ADVERTISEMENT

ಆನೆಹೊಸೂರು: 363 ವಿದ್ಯಾರ್ಥಿಗಳಿಗೆ ಒಬ್ಬರೇ ಕಾಯಂ ಶಿಕ್ಷಕ

ಶರಣ ಪ್ಪ ಆನೆಹೊಸೂರು
Published 15 ಮೇ 2025, 5:51 IST
Last Updated 15 ಮೇ 2025, 5:51 IST
ಮುದಗಲ್ ಸಮೀಪದ ಆನೆಹೊಸೂರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ಭೋಜನಾಲಯ ಅನೇಕ ವರ್ಷಗಳಿಂದ ಉದ್ಘಾಟನೆಗೊಂಡಿಲ್ಲ
ಮುದಗಲ್ ಸಮೀಪದ ಆನೆಹೊಸೂರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ಭೋಜನಾಲಯ ಅನೇಕ ವರ್ಷಗಳಿಂದ ಉದ್ಘಾಟನೆಗೊಂಡಿಲ್ಲ   

ಮುದಗಲ್: ಸಮೀಪದ ಆನೆಹೊಸೂರು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರನ್ನೇ ಅವಲಂಬಿಸಿದೆ.

‌70 ವರ್ಷಗಳ ಹಿಂದೆ ಪ್ರಾರಂಭವಾದ ಶಾಲೆಯಲ್ಲಿ ಈ ವರ್ಷ ಒಬ್ಬರೇ ಕಾಯಂ ಶಿಕ್ಷಕರಿದ್ದಾರೆ. 364 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 10 ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕಾಗಿದೆ. ಗ್ರಾಮದಲ್ಲಿ ಎರಡು ಕಡೆ ಶಾಲೆ ನಡೆಯುತ್ತಿದೆ. ಹಳೆ ಶಾಲೆಯಲ್ಲಿ ನಲಿಕಲಿ ತರಗತಿ ನಡೆಯುತ್ತಿವೆ. 4ರಿಂದ 7ನೇ ತರಗತಿ ಹೊಸ ಶಾಲೆಯಲ್ಲಿ ನಡೆಯುತ್ತಿವೆ.

ಕಾಯಂ ಶಿಕ್ಷಕರ ಕೊರತೆ ಇರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆಯ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಪಾಲಕರ ಚಿಂತೆಗೆ ಕಾರಣವಾಗಿದೆ. ಬೇಸಿಗೆ ರಜೆ ಮುಗಿಯುವ ಮುನ್ನವೇ ಕಾಯಂ ಶಿಕ್ಷಕರ ನೇಮಕ ಮಾಡಬೇಕು. ಇಲ್ಲದಿದ್ದರೆ ಒಬ್ಬ ಶಿಕ್ಷಕ ಎರಡು ಕಡೆ ಇರುವ ಶಾಲೆ ನೋಡಿಕೊಳ್ಳಲು, ಶಾಲೆಯ ಕೆಲಸದ ನಿಮಿತ್ತ ಇಲಾಖೆ ಕಚೇರಿಗೆ ಹೋಗುವುದನ್ನು ನಿಭಾಯಿಸಲು ತೊಂದರೆಯಾಗುತ್ತದೆ.

ADVERTISEMENT

ಶಾಲೆ ಅನೇಕ ಮೂಲಸೌಲಭ್ಯಗಳ ಕೊರತೆಯಿಂದಲೂ ಬಳಲುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ ವ್ಯವಸ್ಥೆ ಇಲ್ಲ. ಹೊಸ ಶಾಲೆಯಲ್ಲಿ ಇದ್ದ ಕೊಠಡಿಗಳಲ್ಲಿ ನೆಲ ಹಾಸು ಹಾಳಾಗಿದೆ. ತರಗತಿಗಳು ನಡೆಯುವ ಕೊಠಡಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಗುಣಮಟ್ಟದ ಶೌಚಾಲಯ ಇಲ್ಲ. ನಿರ್ಮಿಸಿದ ರಂಗಮಂದಿರ ಹಾಳಾಗಿದೆ. ಕೆಲ ಕೊಠಡಿಗಳು ಬಿರುಕು ಬಿಟ್ಟಿವೆ. ಮಳೆಗಾಲದಲ್ಲಿ ಕೆಲ ಕೊಠಡಿಗಳು ಸೋರುತ್ತವೆ.

ಹೊಸ ಶಾಲೆಯಲ್ಲಿ ಬಿಸಿಯೂಟದ ಅಡುಗೆ ಕೊಠಡಿ ಇಲ್ಲ. ಶಾಲೆ ಆವರಣದಲ್ಲಿನ ಭೋಜನಾಲಯ ಉದ್ಘಾಟನೆಗೂ ಮುನ್ನವೇ ದುರಸ್ತಿಗೆ ಬಂದಿದೆ. ಮಕ್ಕಳು ಶಾಲೆಯ ಹೊರ ಭಾಗದಲ್ಲಿ ಕುಳಿತು ಊಟ
ಮಾಡುತ್ತಾರೆ.

ರಾಂಪುರ ಏತ ನೀರಾವರಿಗಾಗಿ ಎಳೆದಿರುವ ವಿದ್ಯುತ್‌ ತಂತಿ ಶಾಲೆಯ ಆವರಣದಲ್ಲಿ ಹಾದುಹೋಗಿದೆ.
ಶಾಲೆಗೆ ವಿದ್ಯುತ್ ಸಂಪರ್ಕಕ್ಕೆ ತೆಗೆದುಕೊಂಡ ತಂತಿ ಮೈದಾನದಲ್ಲಿ ಜೋತುಬಿದ್ದಿದೆ. ಶಾಲೆಯ ಮುಖ್ಯದ್ವಾರದ ಬಾಗಿಲು ಹಾಗೂ ಆವರಣದಲ್ಲಿ ಮುಳ್ಳುಕಂಟಿ ಬೆಳೆದಿದೆ. ರಾತ್ರಿ ವೇಳೆ ಶಾಲೆ ಆವರಣ ಮದ್ಯವ್ಯಸನಿಗಳ ಅಡ್ಡೆ
ಆಗಿದೆ.

ಬಾಟಲಿ, ಪ್ಲಾಸ್ಟಿಕ್ ಕಸ, ಸಿಗರೇಟ್ ಪ್ಯಾಕ್‌ ಅಲ್ಲಿಯೇ ಬಿಸಾಡುತ್ತಿದ್ದಾರೆ. ಅಲ್ಲದೇ ಬಾಟಲಿಗಳನ್ನು ಒಡೆದು ಹಾಕುತ್ತಿರುವುದರಿಂದ ಶಾಲೆಗೆ ಬರುವ ಮಕ್ಕಳ ಕಾಲಿಗೆ ಗಾಯಗಳಾಗುವ ಆತಂಕವೂ ಪಾಲಕರನ್ನು ಕಾಡುತ್ತಿದೆ. ಗ್ರಾಮ ಪಂಚಾಯಿತಿ, ಪೊಲೀಸ್‌ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಮುದಗಲ್ ಸಮೀಪದ ಆನೆಹೊಸೂರು ಗ್ರಾಮದ ಪ್ರಾಥಮಿಕ ಶಾಲೆ ಕೊಠಡಿ ಒಳ ಭಾಗಕ್ಕೆ ಹಾಕಿದ ಬಂಡಿಗಳು ಕಿತ್ತಿ ತೆಗ್ಗು ದಿನ್ನಿ ಬಿದ್ದಿವೆ
ಮೈದಾನದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಮದ್ಯವ್ಯಸನಿಗಳ ಹಾವಳಿ ತಪ್ಪಿಸಬೇಕು
ಲಕ್ಷ್ಮಣ ಕತ್ತಿ ಗ್ರಾಮಸ್ಥ
ಶಾಲೆಯಲ್ಲಿದ್ದ ಕಾಯಂ ಶಿಕ್ಷಕರು ವರ್ಗಾವಣೆಯಾಗಿದ್ದರಿಂದ ನಾನೊಬ್ಬನೇ ಕಾಯಂ ಶಿಕ್ಷಕ ಉಳಿದುಕೊಂಡಿದ್ದೇನೆ
ಶರಣಬಸವ ಪ್ರಭಾರ ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.