಬುದು ದೃಢಪಟ್ಟಿದೆ. ಜನರ ಜೀವನ ಮಟ್ಟ, ಆಹಾರ ಪದ್ಧತಿ ಹಾಗೂ ಅವರು ಬಳಸುತ್ತಿದ್ದ ಮನೆಗಳ ಆಕಾರ, ಮಣ್ಣಿನ ಮಡಕೆ ಸೇರಿದಂತೆ ಅನೇಕ ವಸ್ತುಗಳು ಪತ್ತೆಯಾಗಿವೆ. ಹೆಚ್ಚಿನ ಸಂಶೋಧನೆಗಾಗಿ ಅವುಗಳನ್ನು ಸಂಗ್ರಹಿಸಲಾಗಿದೆ ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ.
ಕೇಂದ್ರ ಪುರಾತತ್ವ ಇಲಾಖೆಯ ಅನುಮತಿ ಪಡೆದ ಅಮೆರಿಕದ ಸ್ಕ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ. ಬವೆರ್, ಕೆನಡಾದ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಪೀಟರ್ ಜಿ. ಜೋಹಾನ್ಸನ್ ಹಾಗೂ ದೆಹಲಿಯ ನೊಯಿಡಾ ವಿಶ್ವವಿದ್ಯಾಲಯದ ಹೇಮಂತ್ ಕಡಾಂಬಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ತಂಡ ಈ ಭಾಗದಲ್ಲಿ ಉತ್ಖನನ ಮಾಡಿ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪಳಿಯುಳಿಕೆಗಳನ್ನು ಸಂಗ್ರಹಿಸುತ್ತಿದೆ.
ಅಮೆರಿಕ ಕೆನಡಾ ಭಾರತದ ಸಂಶೋಧಕರ ತಂಡದಿಂದ ಜಂಟಿಯಾಗಿ ಉತ್ಖನನ ಕೈಗೊಳ್ಳಲಾಗಿದೆ. 4 ಸಾವಿರ ವರ್ಷಗಳ ಹಿಂದೆ ಜನವಸತಿ ಇರುವ ಬಗ್ಗೆ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಲಾಗಿದೆಹೇಮಂತ್ ಕಡಾಂಬಿ ಪ್ರಾಧ್ಯಾಪಕ ನೊಯಿಡಾ ವಿಶ್ವವಿದ್ಯಾಲಯ ದೆಹಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.