ADVERTISEMENT

ಅರಕೇರಾ: ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಜನ

ಮಾಂಸ ಮಾರಾಟ ಅಂಗಡಿಗಳ ತ್ಯಾಜ್ಯಕ್ಕೆ ಆಕರ್ಷಿತಗೊಳ್ಳುವ ನಾಯಿಗಳು

ಪ್ರಜಾವಾಣಿ ವಿಶೇಷ
Published 8 ನವೆಂಬರ್ 2025, 6:07 IST
Last Updated 8 ನವೆಂಬರ್ 2025, 6:07 IST
ಅರಕೇರಾ ಪಟ್ಟಣದ ಬಸ್ ನಿಲ್ದಾಣದ ಬಳಿ ಕಂಡುಬಂದ ಬೀದಿ ನಾಯಿಗಳ ಹಿಂಡು
ಅರಕೇರಾ ಪಟ್ಟಣದ ಬಸ್ ನಿಲ್ದಾಣದ ಬಳಿ ಕಂಡುಬಂದ ಬೀದಿ ನಾಯಿಗಳ ಹಿಂಡು   

ಅರಕೇರಾ (ದೇವದುರ್ಗ): ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.

ಪಟ್ಟಣದ 7 ವಾರ್ಡ್‌ಗಳಲ್ಲಿಯೂ ರಾಜಾರೋಷವಾಗಿ ಸಂಚರಿಸುವ ನಾಯಿಗಳು ಮಕ್ಕಳು, ವೃದ್ಧರ ಆದಿಯಾಗಿ ಎಲ್ಲರ ಮೇಲೆ ದಾಳಿ ಮಾಡುತ್ತಿವೆ.

ನಾಯಿಗಳ ದಾಳಿಗೊಳಗಾಗಿ ಪ್ರತಿನಿತ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ADVERTISEMENT

ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಹಲವು ಬಾರಿ ಜನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ವೆಂಕಟೇಶ, ಲಿಂಗಣ್ಣ ನಾಯಕ ಹಾಗೂ ಚಂದ್ರಶೇಖರ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಮಾಂಸದ ಅಂಗಡಿಗಳಿಂದಾಗಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ. ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ಸುರಿಯುತ್ತಾರೆ. ಇದು ನಾಯಿಗಳನ್ನು ಆಕರ್ಷಿಸುತ್ತಿದೆ.

ಮಾಂಸ ಮಾರಾಟ ಅಂಗಡಿಗಳ ಮಾಲೀಕರ ಸಭೆ ಕರೆದು ಎಚ್ಚರಿಕೆ ನೀಡಿದ್ದರೂ ರಾತ್ರಿ ವೇಳೆ ಮೂಟೆಗಳಲ್ಲಿ ತ್ಯಾಜ್ಯ ತಂದು ರಸ್ತೆ, ಬಸ್ ನಿಲ್ದಾಣದ ಬಳಿ, ಚರಂಡಿಯಲ್ಲಿ ಹಾಕುತ್ತಾರೆ. ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

‘ಹಿಂಡು ಹಿಂಡಾಗಿ ಮಲಗುವ ನಾಯಿಗಳು ರಾತ್ರಿಯಲ್ಲಿ ಬೊಗಳುತ್ತವೆ. ರಾತ್ರಿಯೆಲ್ಲಾ ನಿದ್ದೆ ಹತ್ತುವುದಿಲ್ಲ’ ಎಂದು ನಾಗರಿಕರು ಆರೋಪಿಸಿದರು.

‘ಒಂದು ತಿಂಗಳು ಹಿಂದೆ ಬಸ್ ನಿಲ್ದಾಣದ ಬಳಿ ಬಿದಿ ನಾಯಿ ಕಚ್ಚಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಸ್ಥಳೀಯರು ತಮ್ಮ ಮಕ್ಕಳನ್ನು ಹೊರಗಡೆ ಕಳಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಅನುದಾನ ಮೀಸಲಿಟ್ಟು ಸಂತಾನಹರಣ ಮಾಡಬೇಕು’ ಎಂದು ನಿವಾಸಿ ಆನಂದ ಗುಡಿ ಒತ್ತಾಯಿಸಿದರು.

ಬಸ್ ನಿಲ್ದಾಣದ ಹತ್ತಿರ ವಯೋವೃದ್ಧರ ಮೇಲೆ ನಿರಂತರವಾಗಿ ಬೀದಿ ನಾಯಿಗಳು ದಾಳಿ ಮಾಡುತ್ತಿವೆ. ಗ್ರಾಮ ಪಂಚಾಯಿತಿ ವಿಶೇಷ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು
–ಲಿಂಗಣ್ಣ ನಾಯಕ ಹವಾಲ್ದಾರ, ಅಧ್ಯಕ್ಷ ಯುವ ಕಾಂಗ್ರೆಸ್ ಸಮಿತಿ ದೇವದುರ್ಗ ವಿಧಾನಸಭಾ ಕ್ಷೇತ್ರ
ಜಿಲ್ಲಾಧಿಕಾರಿ ಅನುಮತಿ ಪಡೆದು ಪ್ರಾಣಿಗಳ ಸಂತಾನಶಕ್ತಿ ನಿಯಂತ್ರಣ ನಿಯಮ–2001ರ ಅನ್ವಯ ಕ್ರಮ ಕೈಗೊಳ್ಳಬೇಕು
–ಆನಂದ ಗುಡಿ ನಿವಾಸಿ
ಸರ್ವ ಸದಸ್ಯರ ಸಭೆ ನಡೆಸಿ ಜಿಲ್ಲಾಧಿಕಾರಿ ಅನುಮತಿ ಪಡೆದು ಸಂತಾನಹರಣಕ್ಕೆ ಕ್ರಮ ಕೈಗೊಳ್ಳುವೆ
–ವೆಂಕೋಬ ನಾಯಕ, ಪಿಡಿಒ ಅರಕೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.